Header Ads
Header Ads
Header Ads
Breaking News

ಧರ್ಮಸ್ಥಳ ಲಕ್ಷದೀಪೋತ್ಸವ : ಭಾವೈಕ್ಯತೆಯ ಮೌಲ್ಯ ಮನಗಾಣಿಸಿದ ಪಾದಯಾತ್ರೆ

ಅಂದು ಉಜಿರೆ ಎಂದಿನಂತಿರಲಿಲ್ಲ. ಎಲ್ಲಿ ನೋಡಿದರೂ ಕಿಕ್ಕಿರಿದು ನೆರೆದ ಜನಸ್ತೋಮ. ಭಕ್ತಿ ಭಾವದಿಂದ ಮಂಜುನಾಥನನ್ನು ನೆನೆಯುತ್ತಾ, ಧರ್ಮಸ್ಥಳದ ಕಡೆಗೆ ಕಾಲ್ನಡಿಗೆಯಲ್ಲಿ ಮಕ್ಕಳು ಹಿರಿಯರೆನ್ನದೇ ಮುನ್ನಡೆಯುವ ಉತ್ಸಾಹ. ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಏರ್ಪಟ್ಟ ಪಾದಯಾತ್ರೆಯ ಚಿತ್ರಣವಿದು. ಶುಕ್ರವಾರ ಸಂಜೆ ಉಜಿರೆಯಿಂದ ಧರ್ಮಸ್ಥಳದವರೆಗೆ ಈ ಭಕ್ತ ಯಾತ್ರೆಯದ್ದೇ ಸೊಗಸು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಹಲವರು ಧರ್ಮಸ್ಥಳದೆಡೆಗಿನ ಭಕ್ತಿಭಾವದ ನಡಿಗೆಯನ್ನು ಸಂಭ್ರಮಿಸಿದರು. ಈ ಮೂಲಕ ಏಳನೇ ವರ್ಷದ ಪಾದಯಾತ್ರೆಯು ಭಿನ್ನವೆನ್ನಿಸಿತು.
ವಿವಿಧೆಡೆಯಿಂದ ಆಗಮಿಸಿದ ಭಕ್ತರು ವಿವಿಧ ವಲಯಗಳ ಹೆಸರಿನ ತಂಡಗಳೊಂದಿಗೆ ನಡೆಯುತ್ತಿದ್ದರು. ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಚಾರ್ಮಾಡಿ, ಕೊಕ್ಕಡ, ಮಡಂತ್ಯಾರು, ಗುರುವಾಯನಕೆರೆ, ಹೊಸಂಗಡಿ, ವೇಣೂರು, ಅಳದಂಗಡಿ, ನಾರಾವಿ ಮತ್ತು ಕಣಿಯೂರು ವಲಯಗಳ ತಂಡಗಳು ಒಟ್ಟಾಗಿ ಹೆಜ್ಜೆ ಇಟ್ಟವು.
ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಅಧ್ಯಾಪಕೇತರ ನೌಕರರು ಪಾಲ್ಗೊಂಡಿದ್ದರು. ಉಜರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆಯು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಸಮಾರೋಪಗೊಂಡಿತು. ವಿವಿಧೆಡೆಯಿಂದ ಆಗಮಿಸಿದ ಭಕ್ತವೃಂದ ಶಿವಧ್ಯಾನ, ಭಜನೆ ಹಾಡುತ್ತಾ ಹೆಜ್ಜೆಯಿರಿಸಿದರು.
ಕಣ್ಣು ಹಾಯಿಸಿದ ಕಡೆಗೆಲ್ಲಾ ಭಕ್ತರು. ಅಮ್ಮನ ಕೈ ಹಿಡಿದ ಕಂದಮ್ಮ, ತಂದೆಯ ಹೆಗಲೇರಿದ ಬಾಲಕ, ಪಿಸುಗುಡುತ್ತಾ ಮುನ್ನಡೆದ ತರುಣಿಯರು, ದೇಹ ಸ್ಪಂದಿಸದಿದ್ದರೂ ಮಂಜುನಾಥನ ಕಾಣಲು ಮುನ್ನಡೆದ ಹಿರಿಯರು. ಎಲ್ಲರ ಮೊಗದಲ್ಲಿಭಕ್ತಿಯ ಭಾವವೇ ಎದ್ದುಕಾಣುತ್ತಿತ್ತು.ಪಾದಯಾತ್ರೆಯ ವೇಳೆ ಮುಂಜಾಗ್ರತಾ ಕ್ರಮವಾಗಿ ಆಂಬ್ಯುಲೆನ್ಸ್ ವಾಹನಗಳಿದ್ದು, ಆಯಾಸ ಮತ್ತು ಬಾಯಾರಿಕೆಗೆ ತಂಪು ಪಾನೀಯ ಹಾಗೂ ನೀರಿನ ವ್ಯವಸ್ಥೆಯಿತ್ತು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಲಕ್ಷ್ಮಿ ಗ್ರುಪ್ ಇಂಡಸ್ಟ್ರಿಸ್‌ನ ಸ್ವಯಂ ಸೇವಕರು, ಸಾರ್ವಜನಿಕ ಸ್ವಯಂ ಸೇವಕರು ಮತ್ತು ಪೊಲೀಸ್ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು.
ಧರ್ಮಸ್ಥಳದಲ್ಲಿ ಪಾದಯಾತ್ರೆ ಸಮಾರೋಪಗೊಂಡ ನಂತರ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾತುಗಳು ಭಕ್ತವೃಂದದ ಮನಗೆದ್ದವು. ಲಕ್ಷದೀಪೋತ್ಸವದ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ನಡೆದು ಶ್ರೀ ಮಂಜುನಾಥೇಶ್ವರ ಸನ್ನಿಧಿಗೆ ತಲುಪಿಕೊಳ್ಳುವುದನ್ನು ಭಾವೈಕ್ಯತೆಯ ವೈಶಿಷ್ಟ್ಯ ಎಂದು ಅವರು ವಿಶ್ಲೇಷಿಸಿದರು. ಇಡೀ ವರ್ಷದ ಬದುಕಿಗೆ ಬೇಕಾಗುವ ದೈವಿಕ ಶಕ್ತಿಯನ್ನು ಪಡೆಯುವುದಕ್ಕೆ ಈ ಪಾದಯಾತ್ರೆ ನೆರವಾಗುತ್ತದೆ ಎಂದು ಹೇಳಿದ್ದು ಪಾದಯಾತ್ರಿಗಳೊಳಗೆ ಹೊಸ ಹುಮ್ಮಸ್ಸು ಮೂಡಿಸಿತು.

Related posts

Leave a Reply

Your email address will not be published. Required fields are marked *