Header Ads
Header Ads
Breaking News

ಧರ್ಮಸ್ಥಳ ಲಕ್ಷದೀಪೋತ್ಸವ : ಸಾರ್ವಜನಿಕ ಸೇವೆಯೇ ನೈಜ ಧರ್ಮ: ಸುಮಿತ್ರಾ ಮಹಾಜನ್

 ನರನೇ ನಾರಾಯಣ ಎಂದು ಭಾವಿಸಿದರೆ ಪ್ರಾಮಾಣಿಕ ರಾಜಕೀಯ ಮಾಡಬಹುದು ಎಂದು ಲೋಕಸಭೆಯ ನಿಕಟಪೂರ್ವ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು.ಅವರು ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ನಡೆದ 87 ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಭೃಚಾರವಿಲ್ಲದ ರಾಜಕೀಯ ನಡೆಸಲಾಗದು ಎಂಬುದು ತಪ್ಪು ಅಭಿಪ್ರಾಯ. ಕೆಟ್ಟದ್ದನ್ನು ತ್ಯಜಿಸಿ, ಒಳ್ಳೆಯದರ ಜೊತೆ ಗುರುತಿಸಿಕೊಂಡರೆ ಎಲ್ಲ ಕ್ಷೇತ್ರಗಳೂ ಸರಿಯಾಗಿ ಕಾರ್ಯ ನಿರ್ವಹಿಬಹುದು. ಎಲ್ಲ ಧರ್ಮಗಳು ಬೋಧಿಸುವುದೂ ಇದೇ ಎಂದರು. ಭಗವದ್ಗೀತೆಯ ಸಾಲುಗಳನ್ನು ಅವರು ನೆನಪಿಸಿಕೊಂಡರು. ಸ್ವಹಿತ ಕಾರ್ಯಸಾಧನೆ ಬಿಟ್ಟು ಎಲ್ಲರಿಗಾಗಿ ಕೆಲಸ ನಿರ್ವಹಿಸಬೇಕು. ಸಾರ್ವಜನಿಕ ಸೇವೆಯೇ ನಿಜವಾದ ಧರ್ಮ. ಸಮಾಜಕ್ಕಾಗಿ ದುಡಿಯುವವನೇ ನಿಜವಾದ ಸನ್ಯಾಸಿ ಎಂದು ವ್ಯಾಖ್ಯಾನಿಸಿದರು.
ಉತ್ತಮ ಸಂಬಳದ ಕುರಿತು ಯೋಚಿಸುವ ಬದಲು ಉತ್ತಮ ಜೀವನಕ್ಕಾಗಿ ಯೋಚಿಸಬೇಕು. ಹೃದಯದ ಒಳಗೆ ಜ್ಞಾನದ ಬೆಳಕು ಮಿನುಗಬೇಕು ಎಂದರು. ಭಾರತೀಯ ಜೀವನಶೈಲಿ ತರಬೇತುದಾರ, ಇಸ್ಕಾನ್ ನ ಹಿರಿಯ ವಿದ್ವಾಂಸ ಗೌರ್ ಗೋಪಾಲ ದಾಸ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಹಕರಾಗಿ ಬದಲಾಗುತ್ತಿರುವುದನ್ನು ಉಲ್ಲೇಖಿಸಿದ ಅವರು ಬದುಕುವುದು ಮುಖ್ಯ, ಗಳಿಸುವುದಲ್ಲ ಎಂದರು. ದುಬಾರಿ ಮೊತ್ತದ ಗಡಿಯಾರದಿಂದ ಸಮಯ ಹೆಚ್ಚು ಸಿಗುವುದಿಲ್ಲ. ಖುಷಿ ಮತ್ತು ಪ್ರೀತಿಯ ಬದುಕನ್ನು ಆಯ್ದುಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ದ್ವೇವನ್ನು ಶತಮೂರ್ಖನೂ ಮಾಡಬಲ್ಲ.ಆದರೆ ಸಜ್ಜನರು ಮಾತ್ರ ಪ್ರೀತಿಸಬಲ್ಲರು ಎಂಬ ಅವರ ಮಾತುಗಳು ಕರತಾಡನ ಗಿಟ್ಟಿಸಿದವು.ಅವರ ಸಂವಹನ ಶೈಲಿ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸಿತು. ನಾವು ಯಾರಿಂದ ಪ್ರಭಾವಿತರಾಗುತ್ತೇವೆ ಎಂಬುದು ಮುಖ್ಯ. ಸಾಧ್ಯವಾದ ಧನಾತ್ಮಕ ಚಿಂತನೆಯಲ್ಲಿ ತೊಡಗಬೇಕು. ಹುಟ್ಟು ಸಾವಿನ ನಡುವೆ ಎದುರಿಸಬೇಕಾದ ಸವಾಲುಗಳಿಗೆ ಧನಾತ್ಮಕ ಚಿಂತನೆಗಳೇ ಉತ್ತರ ನೀಡುತ್ತವೆ ಎಂದು ಉಚ್ಛರಿಸಿದರು. ನಂತರ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಜೀವನ ಕೌಶಲ ಮತ್ತು ಉದ್ಯಮಶೀಲತೆ ಬೋಧಿಸುವ ಫೋಕಸ್ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಡಿ.ಟಿ.ರಾಮಾನುಜನ್, ಟೈಮ್ಸ್ ಗ್ರುಪ್‌ನ ಸಹಾಯಕ ಪ್ರಬಂಧಕ ಕದ್ರಿ ನವನೀತ್ ಶೆಟ್ಟಿ, ಹಿರಿಯ ಸಾಹಿತಿ ಬೊಳುವಾರು ಮಹಮದ್ ಕುಂಞಿ ಉಪನ್ಯಾಸ ನೀಡಿದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಹೇಮಾವತಿ ಹೆಗ್ಗಡೆ, ಸುರೇಂದ್ರಕುಮಾರ್, ಡಾ.ಎಸ್ .ಪ್ರಭಾಕರ್, ಉಪನ್ಯಾಸಕ ಸುನೀಲ್ ಪಂಡಿತ್ ವಂದಿಸಿದರು.

 ಗುರುಗಣೇಶ ಭಟ್, ಡಬ್ಗುಳಿ

Related posts

Leave a Reply

Your email address will not be published. Required fields are marked *