Header Ads
Breaking News

ನಂದಿಕೂರಿನಲ್ಲಿ ನಡೆಯಿತು ಬಲೇ ಕೆಸರ್‍ಡ್ ಗೊಬ್ಬುಲೆ. ಬಡ ಕುಟುಂಬದ ಮಗುವಿನ ಚಿಕಿತ್ಸೆಗಾಗಿ ಧನ ಸಹಾಯ ಹಸ್ತಾಂತರ.

ನಂದಿಕೂರು ಜವನೆರ್ ನಂದಿಕೂರು ಇವರ ಆಶ್ರಯದಲ್ಲಿ ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಬಲೇ ಕೆಸರ್‍ಡ್ ಗೊಬ್ಬುಲೆ ಎಂಬ ನಾಮದೇಯದಡಿಯಲ್ಲಿ ತುಳುನಾಡ ಪಾರಂಪರಿಕ ಆಟೋಟಗಳನ್ನು ಒಳಗೊಂಡ ಬೃಹತ್ ಕೆಸರುಗದ್ದೆ ಕ್ರೀಡಾಕೂಟ ನಡೆದಿದ್ದು, ಇದೇ ಸಂದರ್ಭ ಬಡ ಕುಟುಂಬದ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಕ್ರೀಡಾ ಕೂಟದ ಉಳಿಕೆ ಮೊತ್ತ ಹತ್ತು ಸಾವಿರ ರೂಪಾಯಿಯನ್ನು ಮಗುವಿನ ಪೋಷಕರಿಗೆ ಹಸ್ತಾಂತರಿಸಲಾಯಿತು.
ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಪ್ರಕೃತಿ ಆರಾಧಕ ಹಿರಿಯರು ಉಳಿಸಿದ ಕೃಷಿ ಭೂಮಿಗೆ ಸೆಂಟ್ಸ್ ಲೆಕ್ಕದಲ್ಲಿ ದರ ಬಂದಾಗ ಮಣ್ಣಿನ ಭಾವನಾತ್ಮಕ ಸಂಬಂಧಗಳು ದೂರವಾದುವು. ತುಳುನಾಡಿನ ಸತ್ಯದ ಮಣ್ಣಿನ ಧರ್ಮ-ಸಂಸ್ಕೃತಿ-ಪರಂಪರೆ ಉಳಿಸುವ ಮೂಲಸ್ಥಾನಗಳು ನಮ್ಮ ಪೂರ್ವಿಕರು ನಮಗೆ ಬಿಟ್ಟುಹೋದ ಬಹುದೊಡ್ಡ ಆಸ್ತಿಯಾಗಿತ್ತು. ಕೃಷಿಯೇ ಬದುಕಾಗಿದ್ದ ಹಿರಿಯರ ಪೂರ್ವ ಸಂಸ್ಕೃತಿಯನ್ನು ಕಾಪಾಡುವ ಹಾಗೂ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಯುವಕರ ಇಂದಿನ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ ಎಂದರು.ಸಭಾ ಕಾರ್ಯಕ್ರಮವನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಮಧ್ವರಾಯ ಭಟ್ ಉದ್ಘಾಟಿಸಿದರು. ಈ ಕ್ರೀಡಾಕೂಟಕ್ಕೆ ಅವಳಿ ಜಿಲ್ಲೆಗಳಿಂದ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಿದ್ದರು, ವಿಜೇತರಿಗೆ ನಗದಿನೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಇದೇ ಸಂದರ್ಭ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಹಿರಿಯ ವಿಟ್ಟು ದೇವಾಡಿಗ, ನಾಟಿ ವೈದ್ಯೆ ರತ್ನಮ್ಮ, ಭಾರತೀಯ ಸೇನೆ ನಿವೃತ್ತ ಯೋಧ ಸುಧಾಕರ ಸಾಲ್ಯಾನ್ ನಿಟ್ಟೆ ಇವರನ್ನು ಸನ್ಮಾನಿಸಲಾಯಿತು.ನಂದಿಕೂರು ಜವನೆರ್ ಸಂಸ್ಥೆಯ ಅಧ್ಯಕ್ಷ ಪ್ರತೀಕ್ ಕೋಟ್ಯಾನ್, ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫುಟಾರ್ಡೊ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ ಶೆಟ್ಟಿ ಪಾದೆಬೆಟ್ಟು, ಕಿರಣ್ ರಾವ್ ಎಲ್ಲೂರು, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಎಲ್.ಶೆಟ್ಟಿ, ಬಳ್ಕುಂಜೆ ಗ್ರಾ.ಪಂ. ಅಧ್ಯಕ್ಷ ದಿನೇಶ್ ಪುತ್ರನ್, ಸದಸ್ಯ ಪ್ರಭಾಕರ ಶೆಟ್ಟಿ ಕರ್ನಿರೆ, ದೇವಸ್ಥಾನ ಅರ್ಚಕ ವೆಂಕಟೇಶ ಪುರಾಣಿಕ್, ಡಾ|ಹರಿಕೃಷ್ಣ ಭಟ್, ಪಲಿಮಾರು ಗ್ರಾ.ಪಂ. ಸದಸ್ಯ ಸೌಮ್ಯಲತ ಶೆಟ್ಟಿ ಚಿಂಕ್ರಿಗುತ್ತು, ಶಿವಪ್ರಸಾದ್ ರಾವ್, ಉಪಸ್ಥಿತರಿದ್ದರು.

Related posts

Leave a Reply