Header Ads
Header Ads
Breaking News

ನಗರಸಭೆಯ ವಿರುದ್ಧ ಬಿಜೆಪಿ ಸದಸ್ಯರ ಪ್ರತಿಭಟನೆ

ಪುತ್ತೂರು: ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಪೀಠದ ಮುಂದೆ ಧರಣಿ ಕುಳಿತು ಪ್ರತಿಭಟಿಸುತ್ತಿದ್ದ ಪುತ್ತೂರು ನಗರಸಭಾ ಬಿಜೆಪಿ ಸದಸ್ಯರು ಸೋಮವಾರ ನಗರಸಭಾ ಕಾರ್ಯಾಲಯದ ಬಾಗಿಲಿನಲ್ಲಿ ಕುಳಿತು ಆಡಳಿತದ ವೈಫಲ್ಯಗಳ ವಿರುದ್ಧ ಧಿಕ್ಕಾರ ಕೂಗಿದರು. ಈ ಮೂಲಕ ಪುತ್ತೂರಿನ ಜನರ ಗಮನ ಸೆಳೆದರು. ನಗರಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವಿವರಿಸಿದರು. ಇಷ್ಟು ಸಮಯ ಕಾಲ ಸಭಾಂಗಣದೊಳಗೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಬಿಜೆಪಿ ಸದಸ್ಯರು ಸೋಮವಾರ ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿದರು. ೧ ತಾಸು ಕಾಲ ನಗರಸಭಾ ಬಿಜೆಪಿ ಸದಸ್ಯರ ಪ್ರತಿಭಟನೆ ನಡೆಯಿತು.
ನಗರಸಭಾ ಮಾಜಿ ಉಪಾಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ, ನಗರಸಭೆಯಲ್ಲಿ ಯಾವುದೇ ಕ್ರೀಯಾ ಯೋಜನೆಯನ್ನು ಸಿದ್ಧಪಡಿಸಲು ಸ್ಥಾಯೀ ಸಮಿತಿ ಬೇಕು. ಸ್ಥಾಯೀ ಸಮಿತಿಗೆ ಸದಸ್ಯರ ಆಯ್ಕೆಯಾದರೂ ಸ್ಥಾಯೀ ಸಮಿತಿ ರಚನೆಗೆ ಧೈರ್ಯವಿಲ್ಲದೆ ಬಹುಮತವಿಲ್ಲದ ಪುತ್ತೂರು ನಗರಸಭಾ ಆಡಳಿತ ಹೇಡಿತನ ಪ್ರದರ್ಶಿಸಿದೆ ಎಂದು ಟೀಕಿಸಿದರು. ನಗರಸಭೆಯ ಆಡಳಿತ ವೈಫಲ್ಯಗಳ ವಿರುದ್ಧ ಸಂಸದರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಯಿತು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ನಗರಸಭೆಯಲ್ಲಿ ಬಹುಮತ ಹೊಂದಿರುವ ಜವಾಬ್ದಾರಿಯುತ ಪಕ್ಷ ಬಿಜೆಪಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅದಕ್ಷ, ಅಸಮರ್ಥ ಮತ್ತು ಕಾನೂನು ಬಾಹಿರ ಆಡಳಿತದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಲಿದೆ ಎಂದರು.
ನಗರಸಭಾ ಉಪಾಧ್ಯಕ್ಷ ಕೆ. ವಿಶ್ವನಾಥ ಗೌಡ ಮಾತನಾಡಿ, ನಗರಸಭಾ ಆಡಳಿತವು ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪುತ್ತೂರಿನ ನಾಗರಿಕರ ಸಲಹೆಗಳಿಗೆ ಮನ್ನಣೆ ನೀಡುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ಅಲ್ಪಸಂಖ್ಯಾ ಸದಸ್ಯ ಬಲದ ಪುತ್ತೂರು ನಗರಸಭಾ ಆಡಳಿತ ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು. ನಗರಸಭಾ ಆಡಳಿತ ಸದಸ್ಯರು ಅಭಿವೃದ್ಧಿಯ ವಿಚಾರದಲ್ಲಿ ಪತ್ರಿಕೆಗಳಲ್ಲಿ ಫೊಟೋ ಹಾಕಿಸಲು ಸೀಮಿತರಾಗಿದ್ದಾರೆ. ಪುತ್ತೂರಿನ ಅಭಿವೃದ್ಧಿಯ ಕುರಿತು ಇವರಿಗೆ ಯಾವುದೇ ನೈಜ ಕಾಳಜಿ ಇಲ್ಲ. ಸ್ಥಾಯೀ ಸಮಿತಿ ರಚನೆ ಮಾಡಿದರೆ ನಗರಸಭಾ ಆಡಳಿತದ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ರಚನೆ ಮಾಡಿಲ್ಲ ಎಂದು ಹೇಳಿದರು.
ನಗರಸಭಾ ಕಚೇರಿಯಲ್ಲಿ ಆಕ್ರೋಶಿತ ನಾಗರಿಕನ ರಕ್ತ ಬಿದ್ದರೂ ಆಡಳಿತ ಎಚ್ಚೆತ್ತುಕೊಂಡಿಲ್ಲ. ನಗರಸಭಾ ಆಡಳಿತ ತನ್ನ ಜನವಿರೋಧಿ ಮತ್ತು ಕಾನೂನು ವಿರೋಧಿ ಆಡಳಿತವನ್ನು ಏಕವ್ಯಕ್ತಿ ನಿರ್ದೇಶನದಂತೆ ಮಾಡುತ್ತಿದೆ. ನಗರಸಭೆಗೆ ಅಧ್ಯಕ್ಷರಿದ್ದರೂ ಬ್ಯಾಕ್‌ಸೀಟ್ ಡ್ರೈವರ್ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ನಗರಸಭಾ ಹಿರಿಯ ಬಿಜೆಪಿ ಸದಸ್ಯ ರಾಜೇಶ್ ಬನ್ನೂರು ಸಾಮಾಜಿಕ ಜಾಲತಾಣಗಳಲ್ಲಿ ಅಭಿವೃದ್ಧಿಯ ಕುರಿತು ನಕಲಿ ಮಾಹಿತಿ ನೀಡುತ್ತಿರುವ ನಗರಸಭೆಯ ಕೃತ್ಯವನ್ನು ಮೂವರು ತಥಾಕಥಿತ ಸಾಮಾಜಿಕ ಕಾರ್ಯಕರ್ತರು ಬೆಂಬಲಿಸುತ್ತಿದ್ದಾರೆ. ನಗರಸಭಾ ಆಡಳಿತ ಸದಸ್ಯರಿಗೂ ಕೂಡಾ ಬ್ಯಾಕ್‌ಸೀಟ್ ಡ್ರೈವರ್‌ನ ವರ್ತನೆಯಿಂದ ಬೇಸತ್ತು ಹೋಗಿದೆ ಎಂದು ಆರೋಪಿಸಿದರು.
ಮಳೆಗಾಲ ಆರಂಭವಾದರೂ ಕೂಡಾ ನಗರದ ಚರಂಡಿಗಳ ಹೂಳೆತ್ತಿಸುವ ಕೆಲಸ ಮಾಡಲಿಲ್ಲ. ನಗರಸಭಾ ಆಡಳಿತ ಮೂಲಭೂತ ಸೌಕರ್ಯಗಳ ಕುರಿತು ಕಣ್ಣುಮುಚ್ಚಿ ಕುಳಿತಿದೆ. ಇಲ್ಲಿ ನಗರಸಭಾ ಕಚೇರಿ ವ್ಯಕ್ತಿಯೊಬ್ಬರ ಸ್ವಂತ ಬಳಕೆಯ ಕಚೇರಿಯಾಗಿದೆ. ಪೌರಾಯುಕ್ತರ ಸಹಿತ ನಗರಸಭಾ ಸಿಬ್ಬಂದಿ ಬ್ಯಾಕ್‌ಸೀಟ್ ಡ್ರೈವರ್‌ನ ನಿಯಂತ್ರಣ ಪ್ರಯತ್ನದಿಂದ ಮನನೊಂದಿದ್ದಾರೆ ಎಂದು ಬನ್ನೂರು ಹೇಳಿದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ರಾಮಣ್ಣ ಗೌಡ ಹಲಂಗ, ಬಾಲಚಂದ್ರ, ಹರೀಶ್ ನಾಕ್ ಮಾಲ್ತೋಟ್ಟು, ಪುರಸಭಾ ಮಾಜಿ ಉಪಾಧ್ಯಕ್ಷ ವಿನಯ ಭಂಡಾರಿ, ರಮೇಶ್ ರೈ ಮೊಟ್ಟೆತ್ತಡ್ಕ ಮಾತನಾಡಿದರು. ನಗರಸಭಾ ಬಿಜೆಪಿ ಸದಸ್ಯರಾದ ಚಂದ್ರಸಿಂಗ್, ಕೆ.ಟಿ. ವನಿತಾ, ಸುಂದರ ಪೂಜಾರಿ ಬಡಾವು, ಯಶೋಧಾ ಹರೀಶ್ ಪೂಜಾರಿ, ಶ್ಯಾಮಲಾ ಬಪ್ಪಳಿಗೆ ಧರಣಿಯಲ್ಲಿ ಪಾಲ್ಗೊಂಡರು.

Related posts

Leave a Reply