Header Ads
Header Ads
Breaking News

ನಗರ ನಕ್ಸಲರನ್ನು ಸುಮ್ನೆ ಬಿಟ್ಟು ಪತ್ರಕರ್ತರನ್ನು ಬಂಧಿಸ್ತೀರಾ?:ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ

ಕುಂದಾಪುರ: ಮತ್ತೊಮ್ಮೆ ಅಘೋಚರ ತುರ್ತು ಪರಿಸ್ಥಿತಿ ಹೇರಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಬಗ್ಗೆ ಭಾಷಣ ಮಾಡುತ್ತಾ ಟೀಕಿಸಿದ್ದಕ್ಕೆ ಈ ಸರಕಾರ ಪತ್ರಕರ್ತರನ್ನು ಬಂಧಿಸಿದ್ದು ನೋಡಿದರೆ ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದ ಆತಂಕ ವ್ಯಕ್ತವಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನದ ವಿರುದ್ದ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಮೂಲಕ ಮಾತನಾಡಿದ ಅವರು ಮೈತ್ರಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಅಂದಿನ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳಲ್ಲಿ ದೇವೇಗೌಡರು, ಕುಮಾರಸ್ವಾಮಿ ಮತ್ತು ನಾವೆಲ್ಲಾ ಇಂದಿರಾ ಗಾಂಧಿಯವರ ಸರಕಾರ ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಹರಣ ಮಾಡಿದೆ ಎಂದು ವಿರೋಧಿಸಿದ್ದೇವೆ. ಆದರೆ ಇದೀಗ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅದನ್ನೇ ಪುನರಾವರ್ತನೆ ಮಾಡುತ್ತಿದೆ ಎಂದು ಕೋಟ ಮೃತ್ರಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ನಗರ ನಕ್ಸಲರು ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ವಿಧಾನಸೌಧದ ಆಸುಪಾಸು ತಿರುಗುವರನ್ನು ಬಂಧಿಸದೇ ಸುಮ್ಮನಿರುವ ನೀವುಗಳು ಟಿಪ್ಪು ಜಯಂತಿಯನ್ನು ವಿರೋಧಿಸಿದ ಕಾರಣಕ್ಕೆ ಸಂತೋಷ್ ತಮ್ಮಯ್ಯನನ್ನು ಬಂಧಿಸಿದ್ದು ಸರಿಯೇ? ನನ್ನ ಸಮೇತ ಬಿಜೆಪಿಯ 104ಶಾಸಕರು, 18 ವಿಧಾನ ಪರಿಷತ್ ಸದಸ್ಯರು, 17 ಮಂದಿ ಸಂಸದರ ಸಮೇತ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಕೂಡ ಟಿಪ್ಪು ಜಯಂತಿ ವಿರೋಧಿಸಿದ್ದರೂ ಕೂಡ ನಮ್ಮನ್ನ್ಯಾಕೆ ಬಂಧಿಸಿಲ್ಲ? ಅಧಿಕಾರದ ಮೂಲಕ ಪತ್ರಿಕಾ, ವಾಕ್, ವ್ಯಕ್ತಿ ಸ್ವಾತಂತ್ರ್ಯ ಕಸಿಯಲು ಹೊರಟ ನಿಮ್ಮ ಸರಕಾರ ತುರ್ತು ಪರಿಸ್ಥಿತಿಯನ್ನು ಮರಳಿ ತರುತ್ತಿದೆ. ಕೂಡಲೇ ಸಂತೋಷ್ ತಮ್ಮಯ್ಯ ಮೇಲಿನ ಪ್ರಕರಣ ವಾಪಾಸ್ ತೆಗೆಯಬೇಕು. ಇಲ್ಲವಾದಲ್ಲಿ ಬಿಜೆಪಿ ಸದನದ ಒಳಗೆ ಮತ್ತೆ ಹೊರಗೆ ಆ ಪತ್ರಕರ್ತನ ಪರ ಹೋರಾಟ ಮುಂದುವರೆಸಲಿದೆ ಎಂದು ಸಿಎಂ ಕುಮಾರಸ್ವಾಮಿಯವರಿಗೆ ಕೋಟ ಎಚ್ಚರಿಕೆ ನೀಡಿದ್ದಾರೆ.

Related posts

Leave a Reply