Header Ads
Header Ads
Breaking News

ನಡುದಾರಿಯಲ್ಲಿ ಕೂಲಿ ಕಾರ್ಮಿಕರೊಬ್ಬರು ಮೃತ್ಯು. ಏಣಿ ಕೊಂಡೊಯ್ಯಿತ್ತಿದ್ದ ವೇಳೆ ನಡೆದ ದುರ್ಘಟನೆ. ಪುತ್ತೂರಿನ ನೆಟ್ಟಣಿಗೆ ಮುಡ್ನೂರಿನಲ್ಲಿ ಘಟನೆ.

ಪುತ್ತೂರು : ತೋಟದ ನಡುವಿನ ದಾರಿಯಾಗಿ ಅಲ್ಯೂಮಿನಿಯಂ ಏಣಿಯನ್ನು ಕೊಂಡೊಯ್ಯುತ್ತಿದ್ದ ಕೂಲಿಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಹಿರಿಯಾಣ ಎಂಬಲ್ಲಿ ಬುಧವಾರ ಸಂಭವಿಸಿದೆ. ಕುಸಿದು ಬಿದ್ದು ಮೃತಪಟ್ಟಿರಬಹುದೆಂದು ಊಹಿಸಲಾಗಿದ್ದರೂ ಘಟನಾ ಸ್ಥಳದಲ್ಲಿ ವಿದ್ಯುತ್ ಎಚ್.ಟಿ.ಲೈನ್ ತಂತಿ ಹಾದು ಹೋಗಿರುವುದರಿಂದ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಈ ದರ್ಘಟನೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಹಿರಿಯಾಣ ನಿವಾಸಿ ರಾಮ ಮೂಲ್ಯ (54) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ರಾಮ ಮೂಲ್ಯ ಅವರು ಕೆಲ ದಿನಗಳ ಹಿಂದೆ ತಮ್ಮ ಮನೆಯ ವಠಾರದಲ್ಲಿದ್ದ ಮರಗಳ ಕೊಂಬೆಗಳನ್ನು ಕಡಿಯಲೆಂದು ನೆರೆಯ ನಿವಾಸಿಯಾದ ಚಂದ್ರ ಶೇಖರ್ ರೈ ಎಂಬವರಿಂದ ಅಲ್ಯೂಮಿನಿಯಂ ಏಣಿಯನ್ನು ಪಡೆದುಕೊಂಡು ಹೋಗಿದ್ದರು. ಚಂದ್ರಶೇಖರ್ ರೈ ಅವರ ಅಡಿಕೆ ತೋಟಕ್ಕೆ ಮೈಲು ತುತ್ತು ಸಿಂಪರಣೆ ಮಾಡಲಿದ್ದ ಹಿನ್ನಲೆಯಲ್ಲಿ ಅವರು ಬುಧವಾರ ಬೆಳಿಗ್ಗೆ ರಾಮಮೂಲ್ಯ ಅವರಿಗೆ ಕರೆ ಮಾಡಿ ಏಣಿಯನ್ನು ತಂದು ಕೊಡುವಂತೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ರಾಮ ಮೂಲ್ಯ ಅವರು ಏಣಿಯನ್ನು ಚಂದ್ರಶೇಖರ್ ಅವರ ತೋಟಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೆಳಿಗ್ಗೆ 9 ಗಂಟೆಯ ವೇಳೆಗೆ ತನ್ನ ಮನೆಯಿಂದ ಏಣಿ ಹಿಡಿದುಕೊಂಡು ಹೊರಟಿದ್ದ ರಾಮಮೂಲ್ಯ ಅವರು ಚಂದ್ರಶೇಖರ್ ಅವರ ಮನೆಗೆ ಮುಟ್ಟಿರಲಿಲ್ಲ. ಈ ನಡುವೆ ಚಂದ್ರಶೇಖರ್ ಅವರು ಕರೆ ಮಾಡಿದರೂ ರಾಮ ಮೂಲ್ಯ ಕರೆ ಸ್ವೀಕರಿಸಿರಲಿಲ್ಲ. 10.30ರ ವೇಳೆಗೆ ಚಂದ್ರಶೇಖರ್ ಅವರ ಬಾವ ಅದೇ ದಾರಿಯಾಗಿ ಬರುತ್ತಿದ್ದ ವೇಳೆ ದಾರಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದ ಸ್ಥಿತಿಯಲ್ಲಿ ರಾಮ ಮೂಲ್ಯ ಅವರ ಮೃತದೇಹ ಪತ್ತೆಯಾಗಿತ್ತು. ರಾಮ ಮೂಲ್ಯ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತ ಪಟ್ಟಿರುವ ಸಾಧ್ಯತೆ ಒಂದೆಡೆಯಾದರೆ, ಇನ್ನೊಂದೆಡೆ ಮೃತದೇಹ ಕಂಡು ಬಂದಿದ್ದ ಸ್ಥಳದಲ್ಲಿ ಮೇಲ್ಗಡೆ ವಿದ್ಯುತ್ ಎಚ್‌ಟಿ ಲೈನ್ ಹಾದು ಹೋಗಿರುವುದರಿಂದ ರಾಮ ಮೂಲ್ಯ ಅವರು ಎತ್ತಿಕೊಂಡು ಹೋಗುತ್ತಿದ್ದ ಅಲ್ಯೂಮಿನಿಯಂ ಏಣಿ ಎಚ್‌ಟಿ ವಿದ್ಯುತ್ ಲೈನಿಗೆ ಸ್ಪರ್ಶಿಸಿ ಈ ದುರ್ಘಟನೆ ನಡೆದಿರುವ ಸಾಧ್ಯತೆಯೂ ಇದೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿದು ಬರಲಿದೆ.
ಘಟನೆಯ ಕುರಿತು ಮೃತರ ಪುತ್ರ ಲೋಹಿತ್ ಅವರು ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ. ಈ ಎರಡೂ ಸಂಶಯಗಳನ್ನು ಅವರು ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ ಜಾನಕಿ, ಪುತ್ರ ಲೋಹಿತ್ ಹಾಗೂ ಪುತ್ರಿ ಗಾಯತ್ರಿ ಅವರನ್ನು ಅಗಲಿದ್ದಾರೆ.

Related posts

Leave a Reply