Header Ads
Header Ads
Breaking News

ನರಕ ಸದೃಶ ಪುತ್ತೂರು ಖಾಸಗಿ ಬಸ್ಸು ನಿಲ್ದಾಣ, ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ


ಪುತ್ತೂರಿನಲ್ಲೂ ನಗರಸಭಾ ಖಾಸಗಿ ಬಸ್ಸು ನಿಲ್ದಾಣ ಇದೆ. ನೆಲ್ಲಿಕಟ್ಟೆಯಲ್ಲಿರುವ ಈ ಖಾಸಗಿ ಬಸ್ಸು ನಿಲ್ದಾಣವನ್ನು ಎಡಿಬಿ ಅನುದಾನದಲ್ಲಿ ನಿರ್ಮಾಣಗೊಳಿಸಿ ಅಂದಿನ ಪುರಸಭೆ ಇಂದಿನ ನಗರಸಭೆಗೆ ಹಸ್ತಾಂತರಿಸಲಾಗಿತ್ತು. ಈ ಬಸ್ಸು ನಿಲ್ದಾಣವನ್ನು ಗಮನಿಸಿದರೆ ಇದು ನಗರಸಭೆಯ ಆಸ್ತಿ ಎಂದು ಯಾರೂ ಹೇಳಲಾರರು. ಕಾರಣ ಇಲ್ಲಿನ ಕೆಟ್ಟ ವ್ಯವಸ್ಥೆಗಳು.
ಖಾಸಗಿ ಬಸ್ಸುಗಳ ಮತ್ತು ಪ್ರಯಾಣಿಕರ ಹಿತದೃಷ್ಠಿಯಿಂದ ಮತ್ತು ಅನುಕೂಲಕ್ಕಾಗಿ ಈ ಬಸ್ಸು ನಿಲ್ದಾಣವನ್ನು ನಿರ್ಮಾಣಗೊಳಿಸಲಾಗಿದೆ. ಬಸ್ಸು ನಿಲ್ದಾಣದಲ್ಲಿ ಅಂಗಡಿ ಮಳಿಗೆ, ಹೊಟೇಲುಗಳನ್ನು ನಿರ್ಮಿಸಲಾಗಿದೆ. ಶೌಚಾಲಯವನ್ನು ಕೂಡಾ ನಿರ್ಮಿಸಲಾಗಿತ್ತು. ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ಸುಗಳ ನಿಲುಗಡೆಗೆ ಪ್ರತ್ಯೇಕ ನಿಲ್ದಾಣ ಇರಬೇಕೆಂಬ ನಿಯಮದಂತೆ ಈ ಖಾಸಗಿ ಬಸ್ಸು ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಖಾಸಗಿ ಬಸ್ಸು ನಿಲ್ದಾಣದ ನಿರ್ವಹಣೆ ಕುರಿತಂತೆ ನಗರಸಭಾ ಆಡಳಿತ ಮಾತ್ರ ಎಷ್ಟು ಕಾಳಜಿ ವಹಿಸಿದೆ ಎಂಬುದಕ್ಕೆ ಈ ಬಸ್ಸು ನಿಲ್ದಾಣ ಸಾಕ್ಷಿಯಾಗಿದೆ. ಇದರ ನಿರ್ವಹಣೆಯ ಕುರಿತಂತೆ ನಗರಸಭಾ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಪುತ್ತೂರು ನಗರಸಭಾ ಖಾಸಗಿ ಬಸ್ಸು ನಿಲ್ದಾಣ ಗಾಂಜಾ ದಂಧೆಕೋರರ ಅಡ್ಡೆಯಾಗಿದೆ. ಇಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪ್ರಯಾಣಿಕರಿಗಿಂತಲೂ ಹೆಚ್ಚು ಇಲ್ಲಿಗೆ ಮಾದಕದ್ರವ್ಯ ವ್ಯಸನಿಗಳು ಬರುತ್ತಾರೆ. ಮಾದಕದ್ರವ್ಯ ವ್ಯಸನಿಗಳ ಹಾವಳಿಯಿಂದ ಬಸ್ಸು ನಿಲ್ದಾಣದ ಪರಿಸರವೇ ಅಸಹ್ಯವೆನಿಸಿದೆ. ಇದರ ಜೊತೆಗೆ ಖಾಸಗಿ ಬಸ್ಸು ನಿಲ್ದಾಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಸಂಜೆಯ ಬಳಿಕ ಖಾಸಗಿ ಬಸ್ಸುಗಳ ಓಡಾಟ ಇಲ್ಲದ ಕಾರಣ ಮತ್ತು ಬಸ್ಸು ನಿಲ್ದಾಣಕ್ಕೆ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಇದು ಅಕ್ರಮಗಳ ಬೀಡಾಗಿದೆ.
ಖಾಸಗಿ ಬಸ್ಸು ನಿಲ್ದಾಣದಲ್ಲಿ ರಾತ್ರಿಯ ವೇಳೆ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲ. ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಈ ಅವ್ಯವಸ್ಥೆ ಉಂಟಾಗಿದೆ. ಈ ಭಾಗದ ನಗರಸಭಾ ಸದಸ್ಯರು ಬಸ್ಸು ನಿಲ್ದಾಣದ ಅವ್ಯವಸ್ಥೆಗಳ ಕುರಿತು ನಗರಸಭೆಯ ಮೇಲೆ ಒತ್ತಡ ತಂದರೂ ನಗರಸಭಾ ಆಡಳಿತ ಪೂರಕ ಸ್ಪಂದನ ನೀಡುತ್ತಿಲ್ಲ. ಬಸ್ಸು ನಿಲ್ದಾಣದ ಅವ್ಯವಸ್ಥೆಗಳ ಕುರಿತು ಗಮನ ಹರಿಸದ ನಗರಸಭೆಯ ನಿಲುವು ಅಕ್ಷಮ್ಯವಾಗಿದೆ.
ಬಸ್ಸು ನಿಲ್ದಾಣದ ಪ್ರಯಾಣಿಕರ ವಿಶ್ರಾಂತಿ ಕೊಠಡಿ ಬೀದಿ ನಾಯಿಗಳ ತಾಣವಾಗಿದೆ. ಬೀದಿ ನಾಯಿಗಳಿಗೆ ಹೆದರಿ ಪ್ರಯಾಣಿಕರು ವಿಶ್ರಾಂತಿ ಕೊಠಡಿಯನ್ನು ಪ್ರವೇಶಿಸಲು ಹೆದರುತ್ತಿದ್ದಾರೆ. ಬೀದಿ ನಾಯಿಗಳು ಕೆಲವು ಬಾರಿ ಪ್ರಯಾಣಿಕರನ್ನು ಅಟ್ಟಿಸಿಕೊಂಡು ಹೋದ ಘಟನೆಗಳು ನಡೆದಿವೆ. ಈ ಕಾರಣದಿಂದ ಪ್ರಯಾಣಿಕರು ಬಸ್ಸು ನಿಲ್ದಾಣಕ್ಕೆ ಹೋಗದೆ ಬಸ್ಸು ನಿಲ್ದಾಣದ ಸಂಪರ್ಕ ರಸ್ತೆಯಲ್ಲಿ ಬಸ್ಸಿಗಾಗಿ ಕಾದು ನಿಲ್ಲುತ್ತಾರೆ. ಮತ್ತು ಅಲ್ಲಿಂದಲೇ ಬಸ್ಸು ಹತ್ತುತ್ತಾರೆ. ಬಸ್ಸು ನಿಲ್ದಾಣದ ಪರಿಸರದಲ್ಲಿ ಹೊರ ಊರುಗಳಿಂದ ಇಲ್ಲಿಗೆ ಬಂದ ಕಾರ್ಮಿಕರು ಕುಡಿದು ಗಲಾಟೆ ಮಾಡುತ್ತಾರೆ.

Related posts

Leave a Reply