Header Ads
Header Ads
Breaking News

ನಲ್ವತ್ತೆರಡು ಹಿರಿ ಜೋಡಿಗೆ ಸನ್ಮಾನ, ಮಗನಿಗೆ ಮದುವೆ, ಅಂಬಡೆಮಾರು ಗಂಗಾಧರ ಪೂಜಾರಿ, ಚಂದ್ರಾವತಿ ಮದುವೆ ನೆನಪಿನ ವಿಶೇಷ


ಅಲ್ಲಿ ಹಿರಿಯ ೪೨ ಜೋಡಿಗಳಿಗೆ ಮತ್ತೆ ಮದುವೆಯ ವಾತಾವರಣ, ವರ್ಷಗಳಿಂದ ಜೊತೆಯಾಗಿ ಸಿಹಿಕಹಿಯನ್ನು ಉಂಡು ಸೊಗಸಾದ ಜೀವನ ಸಾಗಿಸಿದ ದಂಪತಿಗೆ ಮತ್ತೆ ಮದುವೆ ಸಂಭ್ರಮವನ್ನು ನೆನಪು ಮಾಡಿತು. ಜಾತಿಬೇಧವಿಲ್ಲದೆ ಹಿಂದು, ಮುಸ್ಲಿಂ, ಕ್ರೈಸ್ತ ದಂಪತಿಯ ಇಂತಹ ವಾತಾವರಣಕ್ಕೆ ಕಜೆಕಾರು ಅಂಬಡೆಮಾರು ಗಂಗಾಧರ ಪೂಜಾರಿ ಮತ್ತು ಚಂದ್ರಾವತಿ ದಂಪತಿಗಳ ವೈವಾಹಿಕ ಜೀವನದ ೩೭ನೇ ವರ್ಷದ ಸಂಭ್ರಮದ ವೇದಿಕೆ ಸಾಕ್ಷಿಯಾಯಿತು.
ದೂರದ ಕಾರಿಂಜೇಶ್ವರ ದೇವಸ್ಥಾನದಿಂದ ೪೨ ಹಿರಿಯ ದಂಪತಿಗಳನ್ನು ಪ್ರತ್ಯೇಕ ಕಾರುಗಳಲ್ಲಿ ಬಂಟ್ವಾಳ ಕಜೆಕಾರು ದೇವಸ್ಥಾನದ ವಠಾರದಲ್ಲಿರುವ ವೇದಿಕೆಯತ್ತ ತರಲಾಯಿತು. ಕುಂಕುಮ, ಹೂವನ್ನು ನೀಡಿ ವೇದಿಕೆಯತ್ತ ಸ್ವಾಗತಿಸಿದ ಆಯೋಜಕರು ಎಲ್ಲಾ ದಂಪತಿಗೆ ಜತೆಯಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಸವಿ ಸಮ್ಮಿಲನ ಕಾರ್ಯಕ್ರಮಕ್ಕೆ ಬಡಗಕಜೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ವಜ್ರ ಪೂಜಾರಿ ಚಾಲನೆ ನೀಡಿದರು. ದಯಾನಂದ್ ಕತ್ತಲ್‌ಸಾರ್ ಮತ್ತು ಉಪನ್ಯಾಸಕ ಕೇಶವ ಪೂಜಾರಿ ದಾಂಪತ್ಯ ಜೀವನದ ಕುರಿತ ಮಾತುಗಳನ್ನಾಡಿದರು. ಹಿಂದಿನ ಸಂಬಂಧಗಳು ಹಾಗೂ ಪ್ರಸ್ತುತ ಸಂಬಂಧಗಳಲ್ಲಿನ ವ್ಯತ್ಯಾಸ ಹಾಗೂ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳ ಕುರಿತು ಖೇದ ವ್ಯಕ್ತಪಡಿಸಿದರು. ದಾಂಪತ್ಯ ಜೀವನಗಳು ಹಳಸುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಯುವಸಮುದಾಯಗಳಿಗೆ ಉತ್ತಮ ಸಂದೇಶವನ್ನು ಒದಗಿಸಲು ಸಾಧ್ಯ ಎಂದರು.
ವೈವಾಹಿಕ ಜೀವನದ ೩೭ನೇ ವರ್ಷದ ಸಂಭ್ರಮ ಅದ್ಧೂರಿ ಊಟ, ಆಡಂಭರಕ್ಕೆ ಸೀಮಿತವಾಗಿರಬಾರದು, ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನಾದರೂ ನೀಡುವ ಉದ್ದೇಶದಿಂದ ಸವಿ ಸಮ್ಮಿಲನ ಕಾರ್ಯಕ್ರಮ ಯೋಜಿಸಲಾಗಿದೆ. ಅದಕ್ಕಾಗಿ ಕಜೆಕಾರು ಅಂಬಡೆಮಾರು ನಿವಾಸಿ ಗಂಗಾಧರ ಪೂಜಾರಿ ಅವರ ಇಚ್ಛೆಯಂತೆ ಕಾರ್ಯಕ್ರಮಕ್ಕೆ ಪತ್ನಿ ಚಂದ್ರಾವತಿ ಪೂಜಾರಿ ಸಮ್ಮತಿಸಿದ್ದರು. ಆ ಬಳಿಕ ಗ್ರಾಮದಲ್ಲಿನ ೪೨ ದಂಪತಿಯ ಕುಟುಂಬಕ್ಕೆ ತಿಂಗಳ ಅವಧಿಯಲ್ಲಿ ಮೂರು ಬಾರಿ ಭೇಟಿ ನೀಡಿ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆಸಿದ್ದರು. ಪ್ರಥಮವಾಗಿ ಕಾರ್ಯಕ್ರಮದ ವಿಚಾರ ತಿಳಿಸಿದರೆ, ಎರಡನೇಯದಾಗಿ ಪ್ರತಿ ದಂಪತಿಯ ಭಾವಚಿತ್ರ ತೆಗೆಯಲು ಛಾಯಗ್ರಾಹಕರೊಂದಿಗೆ ೪೨ ಮನೆಗಳಿಗೆ ತೆರಳಿದ್ದರು. ಕಡೇಯದಾಗಿ ಎಲ್ಲರಿಗೂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಜತೆಗೆ ಅದೇ ವೇದಿಕೆಯಲ್ಲಿ ನಡೆಯಲಿರುವ ತಮ್ಮ ಮೂರನೇಯ ಮಗನ ವಿವಾಹದ ಆಮಂತ್ರಣವನ್ನು ನೀಡಲು ಮೂರು ಬಾರಿ ಗ್ರಾಮದ ಸುತ್ತ ಹಲವು ಕಿಮೀ ಸುತ್ತಿದವರು.
ಆಸ್ತಿಯಲ್ಲಿ ಶ್ರೀಮಂತರಲ್ಲದಿದ್ದರೂ ಸಾಮಾಜಿಕವಾಗಿ ತನ್ನ ಚಟುವಟಿಕೆಗಳಿಂದ ಕಜೆಕಾರುಗುತ್ತು ಸುಬ್ಬ ಪೂಜಾರಿ ಅಂಬಡೆಮಾರು ಮತ್ತು ಇರಂತೊಟ್ಟು ಸರೋಜಿನಿ ದಂಪತಿಯ ಎರಡನೇ ಪುತ್ರ ಗಂಗಾಧರ ಪೂಜಾರಿ ಶ್ರೀಮಂತರು. ಕೃಷಿಕ, ಕಂಬಳದ ಕೋಣದ ಓಟಗಾರರು, ನಾಟಕ ಕಲಾವಿದ ಹೀಗೆ ಸಕಲ ಕಾರ್‍ಯಗಳಲ್ಲಿ ತೊಡಗಿಸಿಕೊಂಡಿರುವ ಗಂಗಾಧರ್ ಪೂಜಾರಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರೂ ಹೌದು. ತನ್ನಲ್ಲಿ ಹಣವಿಲ್ಲದಿದ್ದರೂ ಬರುವ ಆದಾಯದಲ್ಲಿ ಕಿಂಚಿತ್ತು ಉಳಿಸಿಕೊಂಡು ಬಂದವರು ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ರೂಪಾಯಿ ಒಂದು ಸಾವಿರದಿಂದ ಲಕ್ಷ ರೂಪಾಯಿಗಳವರೆಗೂ ಧನ ಸಹಾಯ ನೀಡಿರುವ ಉದಾಹರಣೆಗಳು ಗ್ರಾಮದಲ್ಲಿ ಸಾಕಷ್ಟಿವೆ. ಚಪ್ಪಲಿಯೇ ಧರಿಸದೆ ಬರಿಕಾಲಲ್ಲಿ ನಡೆದುಕೊಂಡೇ ಊರನ್ನು ಸುತ್ತುವ ಇವರ ಪ್ರತಿ ಸೇವೆಯಲ್ಲಿಯೂ ಪತ್ನಿಯೂ ಸಾಥ್ ನೀಡುತ್ತಿದ್ದಾರೆ.
ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ನಡೆದ ಸವಿ ಸಮ್ಮಿಲನ ಕಾರ್ಯಕ್ರಮದ ಕೊನೆಯಲ್ಲಿ ೪೨ ದಂಪತಿಯನ್ನು ವೇದಿಕೆಯಲ್ಲಿ ಕುಳ್ಳಿರಿಸಿ, ಅವರ ಕೌಟುಂಬಿಕ ವಿವರ, ಸಾಧನೆಗಳು, ಮಕ್ಕಳ ಸಾಧನೆಗಳ ಪರಿಚಯವನ್ನು ನೀಡಿ ಎಲ್ಲರನ್ನೂ ಸನ್ಮಾನಿಸಿ ಗೌರವಿಸುವ ಮೂಲಕ ಅವರ ಹಲವು ವರ್ಷಗಳ ದಾಂಪತ್ಯ ಜೀವನಕ್ಕೆ ಶುಭಹಾರೈಸಲಾಯಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಕೂಡಾ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಭೂರಿ ಭೋಜನದಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲಿ ಹೆತ್ತವರ ವೈವಾಹಿಕ ಜೀವನದ ಸಂಭ್ರಮವಾದರೆ, ಅದೇ ವೇದಿಕೆಯಲ್ಲಿ ಮೂರನೇಯ ಪುತ್ರನ ವಿವಾಹ ಸಮಾರಂಭವೂ ನಡೆಯಿತು. ಗುರುರಾಜ್ ಪೂಜಾರಿ ಅಂಬಡೆಮಾರು ಮತ್ತು ಯೋಗೀತಾ ಇವರು ಇದೇ ವೇದಿಕೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ಸರಳ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರು. ಅವರನ್ನು ಬಂಧು ಮಿತ್ರರು, ಸ್ನೇಹಿತರು ಹಾಗೂ ಹಿತೈಷಿಗಳು ಈ ವೇಳೆ ಶುಭಹಾರೈಸಿದರು.
ಶಾರದಮ್ಮ ಮತ್ತು ನಾರಾಯಣ ಅಡಿಗ, ಯಶೋಧಾ ಮತ್ತು ಕೆ. ಬಟ್ಯಪ್ಪ ಪೂಜಾರಿ ಬಲ್ನಾಡು, ವೇದಾವತಿ ಮತ್ತು ಸಂಜೀವ ಪೂಜಾರಿ ಕೇರ್ಯ, ವಾರಿಜ ಮತ್ತು ಮೋನಪ್ಪ ಪೂಜಾರಿ, ಬೀಫಾತುಮ್ಮ ಮತ್ತು ಅಬ್ದುಲ್ಲ, ದೇವತಿ ಮತ್ತು ಮೋಹನ್ ಪೂಜಾರಿ, ಫ್ಲೋರಿನ್ ಡಿಸೋಜಾ ಮತ್ತು ಲಿಲ್ವೆಸ್ಟರ್ ಡಿಸೋಜ, ವಸಂತಿ ಮತ್ತು ಡೀಕಯ್ಯ ಬಂಗೇರ, ಗುಲಾಬಿ ಮತ್ತು ಸಂಕಪ್ಪ ಪೂಜಾರಿ, ಯಶೊದಾ ಮತ್ತು ಸದಾಶಿವ ಆಚಾರ್ಯ, ವಿನೋದ ಮತ್ತು ವಿಶ್ವನಾಥ ಪೂಜಾರಿ ಕುತ್ತಾಡಿ, ದೇವತಿ ಮತ್ತು ಅಣ್ಣಿಪೂಜಾರಿ, ಪದ್ಮಾವತಿ ಮತ್ತು ಪದ್ಮನಾಭ ಪಾದೆ, ನಾಗಮ್ಮ ಮತ್ತು ನಾರಾಯಣ ಅಡಿಗ, ಸುಜಾತ ಮತ್ತು ಪದ್ಮನಾಭ ನಾಯಕ್, ರಾಮಕ್ಕು ಮತ್ತು ಶೀನಪ್ಪ ಪೂಜಾರಿ ಪಟ್ರಾಡಿ, ಗುಲಾಬಿ ಮತ್ತು ಅಚ್ಯುತ ಪುಜಾರಿ ಹೊಸಮನೆ, ಸರೋಜಿನಿ ಮತ್ತು ಆನಂದ ಪೂಜಾರಿ ಪೆರಂಪಾಡಿಗುತ್ತು, ಲೀಲಾವತಿ ಮತ್ತು ಚಂದ್ರಶೇಖರ್ ಪಂಡಿತ್ ನಿಡ್ವಾಲ್, ಕಮಲ ಮತ್ತು ಪದ್ಮ ನಾಯ್ಕ ಕನಿಮಜಲು, ರಾಮಕ್ಕ ಮತ್ತು ಮೋಂಟ ಪರವ, ಶಕುಂತಳಾ ಮತ್ತು ಕಾಂತಪ್ಪ ಭಂಡಾರಿ, ಸರಸ್ವತಿ ಮತ್ತು ತಿಮ್ಮಪ್ಪ ಬಂಗೇರ, ರತ್ನಾವತಿ ಮತ್ತು ವಿಶ್ವನಾಥ ಪೂಜಾರಿ, ತುಂಗಮ್ಮ ಮತ್ತು ಕೃಷ್ಣಪ್ಪ ಪೂಜಾರಿ, ಸುನಂದ ಮತ್ತು ಸತೀಶ್ ಬಂಗೇರ ಕಜೆಕಾರು, ಚೇತನ ಮತ್ತು ಪುರುಷೋತ್ತಮ, ನಳಿನಿ ಮತ್ತು ಎಂ. ನಾರಾಯಣ ಮೇರಡ್ಕ, ವಿಮಲ ಮತ್ತು ನಾರಾಯಣ.ಎ, ಹರಿಣಾಕ್ಷಿ ಮತ್ತು ರಮೇಶ್ ಪೂಜಾರಿ ಕುಡುಮೇರು, ಡೀಕಮ್ಮ ಮತ್ತು ಸೋಮಯ್ಯ ಮೂಲ್ಯ, ಜಯಂತಿ ಮತ್ತು ದಿವಾಕರ ದಾಸ್ ಕಾವಳಕಟ್ಟೆ, ವಿಜಯ ಶೆಟ್ಟಿ ಮತ್ತು ಜಯಶೆಟ್ಟಿ ಕಕ್ಕೆಪದವು, ಸುಖಾ ರೈ ಮತ್ತು ಸತೀಶ್ ರೈ, ಭವಾನಿ ಮತ್ತು ಕೃಷ್ಣಪ್ಪ ಪೂಜಾರಿ ಕೊಡ್ಲಕ್ಕೆ ಶಶಿಕಲಾ ಮತ್ತು ಗೋಪಾಲಕೃಷ್ಣ ಪೂಜಾರಿ, ಚಂದ್ರಾವತಿ ಮತ್ತು ಹರಿಶ್ಚಂದ್ರ ಪೂಜಾರಿ ಕನಪಾಡಿಬೆಟ್ಟು, ನೇತ್ರಾವತಿ ಮತ್ತು ಕೇಶವ ಪೂಜಾರಿ, ರೂಪಾವತಿ ಮತ್ತು ಕೊರಗಪ್ಪ.ಕೆ, ರೇವತಿ ಮತ್ತು ಪುರುಷೋತ್ತಮ ಪೂಜಾರಿ ಮಡ್ಯ ಹಾಗೂ ವಿಶಾಲಾಕ್ಷಿ ಮತ್ತು ವಸಂತ ಮಡಿವಾಳ ದಂಪತಿಗಳಿಗೆ ವಿಶಿಷ್ಟ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Related posts

Leave a Reply