Header Ads
Header Ads
Breaking News

ನಾಗರಿಕರ ಮನೆಗೆ ತಾಗಿಯೇ ಅಗೆದ ಚರಂಡಿ: ಅಪಾಯಕಾರಿ ಸ್ಥಿತಿಯಲ್ಲಿ ಹಿರಿಯ ಜೀವಗಳು

ಬಂಟ್ವಾಳ: ಆ ಮನೆಯಲ್ಲಿರುವುದು ಇಬ್ಬರು ವೃದ್ದರೂ ಮಾತ್ರ. ಮಕ್ಕಳೆಲ್ಲರೂ ವೃತ್ತಿ ನಿಮಿತ್ತ ಹೊರ ಭಾಗಗಳಲಿದ್ದಾರೆ. ತಾವಾಯ್ತು, ತಮ್ಮ ಕೆಲಸ ಆಯ್ತು ಎಂದು ತಮ್ಮ ಪಾಡಿಗಿದ್ದ ಆ ಹಿರಿಯ ಜೀವಗಳಿಗೆ ಬಂಟ್ವಾಳ ಪುರಸಭೆಯ ಅಭಿವೃದ್ದಿ ಕಾರ್ಯ ನೆಮ್ಮದಿ ಕೆಡಿಸಿದೆ.ಚರಂಡಿ ನಿರ್ಮಿಸಲೆಂದು ಮನೆ ಮುಂದೆ ಅಪಾಯಕಾರಿಯಾಗಿ ತೋಡಿದ ಹೊಂಡದಿಂದಾಗಿ ಈ ಹಿರಿಯರು ಮನೆಯಿಂದ ಹೊರ ಬರದಂತೆ ಮಾಡಿದೆ!

ಬಂಟ್ವಾಳ ಪುರಸಭೆಯ ವತಿಯಿಂದ ಇಲ್ಲಿನ ಕೈಕಂಬ ಪರಿಸರದ ಪರ್ಲಿಯಾ ಬಳಿ ಸುಮಾರು ೧೬೦ ಮೀಟರ್ ಉದ್ದದ ಕಾಂಕ್ರೀಟಿಕೃತ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಚರಂಡಿಗಾಗಿ ಇಲ್ಲಿನ ಹಿರಿಯ ನಾಗರೀಕರಾದ ಶ್ಯಾಂ ಸುಂದರ್ ಹಾಗೂ ಚಂದ್ರಕಲಾ ದಂಪತಿ ಮನೆಯ ಗೇಟಿಗೆ ತಾಗಿಕೊಂಡೆ ಹೊಂಡ ಅಗೆಯಲಾಗಿದೆ. ಮನೆಯ ಹೊರಗೆ ಸಂಪರ್ಕಕ್ಕಿದ್ದ ಕಲ್ಲಿನ ಚಪ್ಪಡಿಗಳನ್ನು ತೆರವುಗೊಳಿಸಿ ಕೊಂಡೊಯ್ದ ಪರಿಣಾಮ ಈ ವೃದ್ದರು ತಮ್ಮ ದಿನನಿತ್ಯದ ವಸ್ತುಗಳ ಖರೀದಿಗೆ ಗೇಟಿನಿಂದ ಹೊರ ಬಾರದ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಬುಧವಾರ ಇವರು ಮಂಗಳೂರಿಗೆ ತರೆಳಿದ್ದ ಸಂದರ್ಭ ಏಕಾಏಕಿ ಚರಂಡಿ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಮರುದಿನ ಮಂಗಳೂರಿನಿಂದ ವಾಪಸ್ಸು ಮನೆಗೆ ಬಂದಾಗ ಮನೆಯ ಮುಂದೆ ಹೊಂಡ ನಿರ್ಮಾಣಗೊಂಡು ಒಳ ಪ್ರವೇಶಿಸಲು ಹರಸಾಹಸ ಪಡಬೇಕಾಯಿತು ಎನ್ನುವುದು ಹಿರಿಯ ಜೀವಗಳ ಆರೋಪ. ದಿನನಿತ್ಯದ ಸಾಮಾಗ್ರಿಗಳಾದ ಹಾಲು ಮತ್ತಿತರ ವಸ್ತುಗಳನ್ನು ಮನೆಗೆ ತರಲು ಸಾಧ್ಯವಾಗದೇ ಯಾವಾಗ ಕಾಮಗಾರಿ ಆರಂಭಗೊಳ್ಳುತ್ತದೆ ಎಂದು ಕಾಯುವ ದಯಾನೀಯ ಸ್ಥಿತಿಯನ್ನು ಸ್ಥಳೀಯಾಡಳಿತ ನಿರ್ಮಿಸಿದೆ. ಇದೀಗ ಸಣ್ಣ ಹಲಗೆಯೊಂದನ್ನು ಕಾರ್ಮಿಕರು ಇಟ್ಟಿದ್ದು ಅದರಲ್ಲಿ ನಡೆಯುವುದು ಇನ್ನೂ ಅಪಾಯಕಾರಿಯಾಗಿದೆ.
ಮನೆ ಮುಂದೆ ಚರಂಡಿ ನಿರ್ಮಿಸುವ ಮೊದಲು ಮನೆಮಂದಿಯ ಗಮನಕ್ಕೆ ತರುವುದು ಅಥವಾ ಅದಕ್ಕೆ ಬೇಕಾರ ಪೂರಕ ವ್ಯವಸ್ಥೆ ಕಲ್ಪಿಸದೇ ನಿರ್ಲಕ್ಷ ವಹಿಸಿದ ಪರಿಣಾಮ ಇಬ್ಬರು ಹರಿಯರು ಗೃಹಬಂಧನಕ್ಕೊಳಗಾಗುವ ಸ್ಥಿತಿಗೆ ಸ್ಥಳೀಯರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.