Header Ads
Header Ads
Breaking News

ನಾಟಿ ಕಾರ್‍ಯದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು ಕುತ್ತಾರಿನ ತಿಮಾರು ಗದ್ದೆಯಲ್ಲಿ ಭತ್ತದ ನಾಟಿ ಆಶ್ರಮದ ನಿವಾಸಿಗಳಿಗೆಂದೇ ಬೆಳೆಯುವ ಭತ್ತದ ಕೃಷಿ

 

ಉಳ್ಳಾಲ: ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನೆಡುವುದರ ಮೂಲಕ ನಾಟಿ ಕಾರ್‍ಯದಲ್ಲಿ ತೊಡಗುತ್ತಿದ್ದಾರೆ. ಆದರೆ ಇಲ್ಲೊಂದು ಖಾಸಗಿ ಶಾಲೆಯ ವಿದ್ಯಾರ್ಥಿಗಳು ನೇಜಿ ನೆಡುವುದು ಮಾತ್ರವಲ್ಲದೇ , ಅಲ್ಲಿ ಬೆಳೆದ ಅಕ್ಕಿಯನ್ನು ಆಶ್ರಮ ವಾಸಿಗಳಿಗೆ ನೀಡಲೆಂದೇ ಬೆಳೆಸಿ, ಹುಲ್ಲನ್ನು ಗೋವುಗಳ ಪೋಷಣೆಗೆ ನೀಡುವ ಉದ್ದೇಶದೊಂದಿಗೆ ಭತ್ತ ಬೆಳೆಸುವ ಕಾಯಕಕ್ಕೆ ಕುತ್ತಾರು ಪ್ರದೇಶದ ಮುನ್ನೂರು ಗ್ರಾಮದ ಭಂಡಾರಬೈಲು ಎಂಬಲ್ಲಿನ ಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನದ ಎದುರಿನ ತಿಮಾರು ಗದ್ದೆಯಲ್ಲಿ ಮುನ್ನುಡಿ ಹಾಕಿದ್ದಾರೆ.

ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸುಮಾರು ೧೦೦ ವಿದ್ಯಾರ್ಥಿಗಳ ತಂಡ ಗದ್ದೆ ಕೆಲಸದಲ್ಲಿ ತೊಡಗಿಕೊಂಡರು. ಹೈಸ್ಕೂಲ್ ವಿದ್ಯಾರ್ಥಿಗಳು ಸೇರಿಕೊಂಡು ದೊಡ್ಡದಾದ ಒಂದು ಗದ್ದೆಗೆ ಇಳಿದು ನಾಟಿ ಕಾರ್‍ಯದಲ್ಲಿ ತೊಡಗಿಕೊಂಡರು. ಖಾಸಗಿ ಜಾಮೀನಾದರೂ ಬೆಳೆಯುವ ಅಕ್ಕಿ ಆಶ್ರಮ ವಾಸಿಗಳಿಗೆ ಹಾಗೂ ಹುಲ್ಲು ಜಾನುವಾರಿಗಳಿಗೆ ನೀಡಲಿದೆ ಅನ್ನುವ ಶಾಲಾ ಮುಖ್ಯಸ್ಥರ ಉದ್ದೇಶವನ್ನು ತಿಳಿದುಕೊಂಡಿದ್ದ ವಿದ್ಯಾರ್ಥಿಗಳು ಯೂನಿಫಾರಂಗಳಲ್ಲಿ ಕೆಸರಾದರೂ ಹುರುಪಿನೊಂದಿಗೆ ನಾಟಿ ಕಾರ್‍ಯದಲ್ಲಿ ತೊಡಗಿಕೊಂಡರು. ಗದ್ದೆ ದೊಡ್ಡದಾಗಿದ್ದರೂ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಮಧ್ಯಾಹ್ನದ ವೇಳೆ ನಾಟಿ ಕಾರ್‍ಯವನ್ನು ನಡೆಸಿ ಮುಗಿಸಿದ್ದರು. ಕೃಷಿಕರು ಹಾಗೂ ಗದ್ದೆ ಕೆಲಸದಲ್ಲಿ ತೊಡಗುವ ಕಾರ್ಮಿಕರು ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನದಂತೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರು.

ನಗರ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದರಿಂದ ಕೃಷಿ ಚಟುವಟಿಕೆಯನ್ನು ನೋಡಿದವರು ಕಡಿಮೆಯಿದ್ದರು. ಗದ್ದೆಗೆ ಇಳಿಯುತ್ತಿದ್ದಂತೆ ವಿಚಿತ್ರ ಅನುಭವ ಪಡೆದುಕೊಂಡ ವಿದ್ಯಾರ್ಥಿಗಳು ಕೃಷಿ ಕೂಲಿ ಕಾರ್ಮಿಕರ ಮಾರ್ಗದರ್ಶನದಿಂದ ಭತ್ತ ಬೆಳೆಯುವ ಬಗ್ಗೆ ತಿಳಿದುಕೊಂಡರು. ಊಟ ಮಾಡಲು ಇಷ್ಟು ಕಷ್ಟವಿದೆ ಎಂಬುದು ಇದೀಗ ನಡೆಸಿದ ಗದ್ದೆ ಕೆಲಸದಿಂದ ಗೊತ್ತಾಗಿದೆ. ಇದರಿಂದ ಒಂದು ಅನ್ನದ ಬೆಲೆಯೂ ಗೊತ್ತಾಗಿದೆ. ರೈತರು ದೇಶದ ಬೆನ್ನೆಲುಬು ಎಂಬ ಮಾತು ಮಾತ್ರ ಕೇಳುತ್ತಿದ್ದೆವು. ಆದರೆ ನಿಜವಾಗಿಯೂ ಆ ಶಬ್ದಗಳಿಗೆ ಎಷ್ಟು ಮಹತ್ವ ಇದೆ ಎಂಬುದು ಗದ್ದೆ ಕೆಲಸದಿಂದ ತಿಳಿದುಬಂತು ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. ಕೃಷಿಕನ ಪುತ್ರನಾಗಿದ್ದುಕೊಂಡು ಸಾಮಾಜಿಕ , ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು, ಶಾಲಾ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಖುದ್ದಾಗಿ ನಾಟಿ ಮಾಡಿ, ವಿದ್ಯಾರ್ಥಿಗಳಿಗೂ ಅರಿವು ಮೂಡಿಸಿದರು.

ಶಾಲಾ ವಿದ್ಯಾರ್ಥಿಗಳಲ್ಲಿ ಕೃಷಿ ಕುರಿತ ಜಾಗೃತಿ ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ನಡೆಸಿರುವ ಇದೊಂದು ವಿಭಿನ್ನ ಪ್ರಯತ್ನ . ದಿ.ರಾಮಯ್ಯ ನಾಯ್ಕ್ ಅವರಿಗೆ ಸೇರಿದ ಭಂಡಾರ ಬೈಲಿನಲ್ಲಿರುವ ತಿಮಾರು ಗದ್ದೆಯಲ್ಲಿ ವಿದ್ಯಾ ರತ್ನಾ ಆಂಗ್ಲ ಮಾಧ್ಯಮದ ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ
ಹಡಿಲು ಬಿದ್ದ ಗದ್ದೆಯನ್ನು ಉಳುಮೆ ನಡೆಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಕೇವಲ ನಾಟಿ ಮಾಡುವುದು ಮಾತ್ರವಲ್ಲದೆ ಅದು ಬೆಳೆದು ಭತ್ತದ ಕಠಾವನ್ನು ವಿದ್ಯಾರ್ಥಿಗಳಿಂದಲೇ ಕೆಲ ತಿಂಗಳಲ್ಲಿ ಮಾಡಿಸಲಿದ್ದೇವೆ. ಆನಂತರ ಅದರಲ್ಲಿ ಸಂಗ್ರಹಣೆಯಾದ ಹುಲ್ಲನ್ನು ವಿದ್ಯಾರ್ಥಿಗಳಿಂದಲೇ ಜೋಡಿಸಿಡುವ ಕೆಲಸವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜತೆಯಾಗಿ ಮಾಡಲಿದ್ದೇವೆ. ಮತ್ತೆ ಅವರೆಡನ್ನೂ ಜಾನುವಾರುಗಳ ಪೋಷಣೆಗೆ ಪಜೀರು ಗೋವನಿತಾಶ್ರಯ ಹಾಗೂ ಬೆಳೆದ ಅಕ್ಕಿಯನ್ನು ಆಶ್ರಮದವರಿಗೆ ಉಚಿತವಾಗಿ ನೀಡುವ ಯೋಜನೆ ರೂಪಿಸಿದ್ದೇವೆ ಎಂದು ರತ್ನ ಎಜ್ಯುಕೇಷನ್ ಟ್ರಸ್ಟಿನ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ.

ಗದ್ದೆಯಲ್ಲಿ ನೆಜಿ ನೆಡುವುದು ಹಾಗೂ ಭತ್ತವನ್ನು ಕಟಾವು ಮಾಡುವ ಬಗ್ಗೆ ಯಾವುದೇ ರೀತಿಯ ಅನುಭವ ತಿಳಿದಿಲ್ಲ. ಇದೊಂದು ವಿಶೇಷ ಅನುಭವ. ಉರಿ ಬಿಸಿಲಿನಲ್ಲಿ ನಿಂತು ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿಯುವ ರೈತನ ಪರಿಶ್ರಮ ಇದೀಗ ಅರ್ಥವಾಗುತ್ತಿದೆ.

ಊಟ ಹೆಚ್ಚಾಯಿತೆಂದು ಅನ್ನವನ್ನು ಬಿಸಾಡುತ್ತೇವೆ. ಆದರೆ ಆ ಅನ್ನದ ಹಿಂದಿರುವ ರೈತನ ಕೆಲಸದ ಶ್ರಮ ಹಾಗೂ ಅದರ ಬೆಲೆಯನ್ನು ಇದೀಗ ವಿದ್ಯಾಥಿಗಳಾದ ನಾವು ಅರ್ಥ ಮಾಡಿಕೊಂಡಿದ್ದೇವೆ. ಇದು ಮೊದಲ ಅನುಭವ. ಮುಂದೆ ಇನ್ನಷ್ಟು ಕೆಲಸವನ್ನು ನೆರವೇರಿಸಿ ಅಕ್ಕಿ ಬೆಳೆಸುವ ಸಂಪೂರ್ಣ ಜ್ಞಾನವನ್ನು ಗಳಿಸಲಿದ್ದೇವೆ.
ರೈತರ ಬಗ್ಗೆ ಹಾಗೂ ಅವರ ಬೆವರಿನ ಪರಿಶ್ರಮದ ಬಗ್ಗೆ ಪಠ್ಯದಲ್ಲಿ ಮಾತ್ರ ತಿಳಿದಿದ್ದೇವು. ಆದರೆ ಇದೀಗ ಸ್ವತಃ ನಾವೇ ಗದ್ದೆಗಿಳಿದು ಭತ್ತವನ್ನು ನಾಟಿ ಮಾಡಿದ ಅನುಭವ ನಿಜಕ್ಕೂ ಅದ್ಭುತವೆನಿಸುತ್ತಿದೆ. ವಿದ್ಯಾರ್ಥಿಗಳಾದ ಅನಮಗೆ ಪಠ್ಯಪುಸ್ತಕದ ಹೊರತಾಗಿ ರೈತರ ಕಷ್ಟವನ್ನು ಮನವರಿಕೆ ಮಾಡಿದ ಸಂಸ್ಥೆಗೆ ಧನ್ಯವಾದಗಳು
ವರದಿ: ಆರೀಪ್ ಉಳ್ಳಾಲ

Related posts

Leave a Reply