Header Ads
Breaking News

ನಾಪತ್ತೆಯಾಗಿದ್ದ ಕೊರೊನಾ ಶಂಕಿತ ವ್ಯಕ್ತಿ ವಿಟ್ಲದಲ್ಲಿ ಪತ್ತೆ; ರಾತ್ರಿಯಿಡಿ ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ

ವಿಟ್ಲ: ಮಂಗಳೂರು ವಿಮಾನ ನಿಲ್ದಾಣದಿಂದ ವೆಲ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದ ಕೊರೊನಾ ಶಂಕಿತ ವ್ಯಕ್ತಿಯೊಬ್ಬ ವಿಟ್ಲದ ಪಳಿಕೆ ಸಮೀಪದ ರಂಗ ಮಜಲು ಎಂಬಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದ್ದು, ಸೋಮವಾರ ರಾತ್ರಿ ಆರೋಗ್ಯ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕಾಗಮಿಸಿ ಬಂಟ್ವಾಳ ಆಸ್ಪತ್ರೆಗೆ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ದುಬೈನಿಂದ ಆಗಮಿಸಿದ ಉಳ್ಳಾಲ ಮೂಲದ ಮಹಮ್ಮದ್ ಅಜರುದ್ದೀನ್ (33) ಅವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಸಿ ಜ್ವರದ ಹಿನ್ನಲೆಯಲ್ಲಿ ಮಂಗಳೂರು ಕೊರೊನಾ ಶಂಕೆಯ ಮೇಲೆ ಮಂಗಳೂರು ವೆಲ್ಲಾಕ್ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ಸೋಮವಾರ ಬೆಳಗ್ಗಿನ ಜಾವ ಅಲ್ಲಿಂದ ಹೊರ ಬಂದ ವ್ಯಕ್ತಿ ಮಧ್ಯಾಹ್ನದ ಸಮಯ ಬಂಟ್ವಾಳ ತಾಲೂಕು ವಿಟ್ಲದ ಪಳಿಕೆ ರಂಗರಮಜಲು ಎಂಬಲ್ಲಿರುವ ಪತ್ನಿಯ ಮನೆಗೆ ಆಗಮಿಸಿದ್ದಾರೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸುವಂತೆ ಮಾಡಿತು.

ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ತೆರಳಿ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ಕೊಟ್ಟಿದ್ದು, ಸ್ಥಳದಲ್ಲಿ ಸಿಬ್ಬಂದಿ ಹೇಮಾ ಅವರನ್ನು ನಿಯೋಜಿಸಿದರು. ಬಂಟ್ವಾಳ ದಂಡಾಧಿಕಾರಿಗಳಾದ ರಶ್ಮಿ ಎಸ್. ಆರ್., ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಬೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಂಡರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಪಾಸಿಟಿವ್ ಫಲಿತಾಂಶ ಬಂದಿತ್ತು ಎನ್ನಲಾಗಿದೆ. ಇದುವೇ ಈ ಘಟನೆಗೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಮಂಗಳೂರಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದು, ಜನರಲ್ಲಿ ಆತಂಕ ದೂರವಾಗಿತ್ತು. ಇದೀಗ ಪತ್ತೆಯಾದ ವ್ಯಕ್ತಿಯ ಹೆಚ್ಚಿನ ತಪಾಸಣೆ ಬಳಿಕ ನೈಜಾಂಶ ಹೊರಬೀಳಲಿದೆ.

ಕಂದಾಯ ಇಲಾಖೆಯ ಪ್ರಭಾರ ಕಂದಾಯ ನಿರೀಕ್ಷಕ ರಾಮ ಕೆ., ಗ್ರಾಮ ಕರಣಿಕರಾದ ಮಂಜುನಾಥ ಕೆ. ಎಚ್., ಗ್ರಾಮ ಸಹಾಯಕರಾದ ಗಿರೀಶ್, ಲಿಂಗಪ್ಪ ಗೌಡ, ಗಣೇಶ್ ಪ್ರಭು, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಸುಜಾತ, ಜೀವನ್, ಪ್ರಶಾಂತ್, ದೀಪಾ, ಗೀತಾ, ಉಮಾ, ವೀರಮ್ಮ ಮತ್ತಿತ್ತರರು ಸ್ಥಳದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *