Header Ads
Header Ads
Breaking News

ನಾಳೆ ರಾಜ್ಯ ಬಜೆಟ್ ಮಂಡನೆ:ಹಲವಾರು ಜನಪ್ರಿಯ ಘೋಷಣೆ ಸಾಧ್ಯತೆ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ ಮಂಡಿಸುತ್ತಿರುವ ಬಜೆಟ್‌ನಲ್ಲಿ ಶಿಕ್ಷಣ, ಕೃಷಿ, ಆರೋಗ್ಯ, ಗ್ರಾಮೀಣಾಭಿವೃದ್ದಿ, ನೀರಾವರಿ ಕ್ಷೇತ್ರಗಳಿಗೆ ಸಿಂಹಪಾಲು ದೊರೆಯುತ್ತಿದ್ದು, ಹಲವಾರು ಜನಪ್ರಿಯ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ.
ಹಣಕಾಸು ಸಚಿವರೂ ಆಗಿರುವ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದಲ್ಲಿ ಮಂಡಿಸುತ್ತಿರುವ 2ನೇ ಬಜೆಟ್ ಇದಾಗಿದ್ದು, ಕೃಷಿಕರಿಗೆ ಹೆಚ್ಚಿನ ಪಾಲು ನೀಡಲಾಗುತ್ತಿದೆ.
ಕಳೆದ 8 ತಿಂಗಳ ಹಿಂದೆ ಬಜೆಟ್ ಮಂಡಿಸಿದ್ದ ಕುಮಾರಸ್ವಾಮಿಯವರು ಸಾಲಮನ್ನಾ ಯೋಜನೆಯನ್ನು ಘೋಷಿಸಿದ್ದರು. ಆದರೆ ಆ ವೇಳೆ ಅನುದಾನ ನಿಗದಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಆಂತರಿಕ ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ಇತರ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಇಸ್ರೇಲ್ ತಂತ್ರಜ್ಞಾನ ಬಳಸುವುದು ಕುಮಾರಸ್ವಾಮಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ಆ ಬಗ್ಗೆ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ರಚನೆಯಾಗಿದೆ.
ಕೃಷಿ ವರ್ಗಕ್ಕೆ ವಿಶೇಷವಾಗಿ ವಿಮಾ ಸೌಲಭ್ಯವನ್ನು ನೀಡಲು ಕುಮಾರಸ್ವಾಮಿ ಮುಂದಾಗಿದ್ದು, ಫಸಲ್ ಭೀಮಾ ಯೋಜನೆ ರೈತರಿಗೆ ಸರಿಯಾಗಿ ತಲುಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ವಿಶೇಷ ವಿಮಾ ಯೋಜನೆಯನ್ನು ಸಿದ್ಧಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.ಪೊಲೀಸ್ ಸಿಬ್ಬಂದಿಗಳ ವೇತನ ಪರಿಷ್ಕರಣೆಯಂತಹ ಮಹತ್ವದ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರ ಭಾಗ್ಯದಂತಹ ಹಿಂದಿನ ಸರ್ಕಾರದ ಯೋಜನೆಗಳಿಗೆ ಇನ್ನಷ್ಟು ಅನುದಾನ ಒದಗಿಸುವ ಮೂಲಕ ಕೃಷಿ ವಲಯವನ್ನು ಬಲಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಜೆಟ್ ಪೂರ್ವ ತಯಾರಿಯಲ್ಲಿ ಕಾಂಗ್ರೆಸ್‌ನಿಂದ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ನಿರಂತರವಾಗಿ ತೊಡಗಿಸಿಕೊಂಡಿದ್ದರು. ನಾಳೆ ಮಂಡನೆಯಾಗುವ ಬಜೆಟ್ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್‌ನ ಪ್ರಣಾಳಿಕೆ ಆಧಾರಿತ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಅವಲಂಬಿಸಿರುತ್ತದೆ ಎಂಬ ಮುನ್ಸೂಚನೆ ನೀಡಲಾಗಿದೆ.

Related posts

Leave a Reply