Header Ads
Header Ads
Breaking News

ನಿಟ್ಟೆ ವಾಕ್ ಶ್ರವಣ ಶಿಕ್ಷಣ ಸಂಸ್ಥೆ ಎಂಟನೇ ಪದವಿ ಪ್ರದಾನ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಮುಂದಾಳತ್ವ, ಸೇವಾ ಮನೋಭಾವನೆ ಮೂಡಿಸುವಲ್ಲಿ ಪಡೆದ ಶಿಕ್ಷಣಕ್ಕೊಂಡು ಗರಿಯಾಗಿರುವ ಪದವಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ. ಕೆ. ಭೈರಪ್ಪ ಹೇಳಿದರು.

ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ನಿಟ್ಟೆ ವಿವಿಯ ಅಧೀನ ಸಂಸ್ಥೆ ಪಾನೀರು ಕ್ಯಾಂಪಸ್ ನಲ್ಲಿರುವ ನಿಟ್ಟೆ ವಾಕ್ ಶ್ರವಣ ಶಿಕ್ಷಣ ಸಂಸ್ಥೆಯ ಎಂಟನೇ ಪದವಿ ಪ್ರದಾನ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಪದವಿ ಪ್ರದಾನಗೈದು ಮಾತನಾಡಿದರು.
ಪದವೀಧರರಾಗುತ್ತಿದ್ದಂತೆಯೇ ಪದವೀಧರರ ಪೋಷಕರು ಕಂಡ ಬಹುದೊಡ್ಡ ಕನಸು ನನಸಾಗಿತಲ್ಲದೆ ತಾವು ಪಟ್ಟ ಶ್ರಮಕ್ಕೊಂದು ಅರ್ಥ ಸಿಕ್ಕಿದೆ. ಕಲಿತ ಕ್ಷೇತ್ರದಲ್ಲಿ ಇನ್ನಷ್ಟು ಜ್ಞಾನ ಪಡೆಯಬೇಕು. ನಮ್ಮ ಪ್ರತಿಭೆ ದೇಶವೇ ಗುರುತಿಸುವಂತಾಗಬೇಕು. ಅದಕ್ಕಾಗಿ ವೃತ್ತಿ ಬದುಕಿನಲ್ಲಿ ಬಹಳಷ್ಟು ಆಯ್ಕೆಗಳಿದ್ದು ಜಾಗರೂಕವಾಗಿ ಆರಿಸಬೇಕು ಎಂದು ನುಡಿದರು.
ರೋಗಿಯು ನಮ್ಮನ್ನು ಪೂರ್ಣಪ್ರಮಾಣದಲ್ಲಿ ನಂಬಿರುವಾಗ ಆರೋಗ್ಯ ಕಾಪಾಡುವಲ್ಲಿ ಶಿಸ್ತಿನ ಜೊತೆಗೆ ತಾಳ್ಮೆ ಹಾಗೂ ಮಾನವೀಯತೆಯೂ ಅತಿ ಮುಖ್ಯ. ನಮ್ಮ ಉದ್ದೇಶ ನಮ್ಮ ಗುರಿ ತಲುಪುವವರೆಗೆ ಬದುಕಿನಲ್ಲಿ ನಮಗೆ ಎದುರಾಗುವ ಸಮಸ್ಯೆ ಸವಾಲುಗಳನ್ನು ಸರಳವಾಗಿ ಬಗೆಹರಿಸುತ್ತಾ ನಾವು ಮುಂದುವರಿಯಬೇಕು ಎಂದರು.
ಕಷ್ಟದಲ್ಲಿರುವ ಜನರಿಗೆ ನಮ್ಮಿಂದಾದ ಸೇವೆ ಮಾಡಬೇಕು. ಗ್ರಾಮೀಣ ಭಾಗದ ಜನತೆಯ ಕುರಿತಾಗಿ ತಿಳಿದುಕೊಳ್ಳಲು ವಾರ್ಷಿಕ ಒಂದು ಬಾರಿಯಾದರೂ ಅವರ ಜೊತೆಗೆ ಬೆರೆಯುತ್ತಾ ನಗುಮುಖದ ಸೇವೆ ಸಲ್ಲಿಸುತ್ತಾ ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಮುಂದುವರಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಪದವೀಧರರು ಬದುಕಿನಲ್ಲಿ ಎಷ್ಟೇ ದೊಡ್ಡ ಸ್ಥಾನಕ್ಕೇರಿದರೂ ಮಕ್ಕಳ ಭವಿಷ್ಯಕ್ಕಾಗಿ ಜೀವನವನ್ನು ಸವೆಸಿದ ಪೋಷಕರ ಸೇವೆ ಎಂದಿಗೂ ಮರೆಯಬಾರದು. ಅವರಿಗೆ ನಾವು ಮರಳಿ ಪ್ರೀತಿ ಹಾಗೂ ಜೀವನ ಪರ್ಯಂತ ಸಂತಸ ಕೊಡುವ ಕಾರ್ಯ ಮಾಡುತ್ತಾ ಅವರ ಸೇವೆಗೆ ಕೃತಾರ್ಥರಾಗಬೇಕು ಎಂದರು.
ಮುಂದಿನ ಬದುಕಿನಲ್ಲಿ ಅಥವಾ ವೃತ್ತಿ ಬದುಕಿನಲ್ಲಿ ಪರಿಸರದ ಶಾಲಾ ಕಾಲೇಜಿಗೆ ಭೇಟಿ ಕೊಡುತ್ತಾ ಅಲ್ಲಿರುವ ವಿದ್ಯಾರ್ಥಿಗಳನ್ನು ಪರೀಕ್ಷಿಸುತ್ತಾ ವಾಕ್ ಶ್ರವಣ ದೋಷವಿರುವ ವಿದ್ಯಾರ್ಥಿಗಳ ಚಿಕಿತ್ಸೆಗೆ ತಜ್ಞರ ಮೂಲಕ ಮುಂದಾಗಬೇಕು. ಹಾಗೆ ಮಾಡುವುದರಿಂದ ಆರೋಗ್ಯವಂತ ಸಮಾಜ ಕಾಣಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ 33 ವಿದ್ಯಾರ್ಥಿಗಳಿಗೆ ಪದವಿ ವಿತರಿಸಿ, ಮಂಗಳೂರು ವಿವಿ ೨೦೧೪-೧೮ರ ಸಾಲಿನಲ್ಲಿ ನಡೆಸಿದ ಆಡಿಯೋಲಾಜಿ ಆಂಡ್ ಸ್ಪೀಚ್ ಲ್ಯಾಂಗ್ವೇಜ್ ಪಥೋಲಾಜಿ ಪದವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ವಿಜೇತೆ ನೀರಜಾ ಸುನಿಲ್ ಹಾಗೂ ದ್ವಿತೀಯ ರಾಂಕ್ ಪಡೆದ ನಿಖಿಲಾ ಎಲ್ಸಾ ಫಿಲಿಫ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಂಸ್ಥೆಯ ನಿರ್ದೇಶಕ ಪ್ರೊ. ಟಿ. ದತ್ತಾತ್ರೇಯ, ಅಸಿಸ್ಟೆಂಟ್ ಪ್ರೊಫೆಸರ್ ಮಾಯಾ ವರ್ಮ ಪ್ರಾಂಶುಪಾಲೆ ಶ್ವೇತಾ ಪ್ರತಿಜ್ಞಾ, ಅಖಿಲಾ ರಾಹುಲ್, ಶ್ರುಂಗ ಎಂ.ಎಸ್ ಮತ್ತಿತರರು ಉಪಸ್ಥಿತರಿದ್ದರು.