Header Ads
Header Ads
Breaking News

ನಿಟ್ಟೆ ವಿವಿಯಲ್ಲಿ “ಟ್ರೋಮಾಸಿಕಾನ್”-2018

ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ರಾಷ್ಟ್ರೀಯ ನೀತಿ ಜಾರಿಗೆ ತರಲಾಗಿದ್ದರೂ ವೈದ್ಯಕೀಯ ಶಿಕ್ಷಣದಲ್ಲಿಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ. ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಹೆಚ್ಚಿನ ಆದ್ಯತೆ ನೀಡುವುದರಿಂದ ಬಹಳಷ್ಟು ಸಂಖ್ಯೆಯ ರೋಗಿಗಳನ್ನು ಬದುಕಿಸಲು ಸಾಧ್ಯ ಎಂದು ಅಸೋಸಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಅಧ್ಯಕ್ಷ ಡಾ. ದಿಲೀಪ್ ಎಸ್. ಗೋಡೆ ಹೇಳಿದರು.

ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿಅಸೋಸಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಘಟಕವಾದ ಇಂಡಿಯನ್ ಅಸೋಸಿಯೇಶನ್ ಆಫ್ ಟ್ರಾಮೊಟೋಲಾಜಿ ಆಂಡ್ ಕ್ರಿಟಿಕಲ್ ಕೇರ್ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಜನರಲ್ ಸರ್ಜರಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ “ಟ್ರೋಮಾಸಿಕಾನ್”-೨೦೧೮ ಎಂಟನೆಯ ರಾಷ್ಟ್ರೀಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪದವೀಧರ ವೈದ್ಯರು ಗ್ರಾಮೀಣ ಭಾಗದಲ್ಲಿಆರು ತಿಂಗಳು ಸೇವೆ ಸಲ್ಲಿಸಬೇಕಾಗಿರುವುದು ಹೇಗೆ ಕಡ್ಡಾಯವಾಗಿ ಜಾರಿಗೊಂಡಿದೆಯೋ ಹಾಗೆಯೇ ಪ್ರಪಂಚದಲ್ಲಿಯೇ ಎರಡನೆಯ ಅತಿ ಹೆಚ್ಚಿನ ಸಾವು ಸಂಭವಿಸಲು ಕಾರಣ ಎಂದು ಅಂಕಿಅಂಶಗಳಿಂದ ಸಾಬೀತಾಗಿರುವ ಅಪಘಾತಕ್ಕೆ ಸಂಬಂಧಪಟ್ಟಂತೆ ಅಪಘಾತ ಚಿಕಿತ್ಸಾ ಕೇಂದ್ರಗಳಲ್ಲಿ ಅತ್ಯುತ್ತಮ ಚಿಕಿತ್ಸಾ ಕೇಂದ್ರಗಳು ಎಂದು ಗುರುತಿಸಲ್ಪಟ್ಟಿರುವ ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರು ಕನಿಷ್ಟ ಒಂದು ತಿಂಗಳ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ಅಂತಹ ನೀತಿ ಜಾರಿಗೆ ತಂದರೆ ರೋಗಿಗಳ ಪಾಲಿಗೆ ನಿಜಕ್ಕೂ ವರವಾಗಲಿದೆ ಎಂದು ನುಡಿದರು.

ಇಂಡಿಯನ್ ಅಸೋಸಿಯೇಶನ್ ಆಫ್ ಟ್ರಾಮಟೋಲಾಜಿ ಆಂಡ್ ಕ್ರಿಟಿಕಲ್ ಕೇರ್(ಐಎಟಿಸಿಸಿ) ಅಧ್ಯಕ್ಷ ಡಾ. ವಿನ್‌ಸ್ಟನ್ ನೊರೊನ್ಹೊ ಕಳೆದ ಏಳೆಂಟು ವರ್ಷಗಳಿಂದ ಅಪಘಾತ ಚಿಕಿತ್ಸೆ ಕುರಿತು ಜಾಗೃತಿಯ ಪ್ರಚಾರ ಕಾರ್ಯ ದೇಶಾದ್ಯಂತ ನಡೆಯುತ್ತಿದೆ. ಗೋವಾ, ಸೊಲ್ಲಾಪುರ, ಮೇಘಾಲಯ, ಅಸ್ಸಾಂನಲ್ಲಿಅದಾಗಲೇ ಸಮ್ಮೇಳನ ನಡೆಸಲಾಗಿದೆ. ತಂತ್ರಜ್ಞಾನ ಬೆಳದಂತೆ ನಾವು ಕೌಶಲ್ಯ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಅಪಘಾತವಾದಾಗ ರೋಗಿಯ ಚಿಕಿತ್ಸೆಯಲ್ಲಿವೈದ್ಯರು ಕ್ಷಿಪ್ರಗತಿಯಲ್ಲಿಆಲೋಚಿಸಿ ತ್ವರಿತ ಗತಿಯ ನಿರ್ಧಾರ ತೆಗೆದುಕೊಳ್ಳುವುದು ನಿರ್ಣಾಯಕವಾಗಿರುತ್ತದೆ ಎಂದರು.
ಕ್ಷೇಮ ಡೀನ್ ಪ್ರೊ. ಡಾ. ಪಿ.ಎಸ್. ಪ್ರಕಾಶ್ ಮಾತನಾಡಿ ನಿಟ್ಟೆ ವಿವಿಯು ವಾಹನ ಅಪಘಾತದ ಕುರಿತು ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಮೂಡಿಸುವುದರೊಂದಿಗೆ ಕೆಲವು ನಿರ್ದಿಷ್ಟ ನಿಯಮಗಳನ್ನು ಜಾರಿಗೆ ತಂದಿದೆ. ಅಪಘಾತಗಳು ಹೆಚ್ಚಾಗಿ ಯುವ ವಿದ್ಯಾರ್ಥಿಗಳಿಂದಲೇ ಸಂಭವಿಸುತ್ತಿರುವುದರಿಂದ ಅಂತಹ ನಿಯಮ ಜಾರಿಗೆ ತರಲಾಗಿದೆ. ಸರಕಾರ ಯಾವುದೇ ಕಾನೂನು ಜಾರಿಗೆ ತಂದರೂ ಅದನ್ನು ಕಠಿಣವಾಗಿ ಪಾಲಿಸಬೇಕು ಎಂದು ನುಡಿದರು.

ಖ್ಯಾತ ಜನರಲ್ ಸರ್ಜನ್ ಡಾ. ಲಿಯೋ ಫ್ರಾನಿಸ್ ಟೋರೋ, ಕ್ಷೇಮ ವೈದ್ಯಕೀಯ ಅಧೀಕ್ಷಕ ಪ್ರೊ. ಡಾ. ಶಿವಕುಮಾರ್ ಹೀರೆಮಠ ಹಾಗೂ ಕಾರ್ಯದರ್ಶಿ ಡಾ. ವಿನೀತ್ ಕುಮಾರ್, ಕ್ಷೇಮ ವೈಸ್ ಡೀನ್ ಪ್ರೊ. ಡಾ. ಜಯಪ್ರಕಾಶ್ ಶೆಟ್ಟಿ, ಕ್ಷೇಮ ಜನರಲ್ ಸರ್ಜರಿ ವಿಭಾಗ ಮುಖ್ಯಸ್ಥ ಪ್ರೊ. ಡಾ. ರಾಜಶೇಖರನ್ ಮೋಹನ್ ಉಪಸ್ಥಿತರಿದ್ದರು.

Related posts

Leave a Reply