Breaking News

ನಿರ್ಭಯಾ ಹಿಂಸಾ ಅತ್ಯಾಚಾರ, ಕೊಲೆ, ನಾಲ್ಕು ಮಂದಿಗೆ ನೇಣು ಕಾಯಂಗೊಳಿಸಿದ ಸುಪ್ರೀಂ

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ತಪ್ಪಿತಸ್ಥರಿಗೆ ದೆಹಲಿ ಹೈಕೋರ್ಟ್ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
೨೩ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ದೆಹಲಿಯಲ್ಲಿ ೨೦೧೨ರ ಡಿಸೆಂಬರ್ ೧೬ರಂದು ಆರು ಮಂದಿ ಅತ್ಯಾಚಾರ ಎಸಗಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದರು. ಇದು ನಿರ್ಭಯಾ ಪ್ರಕರಣ ಎಂದೇ ಹೆಸರು ಪಡೆದುಕೊಂಡಿದೆ. ಇದೊಂದು ಅತಿ ವಿರಳ ಪ್ರಕರಣ ಎಂದು ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತು. ದೇಶದಾದ್ಯಂತ ಇದು ಆಘಾತದ ಸುನಾಮಿಯನ್ನೇ ಎಬ್ಬಿಸಿತ್ತು ಎಂದು ಪೀಠ ಹೇಳಿತು. ಬರ್ಬರ, ಅಮಾನವೀಯ ಮತ್ತು ಪೈಶಾಚಿಕವಾಗಿ ತಪ್ಪಿತಸ್ಥರು ಯುವತಿಯ ಮೇಲೆ ಎರಗಿದ್ದರು. ಯುವತಿಯು ಮನರಂಜನೆಯ ವಸ್ತು ಎಂಬಂತೆ ಅವರ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪೀಠ ಹೇಳಿದೆ. ತಪ್ಪಿತಸ್ಥರ ಕೈಯಲ್ಲಿ ನತದೃಷ್ಟ ಯುವತಿ ಅನುಭವಿಸಿದ ಅನಾಗರಿಕ ಚಿತ್ರಹಿಂಸೆಯ ವಿವರಗಳನ್ನು ಗಮನಿಸಲಾಗಿದೆ. ಸಾಮೂಹಿಕ ಅತ್ಯಾಚಾರದನಂತರ ಯುವತಿಯ ಜನನಾಂಗಕ್ಕೆ ತಪ್ಪಿತಸ್ಥರು ರಾಡ್ ತೂರಿಸಿದ್ದರು. ಯುವತಿ ಮತ್ತು ಅವರ ಜತೆಗಿದ್ದ ಸ್ನೇಹಿತನನ್ನು ಬೆತ್ತಲೆಯಾಗಿ ಬಸ್ಸಿನಿಂದ ಹೊರಗೆ ಎಸೆದಿದ್ದರು. ಅಷ್ಟೇ ಅಲ್ಲದೆ, ಅವರಿಬ್ಬರ ಮೇಲೆ ಬಸ್ ಹರಿಸಲು ಯತ್ನಿಸಿದ್ದರು ಎಂಬುದು ಕೃತ್ಯದ ಅಮಾನವೀಯತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಪೀಠ ಹೇಳಿದೆ.
ಈ ಕೃತ್ಯವು ಸಾಮಾಜಿಕ ವಿಶ್ವಾಸವನ್ನು ಧ್ವಂಸಗೊಳಿಸಿದೆ. ಹಾಗಾಗಿಯೇ ಇದು ಅತಿ ವಿರಳ ಅಪರಾಧ ಕೃತ್ಯ ಎನಿಸುತ್ತದೆ ಮತ್ತು ಅಪರಾಧಿಗಳು ಗಲ್ಲು ಶಿಕ್ಷೆಗೆ ಅರ್ಹರು ಎಂದು ಪೀಠ ತಿಳಿಸಿದೆ. ೨೯ರ ಮುಕೇಶ್, ೨೨ರ ಪವನ್, ೨೩ರ ವಿನಯ್ ಶರ್ಮಾ ಮತ್ತು ೩೧ರ ಅಕ್ಷಯ್ ಕುಮಾರ್ ಸಿಂಗ್ ಶಿಕ್ಷಿತರು. ಇನ್ನೊಬ್ಬ ತಪ್ಪಿತಸ್ಥ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಾಪರಾಧಿಯೊಬ್ಬನಿಗೆ ಬಾಲಗೃಹದಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಲಾಗಿತ್ತು. ಈತ ೨೦೧೫ರ ನವೆಂಬರ್ನಲ್ಲಿ ಬಿಡುಗಡೆಯಾಗಿದ್ದಾನೆ.

Related posts

Leave a Reply