Header Ads
Header Ads
Breaking News

ನೀರಿದ್ದರೂ ಭತ್ತದ ಕೃಷಿಗೆ ದಕ್ಕದ ನದಿ ನೀರು : ನೀರಿಲ್ಲದೆ ಕೆಂಬೈಲು ಕೃಷಿಕರು ಕಂಗಾಲು

 

ನಾಟಿ ಮಾಡಿ ಬರೋಬ್ಬರಿ ಹದಿನೈದು ದಿನ ಕೂಡಾ ಕಳೆದಿಲ್ಲ. ಗದ್ದೆಯಲ್ಲಿ ನೀರೊಣಗಿ ಭತ್ತದ ಸಸಿಗಳು ಬಾಡಿ ಬಸವಳಿಯುತ್ತಿವೆ. ಸೌಪರ್ಣಿಕಾ ಏತ ನೀರಾವರಿ ಯೋಜನೆ ಅಸಮರ್ಪಕ ವಿತರಣೆಯಿಂದಾಗಿ ನಾಡಾ ಕೆಂಬೈಲು ಭತ್ತದ ಕೃಷಿ ಕೆಂಬಣ್ಣಕ್ಕೆ ತಿರುಗುತ್ತಿದೆ.

ಹೌದು..ನೀವಿಲ್ಲಿ ನೋಡುತ್ತಿರುವುದು ಹಚ್ಚಹಸಿರಿನ ಗದ್ದೆ ಬಯಲು. ಇನ್ನೇನು ಐದಾರು ದಿನಗಳು ಕಳೆದರೆ ಈ ಹಸಿರು ಬಣ್ಣ ಕೆಂಪಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಹೌದು ನಾಡಾ ಸಮೀಪದ ಕೆಂಬೈಲು ಕೃಷಿ ಗದ್ದೆಯಲ್ಲಿ ನೀರಿಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ನೀರಿಲ್ಲದೆ ಗದ್ದೆಗಳು ಬಿರುಕು ಬಿಡಲಾರಂಭಿಸಿವೆ. ಮೊದಲು ನಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಕ್ಕಳ್ಳಿ, ಕೆಂಬೈಲು, ಕಡ್ಕೆ, ಜಡ್ಡಾಡಿ, ಸಂಸಾಡಿ, ಒಕ್ಕೇರಿ, ತೆಂಕಬೈಲು  ಪರಿಸರದಲ್ಲಿ ಐನೂರು ಎಕ್ರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡುತ್ತಿದ್ದರೂ, ನೀರಿನ ದುರುಪಯೋಗ, ನೀರು ಹಂಚಿಕೆ ವೈಪಲ್ಯತೆ ಪರಿಣಾಮ ಭತ್ತದ ಕೃಷಿ ಕೇವಲ ನೂರರಿಂದ ಇನ್ನೂರು ಎಕ್ರೆಗೆ ಇಳಿದಿದೆ. ಭತ್ತದ ಕೃಷಿ ಬಳಿಕ ಮಹಿಳೆಯರು ಮನೆ ಖರ್ಚಿಗಾಗಿ ತರಕಾರಿ, ಬಸಳೆ, ಹರಿವೆ, ತೊಂಡೆ, ಮೆಣಸು, ಉದ್ದು ಬೆಳೆಸುತ್ತಾರೆ. ಬೇಸಿಗೆ ಆರಂಭದಲ್ಲೇ ನೀರು ಕೈಕೊಡುವುದರಿಂದ ಗದ್ದೆಯಲ್ಲಿ ತೇವಾಂಶ ಇಂಗಿ ಮಹಿಳೆಯರ ಕೈತೋಟ ಮಾಡುವುದನ್ನೂ ಬಿಟ್ಟಿದ್ದಾರೆ. ಇತ್ತೀಚೆಗೆ ಕಲ್ಲಂಗಡಿ ಕೃಷಿ ಹೊಸದಾಗಿ ಸೇರಿಕೊಂಡಿದೆ. ಗುಂಡೂರಿನಲ್ಲಿ ಏತ ನೀರಾವರಿ ಯಾವಾಗ ಆರಂಭವಾಯಿತೋ ಅಂದಿನಿಂದ ಇಲ್ಲಿನ ಕೃಷಿ ವರ್ತುಲ ಏರುಪೇರು. ಆಲೂರಿಂದ, ನಾಡಾ ಗ್ರಾಪಂ ಬಯಲಿಗೆ ಸಾಗಿ ಬರುವ ನೀರಿನ ಹರಿವಿಗೆ ಇಲಾಖೆ 5 ಚೆಕ್ ಡ್ಯಾಮ್ ನಿರ್ಮಿಸಿದ್ದು, ಹಾಗೆ 5 ಕಡೆಗಳಲ್ಲೂ ಹಲಗೆ ಅಳವಡಿಸಿ ನೀರು ಬಳಸಿಕೊಳ್ಳುವುದರಿಂದ ಕೊನೆಯಲ್ಲಿರುವ ನಾಡಾ ಕೃಷಿ ಪ್ರದೇಶಗಳಿಗೆ ನೀರು ಹರಿಯೋದು ನಿಲ್ಲಿಸುತ್ತದೆ.

ಕುಡಿಯುವ ನೀರು ಹಾಗೂ ಕೃಷಿಗೆ ಪ್ರಯೋಜನ ಕಲ್ಪಿಸುವ ನಿಟ್ಟಿನಲ್ಲಿ ಆಲೂರು ಬಳಿ ಗುಂಡೂರಿನಲ್ಲಿ ಸೌಪರ್ಣಿಕಾ ನದಿಗೆ ಆಣೆಕಟ್ಟು ಕಟ್ಟಿ ಏತ ನೀರಾವರಿಯಲ್ಲಿ ಕಾಲುವೆ ಮೂಲಕ ನೀರು ಹರಿಸಲಾಗುತ್ತಿತ್ತು. 95 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಟಾನ ಮಾಡಲಾಗಿದ್ದು, ನೂಜಾಡಿ, ಆಲೂರು, ನಾಡಾ, ಹಕ್ಲಾಡಿ, ನಾರ್ಕಳಿ ಪರಿಸರಕ್ಕೆ ಈ ಯೋಜನೆ ಮೂಲಕ ನೀರು ಹಾಯಿಸಲಾಗುತ್ತಿದ್ದು, ರೊಟೇಶನ್ ಪದ್ದತಿಯಲ್ಲಿ ನೀರು ಕಾಲುವೆಗೆ ಹರಿಸಲಾಗುತ್ತಿದೆ. ಅಚ್ಚರಿಯ ಅಂಶ ಎಂದರೆ ಇದೂವರೆಗೆ ಏತನೀರಾವರಿ ಯೋಜನೆ ಒಂದು ಲೋಟ ಕುಡಿಯುವ ನೀರು ಕೊಟ್ಟಿಲ್ಲ! ಪ್ರಸಕ್ತ ಸೌಪರ್ಣಿಕಾ ಬಲದಂಡೆ ಯೋಜನೆ ಮೂಲಕ ಬೈಂದೂರಿಗೆ ಕುಡಿಯುವ ನೀರು ಕೇಳಲಾಗುತ್ತಿದೆ. ಇರುವ ವ್ಯವಸ್ಥೆಯೇ ಸರಿಯಿಲ್ಲ ಮತ್ತೊಂದು ಯೋಜನೆ ಇನ್ನೆಷ್ಟು ಅನಾಹುತ ಮಾಡುತ್ತದೆಯೋ ಭಗವಂತನೇ ಬಲ್ಲ. ಇನ್ನು ಸೌಪರ್ಣಿಕಾ ಏತ ನೀರಾವರಿಗೆ ಕಿಂಡಿ ಅಣೆಕಟ್ಟು ಹಲಗೆ ಜೋಡಣೆಗಾಗಿ ನಿರ್ಮಿಸಲಾಗಿರುವ ಶೆಡ್ ಇನ್ನೂ ಪೂರ್ಣಗೊಡಿಲ್ಲ. ಕೆಂಬೈಲು ಬಳಿ ನಿರ್ಮಿಸಿದ ಶೆಡ್ ನಾಲ್ಕೈದು ವರ್ಷ ಪೂರೈಸಿಕೊಂಡರೂ ಗೋಡೆಗೆ ಗಾರೆ ಭಾಗ್ಯವಾಗಲೀ ನೆಲಕ್ಕೆ ಬೆಡ್ ಹಾಕುವುದಾಗಲೀ ಆಗಿಲ್ಲ. ಇಷ್ಟೇ ಅಲ್ಲಾ ಕಟ್ಟಡದ ತಳಪಾಯಕ್ಕೆ ಕಟ್ಟಿದ ಕಲ್ಲು ಬಿರುಕು ಬಿಟ್ಟು ಕಟ್ಟಡ ಅಪಾಯ ಹಂತಕ್ಕೆ ಮುಟ್ಟಿದೆ. ಇಡೀ ಶೌಪರ್ಣಿಕಾ ಏತನೀರಾವರಿ ಕಳಪೆ ಕಾಮಗಾರಿಗೆ ಇದೊಂದು ಚಿಕ್ಕ ಉದಾಹಾರಣೆ ಅಷ್ಟೇ..

ಏತ ನೀರಾವರಿಯಿಂದ ನೀರು ಹರಿದು ಕಾಲುವೆ ಮೂಲಕ ಹರಿದು ಬರುವ ನೀರಿಗೆ ಚೆಕ್ ಡ್ಯಾಮ್ ಅಲ್ಲದೆ ನಾಲ್ಕಾರು ಕಟ್ಟುಗಳ ಕಟ್ಟಿದ್ದು, ನೀರು ಕೆಳಗಡೆ ಹರಿಯದಂತೆ ತಡೆ ಹಿಡಿದಿದ್ದರಿಂದ ಕೃಷಿಗೆ ನೀರಿಲ್ಲದಂತಾಗಿದೆ. ಕಟ್ಟುಗಳ ಕಟ್ಟಿ ನೀರನ್ನು ಅನಾವಶ್ಯಕವಾಗಿ ಕೃಷಿ ಇಲ್ಲದ ಪ್ರದೇಶದಲ್ಲಿ ಹರಿಸಿ ಪೋಲ್ ಮಾಡಲಾಗುತ್ತಿದೆ. ಹೆಮ್ಮುಂಜೆ ಬಳಿ ಇರುವ ಕಟ್ಟ ಮೂಲಕ ಕೃಷಿಯೇ ಇಲ್ಲದ ಭೂಮಿಗೆ ನೀರುಣಿಸಿ ನೀರು ಪೋಲು ಮಾಡಲಾಗುತ್ತಿದೆ. ಹೆಮ್ಮುಂಜೆ ಪಾಳು ಬಿದ್ದ ಗದ್ದೆಯಲ್ಲಿ ನಿಂತ ನೀರು ಮುಳುಗಡೆ ಪ್ರದೇಶದ ನೆನಪಿಗೆ ತರುತ್ತದೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಮಾಡಿದ ಕೃಷಿ ಕಣ್ಣೆದುರೇ ಹಾಳಾಗುತ್ತಿರುವುದು ಕಂಡು ರೈತರು ಮರುಗುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಭತ್ತದ ಗದ್ದೆಗೆ ನೀರು ಹರಿಯದಿದ್ದರೆ, ಇಡೀ ಭತ್ತದ ಫಸಲೇ ನಾಶವಾಗುವ ಅಪಾಯವಿದೆ. ಅನಾವಶ್ಯಕವಾಗಿ ನೀರು ಪೋಲು ಮಾಡುವ ಮೂಲಕ ನೀರಿನ ಹಕ್ಕು ನಿರಾಕರಣೆ ಮಾಡುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿಗೆ ಕೃಷಿ ಹಾಳಾಗೋದು ಎಷ್ಟು ಸಮಂಜಸ ಎನ್ನುವ ರೈತರ ಪ್ರಶ್ನೆಗೆ ಉತ್ತರ ಕೊಡೋರು ಯಾರು ಎನ್ನೋದೆ ಪ್ರಶ್ನಾತೀತವಾಗಿದೆ.

Related posts

Leave a Reply