Breaking News

ನೀರಿನ ಅನುದಾನದ ಸದ್ಬಳಕೆ ಬಗೆಗೆ ವರದಿ ನೀಡಿ, ಅಧಿಕಾರಿಗಳಿಗೆ ಮಂತ್ರಿ ಪ್ರಮೋದ್ ಮಧ್ವರಾಜ್ ತಾಕೀತು

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ತೆಗೆದುಕೊಂಡಿರುವ ಕ್ರಮ ಟಾಸ್ಕ್ ಫೋರ್ಸ್ ಮತ್ತು ನ್ಯಾಷನಲ್ ರೂರಲ್ ಡ್ರಿಂಕಿಂಗ್ ವಾಟರ್ ಸಪ್ಲೈನಡಿ ಕೈಗೊಂಡಿರುವ ಕಾಮಗಾರಿಗಳನ್ನು ಮೂರು ತಿಂಗಳೊಳಗೆ ಮುಗಿಸಿ ವರದಿ ನೀಡದಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನೀರು ಸರಬರಾಜಿಗೆ ಸಂಬಂಧಿಸಿದಂತೆ ಮತ್ತೊಂದು ಪ್ರತ್ಯೇಕ ಸಭೆ ನಡೆಸಿ ಅನುದಾನ ಅನುಷ್ಠಾನಕ್ಕೆ ಬಳಕೆಯಾದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವುದಾಗಿಯೂ ಸಚಿವರು ಹೇಳಿದರು. ನೀರಿನ ಕೊರತೆ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ನೀರಿನ ಕೊರತೆ ಬಗ್ಗೆ ವರದಿಯಾಗುತ್ತಿದೆ. ಸಾಕಷ್ಟು ಅನುದಾನ ನೀರಿಗಾಗಿ ನೀಡಿದ್ದರೂ ಸದ್ಬಳಕೆಯಾಗುತ್ತಿಲ್ಲದ ಬಗ್ಗೆ ಸಚಿವರು ಕಾರ್ಯನಿರ್ವಾಹಕ ಇಂಜಿನಿಯರ್ ನೀರು ಸರಬರಾಜು ಇವರಿಗೆ ಕಾರಣ ಕೇಳಿದರು. ವಾರಾಹಿ ಯೋಜನೆಯ ಸದ್ಬಳಕೆ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಜನೋಪಕಾರಿ ಯೋಜನೆಯಾಗಿ ಪರಿವರ್ತಿಸಲು ಜಿಲ್ಲಾ ಉಸ್ತುವಾರಿ ಸಚಿವರ ಪ್ರತ್ಯೇಕ ಸಭೆ ಕರೆಯಲು ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅವರ ನಿರ್ಲಕ್ಷ್ಯಗಳಿಂದಾಗುತ್ತಿರುವ ಅಪಘಾತಗಳಿಗೆ ಸಂಬಂಧಿಸಿದಂತೆ ಹೆದ್ದಾರಿ ಪ್ರಾಧಿಕಾರದವರ ವಿರುದ್ಧ ದೂರು ದಾಖಲಿಸಿ ಎಂದರು. ಈಗಾಗಲೇ ಸಂಬಂದಪಟ್ಟವರಿಗೆ ಮಾಹಿತಿ ನೀಡುವ ಮೂಲಕ ಸೈನ್ ಬೋರ್ಡ್ಸ ಮತ್ತು ಬ್ಯಾರಿಕೇಡ್‌ಗಳನ್ನಿರಿಸಿ ಅಪಘಾತ ತಡೆಗೆ ಕ್ರಮವಹಿಸಲಾಗಿದೆ; ಆದರೆ ಈವರೆಗೆ ನಡೆದ ಅಪಘಾತಗಳಿಂದ ಮೃತಪಟ್ಟವರ ಅಂಕಿ ಅಂಶಗಳು ತಮ್ಮ ಬಳಿ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷರಾದ ಶೀಲಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಎಸ್. ಕೋಟ್ಯಾನ್, ಶಶಿಕಾಂತ್ ಪಡುಬಿದ್ರೆ, ನಾಮ ನಿರ್ದೇಶಿತ ಸದಸ್ಯರಾದ ಉಮೇಶ್ ನಾಯ್ಕ್, ರಾಜು ಪೂಜಾರಿ, ಇಗ್ನೇಶಿಯಸ್ ಡಿಸೋಜಾ, ದೇವಾನಂದ ಶೆಟ್ಟಿ ಸಭೆಯಲ್ಲಿ ಪಾಲ್ಗೊಂಡರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾನಾಗ್, ಎಸ್‌ಪಿ ಕೆ. ಟಿ. ಬಾಲಕೃಷ್ಣ ಎಲ್ಲ ಇಲಾಖಾಧಿಕಾರಿಗಳಿದ್ದರು.

Related posts

Leave a Reply