Header Ads
Header Ads
Breaking News

ನುಡಿಸಿರಿ ಸಮ್ಮೇಳನಕ್ಕೆ ಮೈದುಂಬಿ ನಿಂತಿದೆ “ಕೃಷಿಸಿರಿ”

ನುಡಿಸಿರಿ ಕೇವಲ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನಕ್ಕೆ ಮಾತ್ರ ಸೀಮಿತಗೊಳ್ಳಬಾರದು. ನಾಡು ನುಡಿ ಸಮ್ಮೇಳನಗಳು ನಾಡು ನುಡಿಗೆ ವಿಶೇಷವಾಗಿ ನಾಡಿಗೆ ಅನ್ನದಾತರಾಗಿರುವ ರೈತರಿಗೆ ಆತ್ಮವಿಶ್ವಾಸ ನೀಡುವಂತಾಗಬೇಕು ಹಾಗೂ ಮುಖ್ಯವಾಗಿ ಯುವಜನತೆಗೆ ನಮ್ಮ ಮಣ್ಣಿನ ನೆಲದ ಶ್ರೀಮಂತಿಕೆ ಸ್ಫೂರ್ತಿ ನೀಡುವಂತಾಗಬೇಕು ಎಂಬ ನಿಟ್ಟಿನಲ್ಲಿ ತರಕಾರಿ ಮತ್ತು ಪುಷ್ಪ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಇದೀಗ 15ನೇ ವರ್ಷದ ನುಡಿಸಿರಿಗೆ ಪೂರಕವಾಗಿ 2ನೇ ವರ್ಷದಲ್ಲಿ ಬೆಳೆಸಿರುವ ತರಕಾರಿ ಮತ್ತು ಪುಷ್ಪ ಕೃಷಿಯು ಮೈದುಂಬಿಕೊಂಡು ನಿಂತು ಎಲ್ಲರನ್ನೂ ಕೃಷಿಸಿರಿಗೆ ಕೈಬೀಸಿ ಕರೆಯುತ್ತಿದೆ.ಸಂಸ್ಕೃತಿ, ಸೃಜನಶೀಲತೆಯ ಶಿಕ್ಷಣಕ್ಕೆ ಹೆಸರಾದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ನುಡಿಸಿರಿಯ ರೂವಾರಿ ಡಾ.ಎಂ. ಮೋಹನ ಆಳ್ವರು ಸದಾ ಏನಾದರೊಂದು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬರುತ್ತಿರುತ್ತಾರೆ. ಅದರಂತೆ ಕಳೆದ 15ವರ್ಷಗಳಿಂದ ಅವರು ನಡೆಸಿಕೊಂಡು ಬರುತ್ತಿರುವ ಮಾದರಿ ಸಮ್ಮೇಳನ ನುಡಿಸಿರಿಯಲ್ಲಿ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನೂರಾರು ಎಕರೆ ವಿಸ್ತರಿಸಿರುವ ತಮ್ಮ ಶಿಕ್ಷಣ ಸಂಸ್ಥೆಗಳ ಆವರಣದ ವಿದ್ಯಾಗಿರಿಯಲ್ಲಿ ಕಳೆದ ವರ್ಷದಿಂದ ಮೂರು ಎಕರೆ ಸ್ಥಳದಲ್ಲಿ ವಿವಿಧ ತರಕಾರಿ ಹಾಗೂ ಹೂವಿನ ಗಿಡಗಳನ್ನು ಬೆಳೆಸುತ್ತಿದ್ದು ಇದೀಗ ಈ ವರ್ಷವೂ ತರಕಾರಿ ಗಿಡಗಳು ಉತ್ತಮ ಫಸಲುಗಳನ್ನು ಮೈತುಂಬಿಕೊಂಡು ಕೃಷಿಸಿರಿಯ ಘನತೆಯನ್ನು ಹೆಚ್ಚಿಸಿದೆ.

ಆಸಕ್ತಿ ಮತ್ತು ಕಾಳಜಿ ಜತೆಯಾಗಿ ಬೆರೆತರೆ ಓರ್ವ ರೈತ ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಿದೆ ಎಂಬುದನ್ನು ಬರೆ ಎರಡೂವರೆ ತಿಂಗಳ ಪರಿಶ್ರಮದಿಂದ ನಳನಳಿಸುತ್ತಿರುವ ತರಕಾರಿಗಳೇ ಸಾಕ್ಷಿ. ಈ ಕೃಷಿಯಲ್ಲಿ ನಾಲ್ಕು ಬಗೆಯ ಸೋರೆ ಕಾಯಿ, ಹೀರೇ ಕಾಯಿ, ಆರು ಬಗೆಯ ಕುಂಬಳ ಕಾಯಿ, ಮೂರು ರೀತಿಯ ಬೆಂಡೆ, ಐದು ಬಗೆಯ ತೊಂಡೆ, ನಾಲ್ಕು ವಿಧದ ಅಳಸಂಡೆ, ಎರಡು ಬಗೆಯ ಪಡುವಳ ಕಾಯಿ, ನಾಲ್ಕು ಬಗೆಯ ಹಾಗಲ ಕಾಯಿ, ಆರು ವಿಧದ ಸೌತೆ, ಎಂಟು ವಿಧದ ಬದನೆ, ಏಳು ಬಗೆಯ ಮೆಣಸು, ಮೂರು ಬಗೆಯ ಜೋಳ, ಮೂರು ಬಗೆಯ ಚೀನಿ ಕಾಯಿ,ಪಡುವಲ, 2ವಿಧದ ಅನಾನಸು,2 ರೀತಿಯ ಸೂರ್ಯಕಾಂತಿ, ಕಾಲಿಫ್ಲವರ್, ಎರಡು ರೀತಿಯ ಕಲ್ಲಂಗಡಿ, ಈ ಭಾಗದಲ್ಲಿ ಬೆಳೆಯಲಾಗದು ಎಂದ ಈರುಳ್ಳಿ ಜತೆಗೆ ಚೆಂಡು ಹೂವುಗಳ ವೈವಿಧ್ಯ, ವಿದೇಶೀ ಆಹಾರ ಸಸ್ಯಗಳಾದ ಲೆಟ್ಸ್, ಬ್ರೊಕೊಲಿ, ಇನ್ನಷ್ಟು, ಮತ್ತಷ್ಟು 90ಕ್ಕೂ ಮಿಕ್ಕಿದ ತರಕಾರಿ, ಹಣ್ಣು ಹಂಪಲುಗಳೆಲ್ಲವೂ ಮೈತುಂಬಿಕೊಂಡು ಕೃಷಿಕರನ್ನು ಸೆಳೆಯುತ್ತಿವೆ.

2013ರಲ್ಲಿ ವಿಶ್ವ ನುಡಿಸಿರಿ ವಿರಾಸತ್ ನಡೆಸಿದಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯಮಟ್ಟದ ಕೃಷಿ ಮೇಳದೊಂದಿಗೆ ಕೃಷಿಸಿರಿ ನಡೆಸಿದ್ದ ಡಾ. ಆಳ್ವರು ಬಳಿಕ ಇಲ್ಲಿ ಭತ್ತ ಬೆಳೆದಿದ್ದಾರೆ. ಕಂಬಳ ನಡೆಸಿದ್ದಾರೆ. ನಿರಂತರ ಕೃಷಿ ಸಿರಿಯ ಮೂಲಕ ತಮ್ಮ ಶಿಕ್ಷಣ ಸಂಸ್ಥೆಗಳ ಆವರಣದ 6 ಎಕರೆ ಸ್ಥಳದಲ್ಲಿ ನಿರಂತರ ನುಡಿಸಿರಿ ಜತೆಗೆ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ನಡೆಸಿದ್ದಾರೆ.
ಕೃಷಿಕರ ಬದುಕು ಕೃಷಿ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕಾದವರು, ಮುಂದಿನ ಪೀಳಿಗೆಗೆ ಆಹಾರ ಸಂಸ್ಕೃತಿಯ ಪರಿಚಯ ನೀಡ ಬಯಸುವವರು ಈ ಕೃಷಿ ಆವರಣದ ಬದುಕನ್ನು ಆಸ್ವಾದಿಸಲೇಬೇಕಾದದ್ದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಹೌದು.

ನುಡಿಸಿರಿಗೆ ಪೂರಕವಾಗಿ ನ೧೫ರಂದು ಸಂಜೆ 5ಕ್ಕೆ ಕೃಷಿಸಿರಿಯನ್ನು ರಾಜ್ಯ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಉದ್ಘಾಟಿಸುತ್ತಿದ್ದಾರೆ. ಪುಷ್ಪ ಪ್ರದರ್ಶನ, ತರಕಾರಿ ಹಣ್ಣುಗಳ ಕಲಾಕೃತಿ ಪ್ರದರ್ಶನ, 44 ತಳಿಗಳ ಬಿದಿರು ಸಸಿಗಳು, 40ತಳಿಗಳ ಬಿದಿರುಗಳು, ಮೂರು ಎಕರೆ ಪ್ರದೇಶದಲ್ಲಿ ಸುಧಾರಿತ ಮತ್ತು ಸಾಂಪ್ರದಾಯಿಕ ನೈಜ ಕೃಷಿದರ್ಶನ,250 ಮಿಕ್ಕಿದ ಕೃಷಿ ಮಳಿಗೆಗಳ ಮೂಲಕ ನರ್ಸರಿ, ಕೃಷಿ ಉಪಕರಣಗಳ ಮಾರಾಟ, ಪ್ರದರ್ಶನ,ನ್ಯೂಝಿಲ್ಯಾಂಡ್ ಮೂಲದ ಆಹಾರ ಸಸ್ಯಗಳ ಪ್ರದರ್ಶನ, ಮತ್ಸ್ಯ ಮತ್ತು ಸಮುದ್ರ ಚಿಪ್ಪುಗಳ ಪ್ರದರ್ಶನ, ಕೃಷಿ ಸಂಬಂಧೀ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ, ಬೆಳಗ್ಗಿನಿಂದ ತಡರಾತ್ರಿವರೆಗೂ ತುಳು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಈ ಬಾರಿ ಕೃಷಿಸಿರಿಯ ವಿಶೇಷತೆ.

Related posts

Leave a Reply