Header Ads
Header Ads
Breaking News

ನೂರಕ್ಕೂ ಅಧಿಕ ಪದಕಗಳ ಸರದಾರನಿಗೆ ಸರ್ಕಾರದ ಪ್ರೋತ್ಸಾಹ ನಗಣ್ಯ!

ಕುಂದಾಪುರ: ಗುರಿ ತಲುಪಬೇಕೆಂಬ ಛಲ ಮನಸ್ಸಿನಲ್ಲಿ ಬೇರೂರಿದರೆ ಏನೇ ಕಷ್ಟಗಳು ಬಂದರೂ ಗುರಿ ತಲುಪಬಹುದು ಎನ್ನೋದಕ್ಕೆ ಈ ಯುವಕ ಸಾಕ್ಷಿ. ಕಂಬಳ ನೋಡುತ್ತಲೇ ಓಟದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಈ ಯುವಕ ಬಡತನವನ್ನು ಮೆಟ್ಟಿ ಸಾಧನೆಯ ಶಿಖರವೇರಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುವಿಲ್ಲದೆ ಅಥ್ಲೇಟಿಕ್ಸ್‍ನಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಆದರೆ ಈ ಯುವಕ ಈಗ ಜೀವನ ನಿರ್ವಹಣೆಗಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದರೆ ನಂಬಲಸಾಧ್ಯವಾದರೂ ಇದು ವಾಸ್ತವ್ಯ ಸತ್ಯ.

ಪಾಂಡೇಶ್ವರದಲ್ಲಿನ ಅಪಾಯದಂಚಿನಲ್ಲಿರುವ ಮನೆಯಲ್ಲಿ ಪತ್ನಿ, ಮೂವರು ಮಕ್ಕಳೊಂದಿಗೆ ನೆಲೆಸಿರುವ ಅಪ್ಪಟ ಹಳ್ಳಿಗಾಡಿನ ಈ ಸಾಧಕನ ಹೆಸರೇ ಗಣೇಶ್ ಪಾಂಡೇಶ್ವರ. ಇವರ ದೇಶ ಮೆಚ್ಚುವ ಸಾಧನೆಗೆ ಸರ್ಕಾರದ ಪ್ರೋತ್ಸಾಹ ಮಾತ್ರ ಶೂನ್ಯ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಸಾಧನೆಗೈದಿರುವ ಗಣೇಶ್ ಇದೀಗ ಸಾಲಾ ಮಾಡಿ ಖರೀದಿಸಿದ ತಮ್ಮ ಸ್ವಂತ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿರುವುದು ಕ್ರೀಡಾ ಸಾಧಕರಿಗೆ ಆಳುವ ಸರ್ಕಾರ ಎಷ್ಟರಮಟ್ಟಿಗೆ ಪ್ರೋತ್ಸಾಹ ನೀಡುತ್ತಿದೆ ಎನ್ನುವುದಕ್ಕೊಂದು ಸಾಕ್ಷಿ.

ತಮ್ಮ ಕುಟುಂಬದ ನಿರ್ವಹಣೆಗಾಗಿ ಎರಡೆರಡು ಕೆಲಸ ಮಾಡುತ್ತಿರುವ ಗಣೇಶ್ ನಿದ್ದೆ ಮಾಡೋದು ಕೇವಲ ಐದು ಗಂಟೆ ಮಾತ್ರ. ನಸುಕಿನ ಜಾವ 2 ಗಂಟೆಗೆ ಮನೆಯಿಂದ ಹೊರಟು ಪಾಂಡೇಶ್ವರದ ಸೀತಾನದಿಯಲ್ಲಿ ಬೀಸುಬಲೆಯ ಮೂಲಕ ಮೀನುಗಾರಿಕೆ ನಡೆಸಿ ಬಳಿಕ 8 ಗಂಟೆಗೆ ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಉಲ್ಬಣಿಸಿದ ಮರಳು ಸಮಸ್ಯೆಯಿಂದಾಗಿ ಸೆಂಟ್ರಿಂಗ್ ಕೆಲಸ ಇಲ್ಲವಾದ್ದರಿಂದ ಗಣೇಶ್ ಜೀವನಕ್ಕೆ ಇದೀಗ ಮೀನುಗಾರಿಕೆಯೇ ಆಸರೆಯಾಗಿದೆ. ಪಾಂಡೇಶ್ವರ ದಿ.ಕೇಶವ ಹಾಗೂ ಕಮಲಾ ದಂಪತಿ ಮೂವರು ಮಕ್ಕಳಲ್ಲಿ ಗಣೇಶ್ ಪಾಂಡೇಶ್ವರ ಕಿರಿಯ ಮಗ. ಗಣೇಶ್ ಪಾಂಡೇಶ್ವರ್ ಅವರಿಗೆ ಬಾಲ್ಯದಿಂದಲೂ ಓಟ ಎಂದರೆ ಬಲು ಇಷ್ಟ. ತಮ್ಮೂರಿನಲ್ಲಿ ಆಗಾಗೆ ನಡೆಯುತ್ತಲೇ ಇರುವ ಕಂಬಳದ ಓಟ ನೋಡುತ್ತಲೇ ಓಟದಲ್ಲಿ ಆಸಕ್ತಿ ಹೆಚ್ಚಿಸಿಕೊಂಡ ಗಣೇಶ್ ಹಂತ ಹಂತವಾಗಿ ಸ್ವಪರಿಶ್ರಮದಿಂದಲೇ ಸಾಧನೆಗೈದು ಇಂದು ಅಂತರಾಷ್ಟ್ರೀಯಮಟ್ಟದ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಕಂಬಳ ಓಟಗಾರನಾಗಿಯೂ ಕಂಬಳ ಪ್ರೇಮಿಗಳ ಮನ ಗೆದ್ದಿದ್ದಾರೆ.

ಆರ್ಥಿಕ ಸಂಕಷ್ಟದಿಂದಾಗಿ ಹೈಸ್ಕೂಲ್‍ನಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಮನೆಯ ಜವಾಬ್ದಾರಿ ಹೊರಲು ಕೆಲಸಕ್ಕೆ ಹೋದರೂ ಓಟದಲ್ಲಿ ಸಾಧನೆಗೈಯ್ಯುವ ಛಲ ಗಣೇಶ್ ಅವರನ್ನು ಬಿಡಲಿಲ್ಲ. ಕೆಲಸದ ಬಿಡುವಿನ ವೇಳೆಯಲ್ಲಿ ಕಠಿಣ ತರಬೇತಿ ನಡೆಸುತ್ತಲೇ ಬಂದಿದ್ದರಿಂದ ಇಂದು ಸಾಧಕರ ಸಾಲಿನಲ್ಲಿದ್ದಾರೆ. ಶಾಲಾ ದಿನಗಳಲ್ಲಿ ನಡೆಯುತ್ತಿರುವ ಓಟದ ಸ್ಪರ್ಧೆಯಲ್ಲಿ ಗೆಲುವಿನ ಓಟ ಆರಂಭಿಸಿದ ಗಣೇಶ್ ತಮ್ಮ ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ದೃತಿಗೆಡಲಿಲ್ಲ ಮತ್ತು ತಮ್ಮ ವಿಜಯದ ಓಟಕ್ಕೆ ಬ್ರೇಕ್ ಹಾಕಲೇ ಇಲ್ಲ. ಮಾಸ್ಟರ್ ಅಥ್ಲೇಟಿಕ್ಸ್‍ನಲ್ಲಿ 2016-2017ರಲ್ಲಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ 100, 200, 400 ಮೀಟರ್ ಓಟದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಗಣೇಶ್, 2016-2017ರ ಹೈದರಾಬಾದ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೇಟಿಕ್ಸ್‍ನಲ್ಲಿ ಭಾಗವಹಿಸಿ ಬಳಿಕ ಮೇ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆದ ಏಷ್ಯಾನ್ ಮೀಟ್ ಮಾಸ್ಟರ್ ಅಥ್ಲೇಟಿಕ್ಸ್‍ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.

2018 ಫೆಬ್ರುವರಿ 21ರಿಂದ 25ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಾಸ್ಟರ್ ಅಥ್ಲೇಟಿಕ್ಸ್‍ನಲ್ಲಿ 2 ಚಿನ್ನ ಹಾಗೂ 1 ಕಂಚಿನ ಪದಕ ಪಡೆದು ಮುಂಬರುವ ಸ್ಪೇನ್‍ನಲ್ಲಿ ನಡೆಯುವ ಮಾಸ್ಟರ್ ಅಥ್ಲೇಟಿಕ್ಸ್‍ನ ವಲ್ರ್ಡ್ ಮೀಟ್‍ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. 100 ಮೀಟರ್ ಓಟದಲ್ಲಿ 11.04 ಸಕೆಂಡು ವೇಗದಲ್ಲಿ ಕ್ರಮಿಸುವ ಗಣೇಶ್ ಪಾಂಡೇಶ್ವರ್ 50ಕ್ಕೂ ಅಧಿಕ ಚಿನ್ನ, 20ಕ್ಕೂ ಅಧಿಕ ಬೆಳ್ಳಿ, 25 ಕಂಚಿನ ಪದಕವನ್ನು ಪಡೆದಿರುವುದು ಹೆಮ್ಮೆಯ ಸಂಗತಿ.


ಹೊತ್ತಿನ ಊಟಕ್ಕೂ ತತ್ವಾರ ಎದುರಿಸುತ್ತಿದ್ದ ದಿನಗಳವು. ಆ ದಿನಗಳಲ್ಲಿ ಶೂ ಖರೀದಿಸುವುದು ಕನಸಿನ ಮಾತಾಗಿತ್ತು. ಹೀಗಾಗಿ ಗಣೇಶ್ ತಮ್ಮೂರಿನ ಗದ್ದೆ ಬಯಲಲ್ಲೇ ಬರಿಗಾಲಿನಲ್ಲಿ ಹಗಲು ರಾತ್ರಿಯೆನ್ನದೇ ಕಠಿಣ ಅಭ್ಯಾಸ ನಡೆಸಿದ್ದರು. ಉಡುಪಿಯ ಕ್ರೀಡಾಂಗಣದಲ್ಲಿ ತರಬೇತಿಗಾಗಿ ಕ್ಯಾನ್‍ವಾಸ್ ಶೂ ಖರೀದಿಸಿದರೆ, ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೇಟಿಕ್ಸ್‍ನಲ್ಲಿ ಸ್ಪೈಕ್ ಶೂ ಬಳಸಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಗುರುವಿಲ್ಲದೆ ಗೂಗಲ್ ಮೂಲಕವೇ ಪ್ರಸಿದ್ದ ಓಟಗಾರರ ಶೈಲಿಯನ್ನು ಅನುಸರಿಸುತ್ತಿರುವ ಗಣೇಶ್ ಗುರುವಿಲ್ಲದೆ ಏಕಲವ್ಯನಂತೆ ಈ ಸಾಧನೆಗೈದಿರುವುದು ಇನ್ನೊಂದು ಹೆಮ್ಮೆಯ ಸಂಗತಿ. ಇಂದಿಗೂ ಸಾಸ್ತಾನ ಚೇತನಾ ಶಾಲೆಯಲ್ಲಿ ಗಣೇಶ್ ಬರಿಗಾಲಲ್ಲಿ ಅಭ್ಯಾಸ ಮಾಡುತ್ತಿದ್ದಾರೆಂದರೆ ನಂಬಲಸಾಧ್ಯವಾದರೂ ಇದು ವಾಸ್ತವ ಸತ್ಯ.

ಸಾಧಕ ಗಣೇಶ ಪಾಂಡೇಶ್ವರ ಮತ್ತು ಸುಶೀಲಾ ದಂಪತಿ ಮೂವರು ಮಕ್ಕಳಲ್ಲಿ ಒಂದು ಹೆಣ್ಣು, ಎರಡು ಗಂಡು ಮಕ್ಕಳು. ಮೊದಲ ಮಗ ಚರಣ್ ಸಾಸ್ತಾನ ಚೇತನ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತಂದೆಯಂತೆ ಈತನೂ ಕೂಡಾ ಓಟದಲ್ಲಿ ಸೈ ಎನಿಸಿಕೊಂಡಿದ್ದಾನಲ್ಲದೇ ಶಾಲಾ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾನೆ. ಗಣೇಶ್ ಪಾಂಡೇಶ್ವರ 100, 200, 400 ಮೀಟರ್ ಓಟದಲ್ಲಿ ಸೈ ಎನಿಸಿಕೊಂಡರೆ, ಅವರ ಪುತ್ರ ಚೇತನ್ ಮ್ಯಾರಾಥಾನ್ ಓಟದತ್ತ ಒಲವು ತೋರಿಸುತ್ತಿದ್ದಾನೆ. ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆದ ಮ್ಯಾರಾಥಾನ್ ಓಟದಲ್ಲಿ ಚರಣ್ ಪ್ರಶಸ್ತಿ ಪಡೆದು ಭರವಸೆ ಮೂಡಿಸಿರುವ ಯುವ ಪ್ರತಿಭೆಗಳ ಸಾಲಿನಲ್ಲಿ ನಿಂತಿದ್ದಾನೆ.


ತನ್ನಂತೆಯೇ ಇತರ ಪ್ರತಿಭೆಗಳು ಕಷ್ಟ ಪಡಬಾರದೆಂದು ಗಣೇಶ್ ತಮ್ಮ ಕೆಲಸದ ನಡುವೆಯೂ ಬಿಡುವಿನ ವೇಳೆಯಲ್ಲಿ ಓಟದಲ್ಲಿ ಆಸಕ್ತಿಯಿರುವ ಪ್ರತಿಭೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಅಲ್ಲದೇ ಸೈನ್ಯಕ್ಕೆ ಸೇರುವ ಯುವಕರಿಗೆ ತರಬೇತಿ ನೀಡುವ ಮೂಲಕ ದೇಶ ಸೇವೆ ಕಾರ್ಯದಲ್ಲೂ ಅಳಿಲು ಸೇವೆ ಮಾಡುತ್ತಿದ್ದಾರೆ. ಸೈನ್ಯಕ್ಕೆ ಸೇರುವ ಅಭ್ಯರ್ಥಿಗಳು 800 ಮೀ ಓಟವನ್ನು ನಿಗದಿತ ಸಮಯದಲ್ಲಿ ಪೂರೈಸಬೇಕಾಗುತ್ತದೆ. ಓಟಕ್ಕೆ ಬೇಕಾದ ಮಾನಸಿಕ ಸಿದ್ದತೆ, ಆಹಾರ ಸೇವನೆ ಹಾಗೂ ಇನ್ನಿತರ ತರಬೇತಿ ನೀಡುತ್ತಿದ್ದು, ಗಣೇಶ್ ಮಾರ್ಗದರ್ಶನದಿಂದಲೇ ಈಗಾಗಲೇ ಇಬ್ಬರು ಸೈನ್ಯಕ್ಕೆ ಸೇರಿದ್ದಾರೆ. ಮತ್ತೆ ಎಂಟು ಮಂದಿ ಯುವಕರು ಗಣೇಶ್ ಗರಡಿಯಲ್ಲಿ ಫಳಗುತ್ತಿದ್ದು, ಪ್ರತೀದಿನ ಸಂಜೆ ಯುವಕರಿಗೆ ಉಚಿತವಾಗಿ ಓಟದ ಪಾಠ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂತಹ ಕಾರ್ಯ.

ಒಲಂಪಿಕ್‍ನಲ್ಲಿ ಪದಕಗಳ ಬೇಟೆಯಲ್ಲಿ ನಾವ್ಯಾಕೆ ಹಿಂದೆ ಸರಿದಿದ್ದೇವೆ ಎಂಬುವುದಕ್ಕೆ ಜ್ವಲಂತ ಸಾಕ್ಷಿ ಸಾಧಕ ಗಣೇಶ್ ಪಾಂಡೇಶ್ವರ್. ಇಲ್ಲಿ ಪ್ರತಿಭೆಗಳು ಸಾಕಷ್ಟಿದ್ದಾರೆ. ಅವರುಗಳಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದರೆ ನಾವ್ಯಾರಿಗೂ ಕಮ್ಮಿ ಇಲ್ಲ. ಆದರೆ ಪ್ರೋತ್ಸಾಹ ಮಾಡುವ ಕೆಲಸಗಳು ನಡೆಯುತ್ತಿಲ್ಲ. ಗಣೇಶ್ ಕೂಡ ಸರ್ಕಾರದ ನೆರವಿಗೆ ಹಲವು ಇಲಾಖೆಗಳನ್ನು ಸುತ್ತಿದ್ದಾರೆ. ಹಲವು ಜನಪ್ರತಿನಿಧಿಗಳ ಮನೆಯ ಮೆಟ್ಟಿಲು ತುಳಿದಿದ್ದಾರೆ. ಇಷ್ಟೆಲ್ಲಾ ಸಾಧನೆಗೈದಿರುವ ಸಾಧಕನಿಗೆ ಇದುರೆಗೂ ಸರ್ಕಾರ ಬಿಡಿಕಾಸು ಪ್ರೋತ್ಸಾಹಧನ ಕೊಟ್ಟಿಲ್ಲ. ಸಾಧನೆಗಳ ಪಟ್ಟಿಯನ್ನು ಕ್ಸೆರಾಕ್ಸ್ ಮಾಡಿ ಇಲಾಖೆಗಳಿಗೆ ಕೊಟ್ಟು ಕೊಟ್ಟು ಸಾಕಾಗಿದೆ ಅದರಿಂದ ಇದುವರೆಗೂ ಯಾವುದೇ ಪ್ರಯೋಜವಾಗಿಲ್ಲ ಎನ್ನುತ್ತಾರೆ ಗಣೇಶ್.

ಗಣೇಶ್ ಪಾಂಡೇಶ್ವರ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗಳಿಸಿದರೂ ಇದುವರೆಗೂ ಸರ್ಕಾರ ಅವರ ನೆರವಿಗೆ ಬಂದಿಲ್ಲದಿರುವುದು ಬೇಸರದ ಸಂಗತಿ. ಎಲ್ಲಾದಕ್ಕೂ ಮಿಗಿಲಾಗಿ ಗಣೇಶ್ ದೇಶ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಸೇನೆಗೆ ಸೇರುವ ಆಕಾಂಕ್ಷಿ ಯುವಕರಿಗೆ ಅಥ್ಲೇಟಿಕ್ಸ್‍ನಲ್ಲಿ ತರಬೇತಿ ನೀಡುತ್ತಿದ್ದಾರೆ. ಸರ್ಕಾರ ಹಾಗೂ ಸ್ಥಳೀಯ ಜವಾಬ್ದಾರಿಯುತ ಜನಪ್ರತಿನಿಧಿಗಳು ಗಣೇಶ್ ಪಾಂಡೇಶ್ವರ ಬಗ್ಗೆ ಗಮನಹರಿಸಬೇಕಿದೆ. ಇನ್ನಾದರೂ ಆಳುವ ಸರ್ಕಾರ ಸಾಧಕ ಗಣೇಶ್‍ಗೆ ನೆರವು ನೀಡಿ ಕ್ರೀಡೆಗೆ    ಪ್ರೋತ್ಸಾಹ ನೀಡಲಿ ಎನ್ನುವುದೇ ನಮ್ಮ ಆಶಯ.

 

Related posts

Leave a Reply