Header Ads
Header Ads
Breaking News

ನೆಟ್‍ವರ್ಕ್ ಸಿಗದ ಕಡೆ ಕೂಪನ್ ಮೂಲಕ ಪಡಿತರ ವಿತರಣೆ ಮಾಡಿ:ಎಸ್. ಅಂಗಾರ ಸೂಚನೆ

ಬಯೋಮೆಟ್ರಿಕ್ ಪಡಿತರ ವ್ಯವಸ್ಥೆಗೆ ನೆಟ್‍ವರ್ಕ್ ಸಮಸ್ಯೆ ಉದ್ಭವವಾಗುವ ಪಡಿತರ ಕೇಂದ್ರಗಳಲ್ಲಿ ನೆಟ್‍ವರ್ಕ್ ಸಿಗುವವರೆಗೂ ಕೂಪನ್ ಮೂಲಕವೇ ಪಡಿತರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿ ಎಂದು ಸುಳ್ಯ ಶಾಸಕ ಎಸ್. ಅಂಗಾರ ಆಹಾರ ಇಲಾಖೆಗೆ ಸೂಚನೆ ನೀಡಿದ್ದಾರೆ.ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಎಸ್, ಅಂಗಾರರ ಅಧ್ಯಕ್ಷತೆಯಲ್ಲಿ ನಡೆದ ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ ತಾಲೂಕಿನಲ್ಲಿ ನೆಟ್‍ವರ್ಕ್ ಸಮಸ್ಯೆಯಿಂದ ಪಡಿತರ ಸಾಮಾಗ್ರಿಗಳ ವಿತರಣೆ ಸರಿಯಾಗಿ ಆಗುತ್ತಿಲ್ಲ. ಈಗಾಗಲೇ ಇಲಾಖೆಯಿಂದ ಪ್ರತಿ ಪಡಿತರ ಕೇಂದ್ರಗಳಿಗೆ ನೋಟಿಸ್ ಬಂದಿದೆ. ಮೊದಲಿದ್ದ ರೀತಿಯಲ್ಲಿಯೇ ಕೂಪನ್ ವ್ಯವಸ್ಥೆಯಲ್ಲಿ ವಿತರಣೆ ಮಾಡಿದರೆ ಒಳ್ಳೆಯದು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಆಹಾರ ನಿರೀಕ್ಷಕ ಶಂಕರ್ ಅವರು ತಾಲೂಕಿನ 16 ಕೇಂದ್ರಗಳಲ್ಲಿ ಪಡಿತರ ಆಹಾರ ಸಾಮಾಗ್ರಿ ವಿತರಣೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳು ಇರುವ ಕಾರಣ ನೆಟ್‍ವರ್ಕ್ ಸಮಸ್ಯೆ ತಲೆದೋರಿದೆ ಎಂದರು. ಇದಕ್ಕೆ ಶಾಸಕ ಎಸ್. ಅಂಗಾರ ಪ್ರತಿಕ್ರೀಯೆ ನೀಡಿ ಮಾತನಾಡಿ ಪಡಿತರ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಬಂದ ಬಳಿಕ ಫಲಾನುಭವಿಗಳ ತಂಬ್‍ಗಳನ್ನು ಪಡೆಯಲು ಸಮಸ್ಯೆಗಳಾಗುತ್ತಿದೆ. ಇದರಿಂದ ಸಮರ್ಪಕವಾಗಿ ಪಡಿತರ ವಿತರಣೆ ಸಾಧ್ಯವಾಗುತ್ತಿಲ್ಲ. ಕೇವಲ 16 ಕಡೆಗಳಲ್ಲಿ ಮಾತ್ರ ನೆಟ್‍ವರ್ಕ್ ಸಮಸ್ಯೆಗಳು ಇರುವುದಲ್ಲ. ಇನ್ನು ಹೆಚ್ಚಿನ ಪಡಿತರ ಕೇಂದ್ರಗಳಲ್ಲಿ ವಿತರಣೆ ವಿಳಂಬ ವಾಗುತ್ತಿದೆ. ಸರಿಯಾಗಿ ನೆಟ್‍ವರ್ಕ್ ವ್ಯವಸ್ಥೆ ಸಿಗುವ ವರೆಗೂ ಕೂಪನ್ ವ್ಯವಸ್ಥೆಯಲ್ಲೆ ಪಡಿತರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿ ಎಂದು ಶಾಸಕ ಎಸ್. ಅಂಗಾರ ಆಹಾರ ಇಲಾಖೆಗೆ ಸೂಚನೆ ನೀಡಿದರು.ಸುಳ್ಯ ನಗರ ಪಂಚಾಯತ್ ಪ್ರದೇಶದಲ್ಲಿ ನದಿ ಪರಂಬೋಕು ಮತ್ತು ರಸ್ತೆ ಪರಂಬೋಕು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ಕಟ್ಟಲಾಗಿದೆ. ಇಂತಹ ಕಟ್ಟಡಗಳಿಗೆ ಮಂಜುರಾತಿ ಪಡೆಯಲಾಗಿದೆಯಾ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಗರ ಪಂಚಾಯತ್ ಮುಖ್ಯಾಧಿಕಾರಿಯವರು ನಗರ ಪಂಚಾಯತ್ ಇಂತಹ ಕಟ್ಟಡಗಳಿಗೆ ಪರವಾನಿಗೆ ನೀಡಿಲ್ಲ. ಇಂತಹ ಕಟ್ಟಡಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕರು ನದಿ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳಿಗೆ ಯಾರಿಂದ ಮಂಜೂರಾತಿ ಪಡೆಯಲಾಗಿದೆ. ಹಾಗೂ ಅಂತಹ ಜಾಗದಲ್ಲಿ ಇರುವ ಕಟ್ಟಡಗಳ ಕುರಿತು ನಗರ ಪಂಚಾಯತ್, ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಸರಿಯಾದ ದಾಖಲೆಗಳೊಂದಿಗೆ ವರದಿ ನೀಡಬೇಕು. ಅಲ್ಲದೇ ನಗರದ ಪುಟ್‍ಪಾತ್ ಬದಿಯಲ್ಲಿ ಕಟ್ಟಿರುವ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ಏಕಾಏಕಿ ಮದ್ಯದಂಗಡಿ ತೆರೆಯಲಾಗಿದೆ. ಪಂಚಾಯತ್ ಪರವಾನಿಗೆ ನೀಡಿಲ್ಲ. ಇಗಾಗೇ ಅದನ್ನು ಮುಚ್ಚಿಸಲು ಗ್ರಾಮದ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದಾರೆ. ಕೂಡಲೇ ಇದನ್ನು ಮುಚ್ಚಿಸುವ ಕೆಲಸ ಆಗಬೇಕು ಎಂದು ತಾಲೂಕು ಪಂಚಾಯತ್ ಅದ್ಯಕ್ಷ ಚನಿಯ ಕಲ್ತಡ್ಕ ಹೇಳಿದರು. ಇದಕ್ಕೆ ಉತ್ತರಿಸಿದ ತಾ.ಪಂ ಮುಖ್ಯಾದಿಕಾರಿ ಮಧುಕುಮಾರ್ ಬಾರ್ ಲೈಸನ್ಸ್ ಗ್ರಾಮ ಪಂಚಾಯತ್ ಕೊಡುವುದಿಲ್ಲ. ಅಬಕಾರಿ ಇಲಾಖೆಯೇ ಕೊಡುತ್ತಿದೆ. ಗ್ರಾಮ ಪಂಚಾಯತ್ ಕಟ್ಟಡದಲ್ಲಿ ವ್ಯಾಪಾರ ಮಾಡಲು ಪರವಾನಿಗೆ ನೀಡಿದೆ. ಈಗಾಗಲೇ ಜನರು ವಿರೋಧಿಸುತ್ತಿದ್ದಾರೆ ಇದರ ಬಗ್ಗೆ ಪಂಚಾಯತ್ ಸೂಕ್ತ ವರದಿಗಳ ಮೂಲಕ ಕಮಿಷನರ್‍ಗೆ ವರದಿ ನೀಡಲಾಗುವುದು ಎಂದರು.ಇದಕ್ಕೆ ಉತ್ತರಿಸಿದ ಶಾಸಕರು ಸರಕಾರಕ್ಕೆ ಸರಿಯಾದ ನಿಯಮಗಳು ಇಲ್ಲದ ಕಾರಣ ಈಗಾಗುತ್ತಿದೆ. ಸರಕಾರವೇ ಪರವಾನಿಗೆ ನೀಡುವುದಾದರೆ ಪಂಚಾಯತ್‍ಗಳ ಅವಶ್ಯಕತೆ ಏಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಕೂಡಲೇ ಕಮಿಷನರ್‍ಗೆ ವರದಿ ನೀಡಲು ಸೂಚನೆ ನೀಡಿದರು.ಕಂದಾಯ ಇಲಾಖೆಯಲ್ಲಿ 94ಸಿ ಹಕ್ಕುಪತ್ರ ವಿತರಣೆ ಆಗದೇ ಬಾಕಿ ಇದೆ. ಕಳೆದ ಮೂರು ತಿಂಗಳಿನಿಂದ ಹಕ್ಕುಪತ್ರ ವಿತರಣೆ ಮಾಡಿಲ್ಲ ಎಂದು ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು ಇದಕ್ಕೆ ಉತ್ತರಿಸಿದ ಕಂದಾಯ ಇಲಾಖೆಯ ಅದಿಕಾರಿ 989 94ಸಿ ಅರ್ಜಿಗಳಲ್ಲಿ 744 ಅರ್ಜಿಗಳಿಗೆ ಹಕ್ಕುಪತ್ರ ವಿತರಣೆ ಆಗಿದೆ. ಇನ್ನು 245 ಅರ್ಜಿಗಳಿಗೆ ಹಕ್ಕುಪತ್ರ ವಿತರಿಸಲು ಬಾಕಿ ಇದೆ ಎಂದು ಮಾಹಿತಿ ನೀಡಿದರು. ತಾಲೂಕಿನಲ್ಲಿ ಆಧಾರ್ ಕಾರ್ಡು ಸಮಸ್ಯೆ ಆಗುತ್ತಿದೆ. ಸರಿಯಾದ ವ್ಯವಸ್ಥೆ ಇಲ್ಲ. ಸಾಲಮನ್ನಾ ಸೌಲಭ್ಯಕ್ಕೆ ಆಧಾರ್ ಕಾರ್ಡ್ ಅವಶ್ಯಕತೆ ಇದೆ ಎಂದು ಜಿ.ಪಂ ಸದಸ್ಯ ಎಸ್.ಎನ್. ಮನ್ಮಥ ಹೇಳಿದರು. ದೀನ್‍ದಯಾಳ್ ವಿದ್ಯುಧ್ದೀಕರಣ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕೊಡಲು ಬಾಕಿ ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಶಾಸಕರು ತಿಳಿಸಿದರು. ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಶಿಕ್ಷಕರ ಕೊರತೆಗಳಿಲ್ಲ. ಈಗಾಗಲೇ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಶಾಲೆಗಳಿಗೆ 123 ಮಂದಿ ಮತ್ತು ಪ್ರೌಢಶಾಲೆಗೆ 12 ಮಂದಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಪ್ರಭಾರ ಶಿಕ್ಷಣಾಧಿಕಾರಿ ಸಭೆಗೆ ತಿಳಿಸಿದರು. ತಾಲೂಕಿನಲ್ಲಿ ಆನೆಗಳ ಹಾವಳಿಯನ್ನು ತಡೆಗಟ್ಟಲು ಈಗಾಗಲೇ ಆನೆಕಂದಕಗಳನ್ನು ನಿರ್ಮಿಸಲು ಕೈಗೊಂಡಿದ್ದೇವೆ. ಆನೆಗಳನ್ನು ಹಿಮ್ಮೆಟ್ಟಿಸಲು 7 ಕಿ.ಮೀ ಉದ್ದದ ಆನೆ ಕಂದಕ ನಿರ್ಮಾಣ ಮಾಡಲಿದ್ದೇವೆ. ಹೊಳೆಯ ಮೂಲಕ ಆನೆ ದಾಟುವಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಅಲ್ಲದೇ ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಹೇಳಿದರು.ಸಭೆಯಲ್ಲಿ ತಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳುರು, ಕೆಡಿಪಿ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧುಕುಮಾರ್, ಅದಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply