Breaking News

ನೇತ್ರಾವತಿ ನದಿಯಲ್ಲಿ ಕೋಳಿ ತ್ಯಾಜ್ಯ, ಕಸಕಡ್ಡಿಗಳ ರಾಶಿ, ಗೋಳಿತೊಟ್ಟುನಲ್ಲಿನದಿ ಮಲಿನ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ


ನದಿ ಮೂಲಗಳಾದ ಕಿರು ನದಿ, ಹಳ್ಳ, ತೋಡುಗಳಿಗೆ ಕೋಳಿ ತ್ಯಾಜ್ಯ ಸೇರಿದಂತೆ ಇನ್ನಿತರ ಕಸಕಡ್ಡಿಗಳನ್ನು ಎಸೆಯದಂತೆ ಜಾಗೃತಿ ಮೂಡಿಸಲು ಹಾಗೂ ನದಿ ಮಲೀನಗೊಳಿಸುವುದರ ವಿರುದ್ಧ ಮುಂದಿನ ಹೋರಾಟಕ್ಕೆ ರೂಪುರೇಖೆ ತಯಾರಿಸಲು ಪುತ್ತೂರು ತಾಲೂಕಿನ ಗೋಳಿತೊಟ್ಟಿನಲ್ಲಿ ಜನಜಾಗೃತಿ ಸಭೆ ನಡೆಯಿತು.
ನದಿ ಮೂಲಗಳಾದ ಕಿರು ನದಿ, ಹಳ್ಳ, ತೋಡುಗಳಿಗೆ ಕೋಳಿ ತ್ಯಾಜ್ಯ ಸೇರಿದಂತೆ ಇನ್ನಿತರ ಕಸಕಡ್ಡಿಗಳನ್ನು ಎಸೆಯುವುದರ ವಿರುದ್ಧ ಇಚಿಲಂಪಾಡಿಯ ನೀತಿ ಟ್ರಸ್ಟ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಗೋಳಿತೊಟ್ಟು ಜಂಕ್ಷನ್‌ನಲ್ಲಿ ಬೃಹತ್ ಜನಜಾಗೃತಿ ಸಭೆ ಹಾಗೂ ಹಕ್ಕೊತ್ತಾಯ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಉಪ್ಪಿನಂಗಡಿ ಪೊಲೀಸ್ ಠಾಣೆಯಿಂದ ಪ್ರತಿಭಟನೆಗೆ ಅನುಮತಿ ದೊರೆಯದಿದ್ದುದರಿಂದ ಗೋಳಿತೊಟ್ಟು ಪಂಚಾಯತ್ ಬಳಿ ಜನಜಾಗೃತಿ ಸಭೆ ನಡೆಸಿ, ಮುಂದಿನ ಹೋರಾಟಕ್ಕೆ ರೂಪುರೇಖೆ ತಯಾರಿಸಲಾಯಿತು. ಸಭೆಯನ್ನುದ್ದೇಶಿಸಿ ಮರ್ದಾಳದ ಬೆಥನಿ ಜೀವನ ಜ್ಯೋತಿ ವಿಶೇಷ ಶಾಲೆಯ ನಿರ್ದೇಶಕ ರೆವೆರೆಂಡ್. ಫಾದರ್ ಆಂಟನಿ ಮಾತನಾಡಿ, ನಾನೆಂಬುದನ್ನು ಬಿಟ್ಟು ನಾವೆಂಬ ಮನೋಭಾವನೆಯಿಂದ ಪರಿಸರವನ್ನು ನಾವು ಸ್ವಚ್ಚಗೊಳಿಸಬೇಕು. ಆಗ ನಾವು ಹಾಗೂ ನಮ್ಮ ಊರು ಸುಧಾರಣೆಯಾಗಲು ಸಾಧ್ಯ. ಇದರೊಂದಿಗೆ ನದಿ ನೀರು ಮಲೀನಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವೂ ಇದೆ ಎಂದು ಹೇಳಿದರು.
ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿ ಉಪ್ಪಿನಂಗಡಿ ಇದರ ಸಂಚಾಲಕ ಡಾ. ನಿರಂಜನ್ ರೈ ಮಾತನಾಡಿ, ನದಿ ನೀರು ಬೇಕು ಎಂದು ಹೋರಾಟ ಮಾಡಿದರೆ ಸಾಲದು. ಅದು ಯಾವತ್ತೂ ಅಶುದ್ಧ ಆಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮಗೆಲ್ಲರಿಗೂ ಇದೆ ಎಂದರು. ಸಭೆಯಲ್ಲಿ ಅಡೇಕಲ್ ಮದ್ರಸ ಮು‌ಅಲ್ಲಿಂ ಮಹಮ್ಮದ್ ಹಾರಿಸ್ ಕೌಸರಿ, ಪುತ್ತೂರು ಜನ ಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೆಶಕ ಸೀತಾರಾಮ ಶೆಟ್ಟಿ, ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ನೀತಿ ಟ್ರಸ್ಟ್ ಸಂಚಾಲಕ ಜಯನ್ ಇಚಿಲಂಪಾಡಿ ಮಾತನಾಡಿದರು.

Related posts

Leave a Reply