Header Ads
Header Ads
Breaking News

ನ.3ರಂದು ಬಂಟ್ವಾಳ ತಾಲೂಕು ಮಟ್ಟದ ಧರಣಿ ಸತ್ಯಾಗ್ರಹ

ಬಂಟ್ವಾಳ: ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂಬ ಕಾರಣದಿಂದಲೇ ಉದ್ದೇಶಪೂರ್ವಕವಾಗಿ ಮೈತ್ರಿ ಸರಕಾರವು ಎರಡೂ ಜಿಲ್ಲೆಗಳ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಲು ಹೊರಟಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಹೇಳಿದ್ದಾರೆ. ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾಡಿ ಘಾಟ್ ರಸ್ತೆ ಸರಿಯಾದರೂ ಸಂಚಾರಕ್ಕೆ ಸರಕಾರ ಶೀಘ್ರ ಅನುವುಮಾಡಿಕೊಡಲಿಲ್ಲ. ಬಳಿಕ ಒತ್ತಡ ಹೇರಿದ ನಂತರ ಬಿಡಲಾಯಿತು.

ಇದೀಗ ಜನಸಾಮಾನ್ಯರಿಗೆ ಮರಳು ಕೈಗೆಟಕುವ ದರದಲ್ಲಿ ದೊರಕದಂತೆ ಮಾಡಲಾಗುತ್ತಿದೆ. ಕೃಷಿ ಬೆಳೆ ಹಾನಿ ಅರ್ಜಿಗಳ ವಿಲೇವಾರಿಯಾಗುತ್ತಿಲ್ಲ. ಶಿಕ್ಷಕರ ಸಂಬಳವೂ ಅವ್ಯವಸ್ಥಿತವಾಗಿದೆ. ಆಡಳಿತ ಯಂತ್ರವನ್ನೇ ಸ್ಥಗಿತಗೊಳ್ಳುವಂತೆ ರಾಜ್ಯ ಸರಕಾರ ಮಾಡುತ್ತಿದ್ದು, ವಿಶೇಷವಾಗಿ ಬಿಜೆಪಿ ಶಾಸಕರು ಇರುವ ಪ್ರದೇಶಗಳಲ್ಲಿ ಕೆಲಸ ಕಾರ್ಯಗಳು ನಡೆಯದಂತೆ ಮಾಡಲಾಗುತ್ತಿದೆ ಎಂದು ದೂರಿದರು.

ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಮರಳು ಸಮಸ್ಯೆ, ಅಡಕೆ ಕೊಳೆರೋಗದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ತಕ್ಷಣ ಪರಿಹಾರ ಮತ್ತು ಭೂಪರಿವರ್ತನೆ ಕಾರ್ಯಗಳು ಸರಳಗೊಳಿಸುವಂತೆ ಒತ್ತಾಯಿಸಿ ಶನಿವಾರ ನ,3ರಂದು ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತಾಲೂಕು ಮಟ್ಟದ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್, ಮರಳು ಸಮಸ್ಯೆಗೆ ಕಾರಣ ಕಾಂಗ್ರೆಸ್ ನ ನೀತಿ. ಇಲ್ಲಿ 450 ಮಂದಿಗೆ ಬೇನಾಮಿ ಹೆಸರಲ್ಲಿ ಮರಳು ಪರ್ಮಿಟ್ ದೊರಕುವಂತೆ ಮಾಡಲಾಗಿತ್ತು ಎಂದು ಆಪಾದಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿ.ಆನಂದ, ದಿನೇಶ್ ಅಮ್ಟೂರು, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ ಉಪಸ್ಥಿತರಿದ್ದರು.

Related posts

Leave a Reply