Breaking News

ಪಕ್ಕದ ಸೈಟ್‌ಗೆ ತುಂಬಿದ ಮಣ್ಣು ಕುಸಿದು ಮನೆಗೆ ಹಾನಿ,  ಮಂಗಳೂರಿನ ಬಿಕರ್ನಕಟ್ಟೆಯ ಹಿರಿಯ ನಾಗರಿಕ ಆಲ್ವಿನ್‌ರಿಗೆ ಸಂಕಷ್ಟ


ಮಳೆಗಾಲದಲ್ಲಿ ಪ್ರಾಕೃತಿಕ ವೈಪರೀತ್ಯದಿಂದಾಗಿ ತಡೆ ಗೋಡೆ ಕುಸಿಯುವುದು, ಗುಡ್ಡ ಕುಸಿಯುವುದು ಸರ್ವೆ ಸಾಮಾನ್ಯ. ಆದರೆ ನಗರ ಪಾಲಿಕೆ ಅಧಿಕಾರಿಗಳ ಹಾಗೂ ಪೊಲೀಸರ ವೈಫಲ್ಯ ಹಾಗೂ ಸ್ವಜನಪಕ್ಷಪಾತದಿಂದಾಗಿ ಮಣ್ಣು ಕುಸಿದು ಪಕ್ಕದ ಸೈಟ್ನ ಮನೆಗೆ ಭಾರೀ ಹಾನಿ ಸಂಭವಿಸಿದ ಘಟನೆ ಮಂಗಳೂರಿನ ಬಿಕರ್ನಕಟ್ಟೆಯ ಸೌಜನ್ಯ ಲೇನ್ನಲ್ಲಿ ನಡೆದಿದೆ.
ಈ ಅವಘಡವನ್ನು ಪ್ರಾಕೃತಿಕ ಅವಘಡಕ್ಕಿಂತ ಹೆಚ್ಚಾಗಿ ಮಾನವ ನಿರ್ಮಿತ ಅವಘಡ ಎಂದು ಹೇಳಿದರೆ ತಪ್ಪಾಗಲಾರದು. ಮಂಗಳೂರಿನ ಬಿರ್ಕನಕಟ್ಟೆಯ ಸೌಜನ್ಯ ಲೇನ್ನಲ್ಲಿರುವ ನೈಗರ್ ಹಿಲ್ಸ್ ನಿವಾಸಿ ಆಲ್ವಿನ್ ಕುಲಾಸೋ ಅವರ ಮನೆ ಈಗ ಸಂಪೂರ್ಣ ಅಪಾಯದ ಅಂಚಿಗೆ ಬಂದು ನಿಂತಿದೆ. ಇದೇ ಜೂನ್ ೧೧ರ ಭಾನುವಾರ ರಾತ್ರಿ ಪಕ್ಕದ ಸೈಟ್ಗೆ ತುಂಬಿಸಲಾಗಿದ್ದ ಮಣ್ಣು ಜರಿದು ನೇರವಾಗಿ ಆಲ್ವಿನ್ ಅವರ ಮನೆಗೆ ಬಿದ್ದಿದೆ. ಮಣ್ಣು ಕುಸಿದ ರಭಸಕ್ಕೆ ಆಲ್ವಿನ್ ಅವರ ಮನೆಯ ಕಂಪೌಂಡ್ ಗೋಡೆ ಕೂಡ ಕುಸಿದು ಬಿದ್ದಿದೆ. ಮಣ್ಣು ಹಾಗೂ ಕಂಪೌಂಡ್ ಗೋಡೆ ಕುಸಿದ ರಭಸಕ್ಕೆ ಆರ್.ಸಿ.ಸಿ. ಮನೆಯ ಹಿಂಭಾಗದ ಗೋಡೆ ಕುಸಿತಕ್ಕೊಳಗಾಗಿದೆ. ಮನೆ ಗೋಡೆಗೆ ಹಾನಿಯಾಗಿ ಕಿಟಿಕಿಗಳು ಅರ್ಧ ಗೋಡೆ ಸಮೇತ ಕುಸಿದಿದೆ. ಮನೆಯ ಡ್ರೈನೇಜ್ ಲೈನ್ಗೆ ಮಣ್ಣು ತುಂಬಿ ಮನೆಯೊಳಗೆ ಮಳೆ ನೀರು ಸೇರಿಕೊಳ್ಳುವಂತಾಗಿದೆ.
ಬಿಕರ್ನಕಟ್ಟೆಯ ಸೌಜನ್ಯ ಲೇನ್ನಲ್ಲಿರುವ ನೈಗರ್ ಹಿಲ್ಸ್ ನಲ್ಲಿ ರೋಬಾಟ್ ಡಿಸೋಜ ಎಂಬವರಿಗೆ ಸೇರಿದ ಜಾಗ ಇದೆ. ಈ ಜಾಗವನ್ನು ಇದೀಗ ದಿನಕರ ಶೆಟ್ಟಿ ಎಂಬವರು ಖರೀದಿಸಿದ್ದಾರೆ. ಈ ಜಾಗವು ಪಕ್ಕದ ರಸ್ತೆಗೆ ಸಮಾನವಾಗಿ ನೆಲಮಟ್ಟದಲ್ಲಿತ್ತು. ಆದರೆ ಜಾಗದ ಹಿಂಭಾಗದಲ್ಲಿ ದೊಡ್ಡ ಗುಡ್ಡ ಇದ್ದು, ಈ ಗುಡ್ಡವನ್ನು ದಿನಕರ ಶೆಟ್ಟಿ ಅವರು ಸಮತಟ್ಟು ಮಾಡುವ ಸಂದರ್ಭದಲ್ಲಿ ಪಕ್ಕದ ಆಲ್ವಿನ್ ಕುಲಾಸೋ ಅವರ ಮನೆ ಕಂಪೌಂಡ್ ತನಕ ತಂದು ಮಣ್ಣು ತುಂಬಿಸಿದ್ದಾರೆ. ಯಾವುದೇ ತಡೆಗೋಡೆ ನಿರ್ಮಿಸದೆ ಆಲ್ವಿನ್ ಕುಲಾಸೋ ಅವರ ಮನೆಯ ಕಂಪೌಂಡ್ ಗೋಡೆಗೆ ಸಮಾನಾಂತರವಾಗಿ ೯ ಅಡಿ ಎತ್ತರಕ್ಕೆ ಮಣ್ಣನ್ನು ಪಕ್ಕದ ಸೈಟ್ನಲ್ಲಿ ತುಂಬಿಸಲಾಗಿದೆ. ಈ ಸಂದರ್ಭದಲ್ಲಿ ಆಲ್ವಿನ್ ಅವರು ನಗರ ಪಾಲಿಕೆ ಹಾಗೂ ಕಂಕನಾಡಿ ಗ್ರಾಮಾಂತರ ಠಾಣೆಗೆ ದೂರು ಕೂಡ ನೀಡಿದ್ದಾರೆ. ಆದರೆ ಆಲ್ವಿನ್ ಅವರ ದೂರಿಗೆ ಯಾರು ಸ್ಪಂದಿಸಲಿಲ್ಲ. ಕಳೆದ ನವೆಂಬರ್ ತಿಂಗಳ ೫ರಂದು ಭಾಗಶ ಕಂಪೌಂಡ್ ಗೋಡೆ ಕುಸಿದು ಬಿತ್ತು. ಕಂಪೌಂಡ್ ಗೋಡೆ ಕುಸಿದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಇಬ್ಬರನ್ನು ಕರೆಸಿ ಮತ್ತೆ ಕಂಪೌಂಡ್ ಗೋಡೆಯನ್ನು ದುರಸ್ತಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಆದರೆ ತಡೆಗೋಡೆ ನಿರ್ಮಿಸುವಂತೆ ದಿನಕರ ಶೆಟ್ಟಿ ಅವರಿಗೆ ಖಡಕ್ ಸೂಚನೆಯನ್ನು ನೀಡಿರಲಿಲ್ಲ. ಇದರಿಂದಾಗಿ ಮತ್ತೆ ಈಗ ಮಣ್ಣು ಕುಸಿದಿದೆ.
ತಡೆಗೋಡೆ ನಿರ್ಮಿಸಿದ ಬಳಿಕವಷ್ಟೇ ಪಕ್ಕದ ಸೈಟ್ಗೆ ಮಣ್ಣು ತುಂಬಿಸುವಂತೆ ಆಗ್ರಹಿಸಿ ಆಲ್ವಿನ್ ಕುಲಾಸೋ ಅವರು ಮತ್ತೆ ಕಳೆದ ಡಿಸೆಂಬರ್ ೧೭ರಂದು ಮಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಿದ್ದರು. ಕುಲಾಸೋ ಅವರ ದೂರಿಗೆ ಸ್ಪಂದಿಸಿದ ಪಾಲಿಕೆ ದಿನಕರ ಶೆಟ್ಟಿ ಅವರಿಗೆ ಭದ್ರವಾದ ತಡೆಗೋಡೆ ನಿರ್ಮಿಸುವಂತೆ ನೋಟೀಸ್ ಜಾರಿ ಮಾಡಿತ್ತು. ಆದರೆ ಪಾಲಿಕೆಯ ನೋಟೀಸ್ಗೆ ದಿನಕರ ಶೆಟ್ಟಿ ಅವರು ಸೂಕ್ತವಾಗಿ ಸ್ಪಂದಿಸದೆ ಮತ್ತೆ ಯಥಾಪ್ರಕಾರ ಮಣ್ಣು ತುಂಬಿದ್ದಾರೆ. ಇದರಿಂದಾಗಿ ಮೊನ್ನೆ ಭಾನುವಾರ ಮಣ್ಣು ಕುಸಿದು ಆಲ್ವಿನ್ ಅವರ ಮನೆಗೆ ಭಾರೀ ಹಾನಿಯಾಗಿದೆ. ಮನೆಗೆ ಮಳೆ ನೀರು ನುಗ್ಗಿದೆ. ಮನೆಯಲ್ಲಿ ವಾಸವಾಗಿದ್ದ ಕುಟುಂಬವನ್ನು ತೆರವು ಮಾಡಬೇಕಾದ ಪ್ರಸಂಗ ಒದಗಿದ ಬಂದಿದೆ. ಪಾಲಿಕೆಯವರು ಹಾಗೂ ಪೊಲೀಸರು ತೋರಿಸಿದ ನಿರ್ಲಕ್ಷ್ಯ ಹಾಗೂ ಸ್ವಜನಪಾತದಿಂದಾಗಿ ಆಲ್ವಿನ್ ಅವರ ಮನೆ ತೊಂದರೆಗೆ ಈಡಾಗಿದೆ, ಲಕ್ಷಾಂತರ ರೂಪಾಯಿ ನಷ್ಟ ಆಗಿದೆ.

Related posts

Leave a Reply