
ಬಂಟ್ವಾಳ: ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ನಿರ್ಮಾಣಗೊಂಡ ನೂತನ ಶಿಲಾಮಯ ಗುಡಿಯಲ್ಲಿ ಗುರುವಾರ ಮುಂಜಾನೆ 7.35 ರ ಶುಭ ಮುಹೂರ್ತದಲ್ಲಿ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ವಿಜ್ರಂಭಣೆಯಿಂದ ನಡೆಯಿತು.
ಲೋಕೇಶ್ ಶಾಂತಿ ಪೌರೋಹಿತ್ಯದಲ್ಲಿ ಅರ್ಚಕ ವರ್ಗದಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದು ಶ್ರೀ ಕೊರಗಜ್ಜ ದೈವದ ಶಿಲಾಮಯ ಬಿಂಬವನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಹೋಮ ನಡೆದು ಪ್ರತಿಷ್ಠಾಪಿತ ಕೊರಗಜ್ಜ ಶಿಲಾಬಿಂಬಕ್ಕೆ ಪಂಚದ್ರವ್ಯ ಅಭಿಷೇಕ ಹಾಗೂ ಕಲಶಾಭಿಷೇಕ ನಡೆಯಿತು. ಬಳಿಕ ಮಹಾಪೂಜೆ, ಮಂಗಳಾರತಿ ನಡೆದು ಗಂಧ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ನೂತನ ಗುಡಿ ನಿರ್ಮಾಣ ಸಮಿತಿಯ ಅಧ್ಯಕ್ಷ, ಉದ್ಯಮಿ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಪ್ರಮುಖರಾದ ಭುವನೇಶ್ ಪಚ್ಚನಡ್ಕ , ಇಂದೀರೇಶ್, ಸದಾನಂದ ಶೆಟ್ಟಿ ಸಹಿತ ಹಲವು ಮಂದಿ ಕೊರಗಜ್ಜ ದೈವದ ಭಕ್ತರು ಉಪಸ್ಥಿತರಿದ್ದರು. ದೈವಸ್ಥಾನದ ಆವರಣದಲ್ಲಿ ಹರೀಶ್ ಶಾಂತಿ ಪಂಜಿಕಲ್ಲು ಅವರು ರಂಗೋಲಿ ಹುಡಿಯಲ್ಲಿ ಬಿಡಿಸಿದ ಕೊರಗಜ್ಜ ದೈವದ ಚಿತ್ರ ಗಮನ ಸೆಳೆಯುತ್ತಿತ್ತು. ಆ.23ರಂದು ಶನಿವಾರ ರಾತ್ರಿ ಮಗೆರ್ಕಳ ಭಂಡಾರ ಇಳಿದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾಥ್ರಿ 10ಕ್ಕೆ ತನ್ನಿಮನಿಗ ಗರಡಿ ಇಳಿಯಲಿದೆ. ಜ.24ರಂದು ಆದಿತ್ಯವಾರ ಬೆಳಿಗ್ಗೆ 5 ಗಂಟೆಯಿಂದ ಕೊರಗಜ್ಜ ದೈವದ ಕೋಲೋತ್ಸವ ನಡೆಯಲಿದೆ. ರಾತ್ರಿ 8 ರಿಂದ ಕೊರಗಜ್ಜ ದೈವದ ಹರಕೆಯ ಕೋಲ ನಡೆಯಲಿದೆ.