
ಪಡುಬಿದ್ರಿ- ಎರ್ಮಾಳು ಕಿರು ಸೇತುವೆ ಸಮೀಪ ನಡೆಯುತ್ತಿರುವ ಕಾಮಗಾರಿಗಾಗಿ ವಾಹನ ಪಥ ಬದಲಾವಣೆಗಾಗಿ ತೆರೆದಿಡಲಾದ ಅವೈಜ್ಞಾನಿಕ ಡೈವರ್ಷನ್ನಲ್ಲಿ ರಾತ್ರಿ ಸಮಯ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಪ್ರಾಣ ಹಾನಿ ಸಂಭವಿಸುವ ಮುನ್ನ ಹೆದ್ದಾರಿ ಇಲಾಖೆ ಎಚ್ಚರಗೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಕುಂಟುತ್ತಾ ಸಾಗಿದ ಕಿರು ಸೇತುವೆ ನಿರ್ಮಾಣಗೊಂಡು ಒಂದು ಪಾಶ್ವದ ರಸ್ತೆ ನಿರ್ಮಾಣಗೊಳ್ಳಲು ಬರೋಬ್ಬರಿ ಹತ್ತು ವರ್ಷಗಳೇ ಸಂದು ಹೋಗಿದೆ. ಇದೀಗ ವಾಹನ ಸಂಚಾರಕ್ಕೆ ತೆರವು ಮಾಡಿಕೊಡಲಾಗಿದೆ. ಮತ್ತೊಂದು ಪಾಶ್ವದ ರಸ್ತೆ ನಿರ್ಮಾಣಕ್ಕಾಗಿ ಸೇತುವೆಯ ಎರಡೂ ಬದಿಯಲ್ಲೂ ಡೈವರ್ಷನ್ ತೆರೆದಿದ್ದು, ಆ ಡೈವರ್ಷನ್ ಅವೈಜ್ಞಾನಿಕವಾಗಿದ್ದರಿಂದ ವಾಹನ ಸವಾರರ ಗಮನಕ್ಕೆ ಬಾರದೆ ಕೆಲವೊಂದು ವಾಹನಗಳು ಹೆದ್ದಾರಿಯಲ್ಲಿ ಇರಿಸಲಾದ ತಾತ್ಕಾಲಿಕ ತಡೆ ಬೇಲಿಗಳಿಗೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು ಬೃಹತ್ ಅಪಘಾತಗಳ ಸೂಚನೆ ನೀಡುವಂತ್ತಿದೆ. ಮತ್ತೆ ಕೆಲವು ವಾಹನ ಚಾಲಕರಿಗೆ ಡೈವರ್ಷನ್ ಸೂಚನಾ ಫಲಕ ಗಮನಕ್ಕೆ ಬಾರದೆ ಏಕಮುಖ ಸಂಚಾರ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಾಗಿ ಹೆದ್ದಾರಿಯ ಈ ಭಾಗವನ್ನು ಅಪಘಾತ ವಲಯವಾಗಿ ರೂಪಿಸುತ್ತಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಸಂಬಂದ ಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಮುಂದೆ ಸಂಭವಿಸ ಬಹುದಾದ ಅನಾಹುತವನ್ನು ತಪ್ಪಿಸ ಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಅವ್ಯವಸ್ಥೆಯನ್ನು ಕಣ್ಣಾರೆ ನೋಡುತ್ತಿರುವ ಸ್ಥಳಿಯರು.