Header Ads
Breaking News

ಪಡುಬಿದ್ರಿ “ಬ್ಲೂಫ್ಲಾಗ್” ಬೀಚ್ ನಿರ್ಮಾಣ ಅಂತಿಮ ಹಂತದಲ್ಲಿ

ಉಡುಪಿ ಜಿಲ್ಲೆಯ ಪಡುಬಿದ್ರಿ ವಿಶಾಲ ಕಡಲ ತೀರ ಎಂಡ್ ಪಾಯಿಂಟ್ ಪ್ರದೇಶದಲ್ಲಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಬ್ಲೂಫ್ಲಾಗ್ ಬೀಚ್ ಯೋಜನಾ ಕಾಮಗಾರಿ ತಿಂಗಳೋಳಗೆ ಅಂತಿಮ ಸ್ಪರ್ಶ ಕಾಣಲಿದ್ದು, ಆಕರ್ಷಕ ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಾಣವಾಗುತ್ತಿರುವ ಈ ಪ್ರದೇಶ ಪ್ರವಾಸಿಗರ ನೆಚ್ಚಿನ ತಾಣವಾಗುವುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಕೇಂದ್ರ ಸರ್ಕಾರದ ಅನುಮೋದನೆಯಂತೆ ಗೊತ್ತು ಮಾಡಲಾದ ಬ್ಲೂಫ್ಲಾಗ್ ಬೀಚ್ ಅಭಿವೃದ್ಧಿ ಯೋಜನೆಯ ಕಾಮಗಾರಿ ಗುತ್ತಿಗೆಯನ್ನು ಗುರ್ಗಾಂವ್‍ನ ಎ ಟು ಝಡ್‍ಗೆ ವಹಿಸಿ ಕೊಡಲಾಗಿತ್ತು, ಈ ನಿಟ್ಟಿನಲ್ಲಿ ಪಡುಬಿದ್ರಿ-ಹೆಜಮಾಡಿ ಅಳುವೆ ಸಮೀಪ ಕಾಮಗಾರಿ ಆರಂಭಗೊಳಿಸಲಾಯಿತಾದರೂ, ಕಡಲು ಕೊರೆತದಂಥಹ ಪ್ರಕೃತಿ ವಿಕೋಪದಿಂದಾಗಿ ಸ್ಥಳ ಬದಲಾವಣೆಗೊಂಡು ಇದೀಗ ಎಂಡ್ ಪಾಯಿಂಟ್‍ನಲ್ಲಿ ಕಳೆದ 2019ರ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಗೊಂಡಿದೆ. ರಾಜ್ಯ ಸರ್ಕಾರದ ಸುಮಾರು ಇಪ್ಪತ್ತೈದು ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲ ಸೌಕರ್ಯ ಯೋಜನೆಯನ್ನು ಇಲ್ಲಿ ಕಲ್ಪಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಬೀಚ್ ಪ್ರಬಂಧಕ ವಿಜಯ್ ಶೆಟ್ಟಿ, ಇದೀಗ ಬ್ಲೂಫ್ಲಾಗ್ ಯೋಜನೆ ಅಂತಿಮ ಅಂತದಲ್ಲಿದ್ದು ಮುಂದಿನ ಹದಿನೈದು ದಿನಗಳೋಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ, ಇಷ್ಟರಲ್ಲೇ ತಾತ್ಕಾಲಿಕ ಶೌಚಾಲಯ, ಸ್ನಾನಗೃಹ, ಬಟ್ಟೆ ಬದಲಿಸುವ ಕೋಣೆ, ನೀರು ಶುದ್ಧೀಕರಣ ಘಟಕ, ಸಿಸಿ ಕ್ಯಾಮಾರ ನಿಯಂತ್ರಣಾ ಕೊಠಡಿ, ಮಕ್ಕಳ ಪಾರ್ಕ್, ಪ್ರಥಮ ಚಿಕಿತ್ಸಾ ಕೊಠಡಿ, ಘನತ್ಯಾಜ್ಯ ಸಂಸ್ಕರಣಾ ಘಟಕ, ಹಾಗೂ ಸೋಲಾರ್ ಪ್ಯಾನಲ್ ಅಳಡಿಸಿ ಬೀಚ್‍ಗೆ ಬೇಕಾಗುವ ವಿದ್ಯುತ್ ಉತ್ಪಾದಿಸಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಕಾಲುದಾರಿಗಳು ಸಹಿತ ವಾಹನ ನಿಲುಗಡೆ ಪ್ರದೇಶಕ್ಕೆ ಇಂಟರ್ ಲಾಕ್ ಅಳವಡಿಸಲಾಗಿದ್ದು, ಹಸುರು ಹುಲ್ಲು ಹಾಸುವಿಕೆ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಮಾಹಿತಿ ಫಲಕ ಅಳವಡಿಸಲಾಗಿದೆ.

ಈ ಯೋಜನೆಯ ಮುಖ್ಯಸ್ಥರು ಭಾವಿಸಿದಂತೆ ಈ ಮಹಾಮಾರಿ ಕೊರೊನಾ ತೊಲಗಿದರೆ ಕೇಂದ್ರ ನಿರ್ಣಾಯಕ ಮಂಡಳಿಯಿಂದ ಪರಿಶೀಲನೆ ನಡೆದು ಇನ್ನು ಕೆಲವೇ ದಿನಗಳಲ್ಲಿ ಅದ್ಧೂರಿಯ ಕಾರ್ಯಕ್ರಮಗಳೊಂದಿಗೆ ಈ ಬ್ಲೂಫ್ಲಾಗ್ ಬೀಚ್ ಲೋಕಾರ್ಪಣೆಗೊಳ್ಳಲಿದೆ. ಇಷ್ಟರಲ್ಲೇ ಈ ಯೋಜನಾ ಅನುಷ್ಠಾನದ ವೇಳೆ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ ನೀಡಲಾಗಿದ್ದು, ಮುಂದೆ ಈ ಭಾಗದಲ್ಲಿ ಹೋಂ ಸ್ಟೇ, ವ್ಯಾಪಾರ ವಹಿವಾಟು ಮೂಲಕ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿದ್ದು, ಸದ್ಯಕ್ಕೆ ಕೊರೊನಾ ಭೀತಿಯ ಹಿನ್ನಲೆಯಲ್ಲಿ ಕಾಮಗಾರಿ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗಿದೆ ಎಂದರು.

ಒಟ್ಟಿನಲ್ಲಿ ಪಡುಬಿದ್ರಿ ವಿಶಾಲ ಕಡಲ ತೀರ ಎಂಡ್ ಪಾಯಿಂಟ್ ಪ್ರದೇಶದಲ್ಲಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಬ್ಲೂಫ್ಲಾಗ್ ಬೀಚ್ ಯೋಜನಾ ಕಾಮಗಾರಿಯಿಂದಾಗಿ ಈ ಪ್ರದೇಶ ಪ್ರವಾಸಿಗರ ನೆಚ್ಚಿನ ತಾಣವಾಗುವುದರಲ್ಲಿ ಎರಡು ಮಾತಿಲ್ಲ…

Related posts

Leave a Reply

Your email address will not be published. Required fields are marked *