Header Ads
Header Ads
Breaking News

ಪಡುಬೆಳ್ಳೆಯ ಸಾಮೂಹಿಕ ಆತ್ಮಹತ್ಯೆಗೆ ವಿಚಿತ್ರ ತಿರುವು.. ನಕಲಿ ಚಿನ್ನ ಅಡವಿಟ್ಟು ಮೃತ ಶಂಕರ ಆಚಾರ್ಯರಿಂದ ಬ್ಯಾಂಕಿಗೆ 65ಲಕ್ಷ ರೂ ವಂಚನೆ

ಪಡುಬೆಳ್ಳೆಯ ನಿವಾಸಿ ಚಿನ್ನದ ವ್ಯಾಪಾರಿ ಶಂಕರ ಆಚಾರ್ಯ ಕುಟುಂಬ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವನ್ನು ಪಡೆದುಕೊಂಡಿದ್ದು, ಮೃತ ಶಂಕರ ಆಚಾರ್ಯ ಸಹಕಾರಿ ಬ್ಯಾಂಕೊಂದರಲ್ಲಿ ಸುಮಾರು ೩ ಕೆಜಿ ನಕಲಿ ಚಿನ್ನವನ್ನು ಅಡವಿಟ್ಟು ೬೫ ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವುದು ಇದೀಗ ಬೆಳಕಿಗೆ ಬಂದಿದ್ದು, ಸಾಲಬಾಧೆಯಿಂದಲೇ ಈ ಕೃತ್ಯ ಮಾಡಿಕೊಂಡಿದ್ದಾರೆ ಎಂಬುದು ಈ ಘಟನೆಯಿಂದ ಸಾಭೀತಾಗಿದೆ.
ಮುಂದಿನ ಸೆಪ್ಟಂಬರ್ ಮೂರನೇ ತಾರೀಕಿನಂದು ಶಂಕರ ಅಚಾರ್ಯರ ಮಗಳು ಶೃತಿಯ ಮದುವೆ ನಡೆಯುದಿದ್ದು ಅದಕ್ಕೂ ಹಣದ ಅಡಚನೆಯಾಗಿದೆ. ಇದೇ ಸಂದರ್ಭ ತಾವು ಬ್ಯಾಂಕಿನಲ್ಲಿ ಅಡವಿಟ್ಟ ನಕಲಿ ಚಿನ್ನದ ಬಗ್ಗೆ ಗೊತ್ತಾದರೆ, ನನ್ನ ಹಾಗೂ ಕುಟುಂಬದ ಮಾನ ಹರಾಜಾಗಬಹುದೆಂದು ಹೆದರಿ, ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೆ ವಿಷ ಕೊಟ್ಟು ಅವರನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂಬುದಾಗಿ ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಪಡುಬೆಳ್ಳೆಯಲ್ಲಿ ಚಿನ್ನ ಮಾರಾಟ ಮಳಿಗೆ ಇಟ್ಟು ಚಿನ್ನದ ವ್ಯಾಪಾರ ನಡೆಸುತ್ತಿದ್ದ ಶಂಕರ ಆಚಾರ್ಯ, ಪತ್ನಿ ನಿರ್ಮಲ ಆಚಾರ್ಯ ಹಾಗೂ ಪುತ್ರಿಯರಾದ ಶೃತಿ ಮತ್ತು ಶ್ರೀಯರವರು ಕಳೆದ ಗುರುವಾರ ನಿಗೂಢವಾಗಿ ಮೃತ ಪಟ್ಟ ಘಟನೆ ರಾಜ್ಯಾಧ್ಯಂತ ಸುದ್ಧಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಹಲವಾರು ಊಹಾಪೋಹಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣ ಹೊಸ ತಿರುವು ಪಡೆದು ಕೊಂಡಿದ್ದು ಊಹಾಪೋಹಕ್ಕೆ ತೆರೆ ಬಿದ್ದಿದೆ.

ಶಂಕರ ಆಚಾರ್ಯರ ಹಿರಿಯ ಶೃತಿಗೆ ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿರುವ ಕಾರ್ಕಳ ನಿವಾಸಿಯೊಂದಿಗೆ ಮದುವೆ ಎಂದು ನಿಗದಿ ಆಗಿದ್ದು, ಕಳೆದ ಗುರುವಾರ ಮುಂಜಾನೆ ಶೃತಿ ತನ್ನ ಭಾವೀ ಪತಿಗೆ ದೂರವಾಣಿ ಕರೆ ಮಾಡಿ, ನನ್ನ ತಂದೆ ೧೫ಲಕ್ಷ ರೂಪಾಯಿಯ ಚಿನ್ನವನ್ನು ಕಳೆದು ಕೊಂಡಿದ್ದಾರೆ, ನಮಗೆ ಹದಿನೈದು ಲಕ್ಷ ರೂಪಾಯಿ ಬೇಕಾಗಿದೆ ನೀಡುವಂತೆ ವಿನಂತಿಸಿದ್ದಾಳೆ . ಆದರೆ ಭಾವಿ ಪತಿ ಅಷ್ಟು ಮೊತ್ತದ ಹಣ ನನ್ನಲ್ಲಿ ಇಲ್ಲ ಇದೀಗ ಒಂದೆರಡು ಲಕ್ಷ ರೂಪಾಯಿ ನೀಡ ಬಹುದು ಎಂದಾಗ ಕರೆ ಕಟ್ ಮಾಡಿದ್ದಾಳೆ ಶೃತಿ. ಆ ಬಳಿಕದ ಕೆಲ ಹೊತ್ತಿನಲ್ಲಿ ಕುಟುಂಬದ ಎಲ್ಲರೂ ಮೃತದೇಹವಾಗಿ ಮನೆಯ ದೇವರ ಕೋಣೆಯ ಸಮೀಪ ಪತ್ತೆ ಆಗಿದ್ದರು. ಯಾವುದೇ ಡೆತ್ ನೋಟ್ ಬರೆದಿಡದೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ, ಕೆಲವರು ಹಣದ ಅಡಚನೆಯಿಂದ ಈ ಕೃತ್ಯ ಮಾಡಿಕೊಂಡಿರ ಬಹುದೆಂಬ ಸಂಶಯ ವ್ಯಕ್ತ ಪಡಿಸಿದ್ದರೆ, ಮತ್ತೆ ಕೆಲವರು ಮಕ್ಕಳ ಮಕ್ಕಳ ಶೀಲದ ಬಗ್ಗೆಯೂ ಶಂಕೆ ವ್ಯಕ್ತ ಪಡಿಸಿದ್ದರು.

ಶಂಕರ ಆಚಾರ್ಯರು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಕುರ್ಕಾಲು ಬ್ಯಾಂಕ್ ವ್ಯವಸ್ಥಾಪಕ ಉಮೇಶ್ ಅಮೀನ್ ತಕ್ಷಣ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮನೋಹರ್‌ರಾವ್ ಅವರಿಗೆ ಕರೆಮಾಡಿ ತಿಳಿಸಿದ್ದರು. ಮದ್ಯಾಹ್ನದ ಬಳಿಕ ಮತ್ತೊಮ್ಮೆ ಕರೆಮಾಡಿ ಶಂಕರ ಆಚಾರ್ಯರು ಚಿನ್ನ ಅಡವಿಟ್ಟು ಸಾಲ ಪಡೆದ ವಿಚಾರ ತಿಳಿಸಿದ್ದಾರೆ. ಇದರಿಂದ ಎಚ್ಚೆತ್ತ ಆಡಳಿತ ಮಂಡಲಿ ಮತ್ತೋರ್ವ ಚಿನ್ನ ಪರೀಕ್ಷಕರನ್ನು ಕರೆಸಿ ಶಂಕರ ಆಚಾರ್ಯರವರು ಅಡವಿಟ್ಟ ಚಿನ್ನವನ್ನು ಪರೀಕ್ಷೆ ಮಾಡಿಸಿದಾಗ ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ ವಂಚಿಸಿದ ವಿಚಾರ ತಿಳಿದು ಬಂದಿದೆ.
ಮೃತ ಶಂಕರ ಆಚಾರ್ಯ ಸುಮಾರು ಹದಿನೈದು ವರ್ಷಗಳಿಂದ ಇನ್ನಂಜೆ ಸಹಕಾರಿ ಬ್ಯಾಂಕಿನ ಕುರ್ಕಾಲು ಶಾಖೆಯಲ್ಲಿ ವ್ವವಹಾರ ನಡೆಸುತ್ತಿದ್ದು, ಬ್ಯಾಂಕ್ ಸಿಬ್ಬಂದಿಗಳಿಗೆ ಚಿರಪರಿಚಿತರಾಗಿದ್ದರು. ಹಲವಾರು ಬಾರಿ ಚಿನ್ನ‌ಅಡವಿಟ್ಟು ಸಾಲ ಪಡೆದು ಯಾವುದೇ ತಕರಾರಿಲ್ಲದೆ ಮರುಪಾವತಿ ಮಾಡುತ್ತಿದ್ದರು. ಇವರ ಹೆಸರಲ್ಲಿ ಕುರ್ಕಾಲು ಶಾಖೆಯಲ್ಲಿ ೯೩ ಸಾಲದ ಖಾತೆ ತೆರೆದಿದ್ದರು. ಎಲ್ಲಾ ಖಾತೆಗಳಲ್ಲಿ ಒಟ್ಟು ಸೇರಿ ಸುಮಾರು ೩ ಕಿಲೋ ನಕಲಿ ಚಿನ್ನ ಅಡವಿಟ್ಟಿದ್ದರು ಎಂದು ಬ್ಯಾಂಕಿನ ಅಧ್ಯಕ್ಷ ರಾಜೇಶ್ ರಾವ್ ತಿಳಿಸಿದ್ದು, ಅದರಲ್ಲಿ ೧೦೦ ಗ್ರಾಂ ಚಿನ್ನ ಹೊರತು ಪಡಿಸಿ ಉಳಿದವುಗಳೆಲ್ಲ ನಕಲಿ ಎಂದಿದ್ದಾರೆ.

ಬ್ಯಾಂಕಿನಲ್ಲಿ ಚಿನ್ನದ ಮೇಲೆ ಸಾಲ ನೀಡುವ ಮೊದಲು ಚಿನ್ನವನ್ನು ಬ್ಯಾಂಕಿನ ಚಿನ್ನ ಪರೀಕ್ಷಕ ಅದನ್ನು ಪರೀಕ್ಷಿಸಿ ಗುಣಮಟ್ಟವನ್ನು ತಿಳಿಸಬೇಕಿದೆ. ಅಂತೆಯೇ ಓರ್ವ ಬ್ಯಾಂಕ್ ವ್ಯವಸ್ಥಾಪಕನಿಗೆ ಕೇವಲ ೫ಲಕ್ಷ ರುಪಾಯಿ ಸಾಲ ನೀಡುವ ಹಕ್ಕಿದೆ. ಹೆಚ್ಚಿನ ಸಾಲ ಬೇಕಿದ್ದರೆ ಆಡಳಿತ ಮಂಡಳಿ ಶಿಫಾರಸು ಮಾಡಬೇಕಿದೆ. ಇಲ್ಲಿ ಯಾವುದೇ ಪ್ರಕೃಯೆ ನಡೆಯದೆ ಮೃತ ಶಂಕರ ಆಚಾರ್ಯಗೆ ೬೫ಲಕ್ಷ ರೂಪಾಯಿ ಸಾಲವನ್ನು ಹೇಗೆ ನೀಡಿದ್ದಾರೆ ಎಂಬುವುದು ಸಂಶಯಕ್ಕೆ ಎಡೆಮಾಡಿದೆ.ಈ ಕೃತ್ಯದಲ್ಲಿ ಶಂಕರ ಆಚಾರ್ಯರವರೊಂದಿಗೆ ಹಲವಾರು ಮಂದಿ ಶಾಮೀಲಾಗಿರುವ ಶಂಕೆಯನ್ನು ಆಡಳಿತ ಮಂಡಳಿ ವ್ಯಕ್ತ ಪಡಿಸುತ್ತಿದ್ದು, ಈ ಬಗ್ಗೆ ಮೃತ ಶಂಕರ ಆಚಾರ್ಯ, ಚಿನ್ನ ಪರೀಕ್ಷಕ ಉಮೇಶ ಆಚಾರ್ಯ, ಬ್ಯಾಂಕಿನ ಪ್ರಭಂದಕ ಉಮೇಶ್ ಅಮೀನ್‌ರವರು ತಮ್ಮ ಬ್ಯಾಂಕಿಗೆ ವಂಚಿಸಿದ್ದಾರೆ ಎಂದು ಇನ್ನಂಜೆ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮನೋಹರ ರಾವ್‌ರವರು ಶಿರ್ವ ಠಾಣೆಗೆ ದೂರು ನೀಡಿದ್ದು, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ಹಾಗೂ ಶಿರ್ವ ಠಾಣಾಧಿಕಾರಿ ನರಸಿಂಹ ರಾವ್ ತನಿಖೆ ನಡೆಸುತ್ತಿದ್ದಾರೆ.
ವರದಿ-ಸುರೇಶ್ ಎರ್ಮಾಳ್

Related posts

Leave a Reply