Header Ads
Header Ads
Breaking News

“ಪಣೋಲಿಬೈಲು-ಕಬಕ “ರಸ್ತೆಗಳ ಕಾಮಗಾರಿಯನ್ನು ದಿಢೀರನೆ ಸ್ಥಗಿತಗೊಳಿಸಿದ ಗುತ್ತಿಗೆದಾರರು

ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದ ಪಣೋಲಿಬೈಲು-ಕಬಕ ರಸ್ತೆಗಳ ಕಾಮಗಾರಿಯನ್ನು ಗುತ್ತಿಗೆದಾರ ದಿಢೀರನೆ ಸ್ಥಗಿತಗೊಳಿಸಿ ನಾಪತ್ತೆಯಾಗಿದ್ದರಿಂದ ಮೊದಲ ಮಳೆಗೆ ರಸ್ತೆಗೆ ಹಾಕಲಾದ ಜಲ್ಲಿಗಳು ಕೊಚ್ಚಿಕೊಂಡು ಹೋಗಿದೆ.ಜನಪ್ರತಿನಿಧಿಗಳಿಗೆ ಚುನಾವಣೆ ನೀತಿ ಸಂಹಿತೆ, ಅಧಿಕಾರಿಗಳಿಗೆ ಚುನಾವಣೆ ಕರ್ತವ್ಯ, ಗುತ್ತಿಗೆದಾರ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆ. ಇದರಿಂದ ಈ ಹೆದ್ದಾರಿಯಲ್ಲಿ ಬರುವ ವಿಟ್ಲ-ಪುತ್ತೂರು ರಸ್ತೆಯ ಶೋಚನೀಯ ಸ್ಥಿತಿಯನ್ನು ಕಂಡು ವಾಹನ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭಗೊಂಡ ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸುರತ್ಕಲ್‌ನಿಂದ ಬಿ.ಸಿ ರೋಡ್ ತನಕ ಕೆಲಸ ಬಹುತೇಕ ಮುಗಿದಿದೆ. ಒಟ್ಟು ೧೮ ಕೋಟಿ ರೂ. ಅನುದಾನದಲ್ಲಿ47 ಕಿ.ಮೀ ರಸ್ತೆ ವಿಸ್ತರಣೆ ಹಾಗೂ ಡಾಮರು ಕಾಮಗಾರಿ ಆಗಬೇಕಿದೆ. ಸದ್ಯ ೫.೫ ಮೀ ಅಗಲವಿರುವ ರಸ್ತೆಯನ್ನು 7 ಮೀ ಗೆ ವಿಸ್ತರಿಸುವ ಯೋಜನೆ ಇದಾಗಿದೆ. ಮೊದಲಿಗೆ ಭರದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ವಿಟ್ಲದಿಂದ ಕಬಕ ವರೆಗೆ ರಸ್ತೆಯ ಎರಡು ಬದಿಗಳನ್ನು ಕೊರೆಯಲಾಗಿತ್ತು. ಬಳಿಕ ಕೆಲವು ಕಡೆಗಳಿಗೆ ಜಲ್ಲಿಗಳನ್ನು ಸುರಿಯಲಾಗಿತ್ತು.

 

ಇದುವರೆಗೂ ನಡೆದಿರುವ ಕಾಮಗಾರಿಗಳು ಕಳಪೆಯಾಗಿದೆ. ಹಲವಾರು ತಿಂಗಳಿಂದ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ವಿಟ್ಲದಿಂದ ಕಬಕ ವರೆಗಿನ ರಸ್ತೆ ತೀರಾ ಇಕ್ಕಟ್ಟಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆಗಳಿಲ್ಲದೇ ಹೊಂಡಗಳು, ತೋಟಗಳು, ದೊಡ್ಡ ಪ್ರಮಾಣದಲ್ಲಿ ನೀರು ಹರಿಯುವ ತೋಡುಗಳಿವೆ, ಅರೆಬರೆ ಕಾಮಗಾರಿ ನಡೆಸಿದ್ದರಿಂದ ರಸ್ತೆಯಲ್ಲಿ ನೀರು ಶೇಖರಣೆಗೊಂಡು ರಸ್ತೆ ಬದಿಯನ್ನು ಕೊಚ್ಚಿಕೊಂಡು ಹೋಗಿದೆ. ಇದರಿಂದ ಲಕ್ಷಾಂತರ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದೆ. ವಿಟ್ಲ ಸಮೀಪದ ಚಂದಳಿಕೆ, ಕಲ್ಲಕಟ್ಟ, ಕಂಬಳಬೆಟ್ಟು ಪ್ರದೇಶಗಳಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣಗೊಂಡು ಅಪಾಯವನ್ನು ಆಹ್ವಾನಿಸುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಜಿನಿಯರ್ ಪ್ರೀತಂ ಅವರು ಗುತ್ತಿಗೆದಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮೇಲಾಧಿಕಾರಿಗಳ ಮೂಲಕ ವರದಿ ಮಾಡಲಾಗಿದೆ. ಅಲ್ಲಿಂದ ಆದೇಶ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ಮಳೆ ಬರುವುದಕ್ಕಿಂತ ಮೊದಲು ತಾತ್ಕಾಲಿಕವಾಗಿ ಹೊಂಡಗಳ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related posts

Leave a Reply