Header Ads
Header Ads
Breaking News

ಪರಿಸರ ಸ್ನೇಹಿ ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ : ಕಲಾವಿದರ ಕೈಚಳಕದಿಂದ ಮೂಡಿ ಬಂದಿವೆ ಆಕರ್ಷಕ ಮೂರ್ತಿಗಳು

ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಮಾರುಕಟ್ಟೆಯಲ್ಲಿ ಬಗೆಬಗೆಯ ಮಣ್ಣಿನ ಗಣಪತಿ ಮೂರ್ತಿಗಳ ಭರಾಟೆಯೂ ಜೋರಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿ ಹತ್ತಿರವಾಗುತ್ತಿದ್ದಂತೆ ಸಾರ್ವಜನಿಕರು ತಮಗಿಷ್ಟವಾಗುವ ಆಕರ್ಷಕ ಗಜಾನನ ಮೂರ್ತಿಗೆ ಬೇಡಿಕೆ ಸಲ್ಲಿಸುತ್ತಿದ್ದರೆ, ಕಲಾವಿದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮೂರ್ತಿ ತಯಾರಿಸಿ ಅಂತಿಮ ಸ್ಪರ್ಶ ನೀಡುವ ಕಾರ್ಯವೂ ಭರದಿಂದ ಸಾಗಿದೆ. ಪ್ರಥಮ ಪೂಜಿತ ಗಣಪನ ಮೂರ್ತಿ ತಯಾರಿಯ ಕುರಿತಾದ ಒಂದು ಸ್ಪೆಶಲ್ ರಿಪೋರ್ಟ್ ಇಲ್ಲಿದೆ ನೋಡಿ.

 ಹೌದು..ಪ್ರಥಮ ಪೂಜಿತ ವಿಘ್ನೇಶನ ಮೂರ್ತಿಗಳನ್ನು ಕಲಾವಿದರು ಹಲವು ರೂಪಗಳಲ್ಲಿ ತಯಾರಿಸಿದ್ದು ಒಂದಕ್ಕಿಂತ ಒಂದು ವಿಶಿಷ್ಟ, ವಿಭಿನ್ನ ಹಾಗೂ ಆಕರ್ಷಕವಾಗಿವೆ. ನಾನಾ ರೀತಿಯ, ವಿನ್ಯಾಸದ ಆಕರ್ಷಕ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳು ಕಲಾವಿದರ ಕೈಚಳಕದಿಂದ ಮೂಡಿಬಂದಿದ್ದು, ವಿವಿಧ ಭಂಗಿಯ ಗಣಪತಿ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಕುಂದಾಪುರದಲ್ಲಿ ವಸಂತ್ ಗುಡಿಗಾರ್ ಅವರ ವರ್ಕ್‌ಶಾಪ್‌ನಲ್ಲಿ ಗಣಪತಿ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್ಯವಾಗುತ್ತಿದೆ. ಕಳೆದ ಮೂವತ್ತಾರು ವರ್ಷಗಳಿಂದ ಮಣ್ಣಿನ ಗಣಪತಿಯ ತರಹೇವಾರಿ ವಿಗ್ರಹಗಳನ್ನು ತಾಲೂಕಿನ ಹಲವಾರು ಗಣೇಶೋತ್ಸವ ಕಾರ್ಯಕ್ರಮಕ್ಕೆ ತಯಾರಿಸಿ ಕೊಡುತ್ತಿರುವವರಲ್ಲಿ ಇವರು ಪ್ರಮುಖರು. ಒಂಬತ್ತು ಮಂದಿ ಕೆಲಸಗಾರರನ್ನು ಹೊಂದಿರುವ ವಸಂತ್ ಗುಡಿಗಾರ್ ಗಣೇಶ ವಿಗ್ರಹ ತಯಾರಿಕೆಯಲ್ಲಿ ಪ್ರವೀಣರು. ತಮ್ಮ ೧೭ ನೇ ವಯಸ್ಸಿನಿಂದಲೇ ಶ್ರದ್ಧೆ ಭಕ್ತಿಯಿಂದ ಈ ಕಲೆಯನ್ನು ಕರಗತವನ್ನಾಗಿಸಿಕೊಂಡ ವಸಂತ ಗುಡಿಗಾರರು ಕುಂದಾಪುರ ಹಳೆ ಬಸ್ಸು ನಿಲ್ದಾಣದ ಕರ್ಣಾಟಕ ಬ್ಯಾಂಕ್ ಸಮೀಪದ ತಮ್ಮ ವರ್ಕ್‌ಶಾಪ್‌ನಲ್ಲಿ ವರ್ಷಂಪ್ರತಿ 75 ಕ್ಕೂ ಹೆಚ್ಚು ವಿಗ್ರಹಗಳನ್ನು ಬೇಡಿಕೆಗನುಸಾರವಾಗಿ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ. ವರ್ಷಂಪ್ರತಿ ಇವರಿಗೆ ಬರುವ ಮೂರ್ತಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಲಿದೆ. ವಸಂತ ಅವರು ಶಿಲ್ಪ ಕಲೆಯನ್ನು ಕಸುಬನ್ನಾಗಿಸಿಕೊಂಡವರಾಗಿದ್ದು ಚೌತಿ ಬಳಿಕ ಮರ ಹಾಗೂ ಕಲ್ಲಿನ ಶಿಲ್ಪಗಳ ಕೆತ್ತನೆ ಕೆಲಸವನ್ನೂ ನಿರ್ವಹಿಸುತ್ತಾರೆ.

 ಇನ್ನು ವಸಂತ ಗುಡಿಗಾರರು ದಶಕಗಳ ಹಿಂದೆ ಕೆಲಸ ಆರಂಭಿಸುವ ಸಮಯದಲ್ಲಿ ಗದ್ದೆ ಮಣ್ಣು ತಂದು ಅದನ್ನು ಪುಡಿ ಮಾಡಿ ಮೂರ್ತಿ ನಿರ್ಮಿಸುತ್ತಿದ್ದರು. ಕ್ರಮೇಣ ಅದು ಬದಲಾಗಿ ಆವೆ ಮಣ್ಣಿನಿಂದ ಮೂರ್ತಿ ನಿರ್ಮಾಣ ಆರಂಭಿಸಿದ್ದು ಜಲವರ್ಣ(ವಾಟರ್ ಪೇಂಟ್)ವನ್ನೇ ಬಳಸಲಾಗುತ್ತಿದೆ. ವರ್ಷವರ್ಷವೂ ಮೂರ್ತಿ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ದರ ಜಾಸ್ತಿಯಾಗುತ್ತಲೇ ಇದ್ದು ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಮೂರ್ತಿಗಳನ್ನು ತಯಾರಿಸಿ ಕೊಡುತ್ತಿದ್ದಾರೆ. 12 ಇಂಚಿನಿಂದ ಆರಂಭಗೊಂಡು ಐದು ಅಡಿಯ ಗಣೇಶ ಮೂರ್ತಿಗಳನ್ನು ನಿರ್ಮಿಸುವ ಇವರು ಗ್ರಾಹಕರ ಅಭಿರುಚಿಗೆ ಹಾಗೂ ಬೇಡಿಕೆಗನುಸಾರವಾಗಿ ಮೂರ್ತಿ ನಿರ್ಮಿಸುತ್ತಾರೆ. ೫ ಅಡಿಯ ೮ ಮೂರ್ತಿಗಳು ಸೇರಿದಂತೆ ೮೦ಕ್ಕೂ ಅಧಿಕ ಗಣಪನ ಮೂರ್ತಿಗಳು ಈಗ ಸಿದ್ಧಗೊಂಡಿದೆ. ವಿಭಿನ್ನ ವಿನ್ಯಾಸದಲ್ಲಿ ಮೂರ್ತಿ ನಿರ್ಮಿಸಿಕೊಡುವ ಬೇಡಿಕೆ ಬಂದರೂ ಕೂಡ ಸಮಯದ ಅಭಾವ ಒಂದೆಡೆಯಾದರೇ, ದೇವರ ನಿಂಧನೆಯಾಗುವ ಹಿನ್ನೆಲೆ ಸೌಮ್ಯ ಗಣಪತಿಯನ್ನು ಇವರು ನಿರ್ಮಿಸುತ್ತಾರೆ. ಪಿ.ಓ.ಪಿ.ಯನ್ನು ಬಳಸುವುದೇ ಇಲ್ಲ. ಈ ಬಾರಿ ಕುಂಭಾಸಿ ಹರಿಹರ ದೇವಸ್ಥಾನದಿಂದ ಬಣ್ಣ ಹಾಕದೇ ಮೂರ್ತಿ ನಿರ್ಮಿಸಿಕೊಡುವ ಬೇಡಿಕೆ ಬಂದ ಕಾರಣ ಬಣ್ಣ ರಹಿತ ಸುಂದರ ಗಣಪ ತಯಾರಿಸಿಟ್ಟಿದ್ದಾರೆ.

ಒಟ್ಟಿನಲ್ಲಿ ಜೇಡಿಮಣ್ಣಿನ ಕೊರತೆ, ಗಗನಕ್ಕೇರುತ್ತಿರುವ ವಾಟರ್ ಪೇಂಟ್‌ನ ದರದ ನಡುವೆಯೂ ಅತ್ಯಂತ ಕಡಿಮೆ ದರದಲ್ಲಿ ಅತ್ಯಾಕರ್ಶಕ ಗಣಪತಿ ಮೂರ್ತಿಗಳನ್ನು ತಾಲೂಕಿನ ವಿವಿಧ ಕಡೆಗಳಲ್ಲಿ ಆಚರಿಸುವ ಗಣೇಶೋತ್ಸವಕ್ಕೆ ನಿರ್ಮಿಸಿಕೊಡುತ್ತಿರುವ ವಸಂತ ಗುಡಿಗಾರರು ಮತ್ತು ಅವರ ತಂಡದ ಕಾರ್ಯವನ್ನು ಮೆಚ್ಚಲೇಬೇಕು.

Related posts

Leave a Reply

Your email address will not be published. Required fields are marked *