Header Ads
Breaking News

ಪಾಣೆಮಂಗಳೂರಿನಲ್ಲಿ ಕೊಳೆತು ನಾರುತ್ತಿರುವ ಕಸ. ಕಸ ವಿಲೇವಾರಿಯಾಗದೇ 12 ದಿನ ಕಳೆಯಿತು.

ಬಂಟ್ವಾಳ: ಪಾಣೆಮಂಗಳೂರು ಹಾಸ್ಟೆಲ್ ಬಳಿ ಕಸ ಸಂಗ್ರಹದ ವಾಹನ ಬಾರದೆ ಹಸಿ ಕಸಗಳೆಲ್ಲಾ ಕೊಳೆತು ನಾರುತ್ತಿದೆ. ೧೨ ದಿನಗಳಿಂದ ಕಸ ವಿಲೇವಾರಿಯಾಗದೆ ಉಳಿದಿದೆ. ಮನೆಗಳಲ್ಲಿ ತ್ಯಾಜ್ಯ ಇಟ್ಟ ಜಾಗದಲ್ಲೇ ಹುಳಗಳು ಹುಟ್ಟುಕೊಂಡಿದೆ ಎಂದು ಪುರಸಭಾ ಸದಸ್ಯೆ ಚಂಚಲಾಕ್ಷಿ ಆರೋಪಿಸಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಾಸುಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಪುರಸಭೆಯ ೨೩ ವಾರ್ಡ್‌ಗಳಿಗೆ ಕಸ ಸಂಗ್ರಹದ ವಾಹನ ಹೋಗದೆ ಇದ್ದರೆ ಕಸವಿಲೇವಾರಿ ವ್ಯವಸ್ಥೆ ಸರಿಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಾಹನ ವ್ಯವಸ್ಥೆ ಸರಿಯಾಗದೆ ಇದ್ದರೆ ನಮಗೆ ಹಿಂಸೆ, ಜನ ಮನೆಗೆ ಬಂದು ಕುಳಿತುಕೊಳ್ಳುತ್ತಾರೆ ಎಂದು ಅಳಲು ತೋಡಿಕೊಂಡರು. ಮನೆಗಳಿಂದ ಕಸ ಸಂಗ್ರಹಿಸುವ ೪ ವಾಹನಗಳಿದೆ, ಸಂಗ್ರಹಿಸಿದ ಹಸಿ ಕಸಗಳನ್ನು ತೋಟಗಳಲ್ಲಿ ಗೊಬ್ಬರ ಮಾಡಲಾಗುತ್ತಿದೆ. ಆದರೆ ಒಣ ಕಸಗಳನ್ನು ಹಾಕಲು ಸ್ಥಳ ಇಲ್ಲ. ಜನರ ಸಹಕಾರ ಇಲ್ಲದೆ ತ್ಯಾಜ್ಯ ವಿಲೇವಾರಿಯನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಾಧಿಕಾರಿ ರೇಖಾಶೆಟ್ಟಿ ಮಾಹಿತಿ ನೀಡಿದರು. ಸಜೀಪನಡುವಿನ ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಬಗೆಹರಿಯುತ್ತಿಲ್ಲ, ಮಹಾನಗರ ಪಾಲಿಕೆಯವರು ಕಸ ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಶಾಸಕರ ಜೊತೆ ಸಭೆ ನಡೆಸುವಂತೆ ಜಗದೀಶ ಕುಂದರ್ ಸಲಹೆ ನೀಡಿದರು. ಪುರಸಭೆಯಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತಿದೆ ಎಂದು ಅಧ್ಯಕ್ಷ ವಾಸು ಪೂಜಾರಿ ಸಭೆಯ ಗಮನಕ್ಕೆ ತಂದರು. ಮುಖ್ಯಾಧಿಕಾರಿ ರೇಖಾಶೆಟ್ಟಿ, ಸಮುದಾಯ ಸಂಘಟನಾ ಅಧಿಕಾರಿ ಮತ್ತಡಿ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಸದಸ್ಯರಾದ ಚಂಚಲಾಕ್ಷಿ, ಜಗದೀಶ ಕುಂದರ್, ಬಿ.ಮೋಹನ್, ಪ್ರಭಾ ಸಾಲ್ಯಾನ್ ಹಾಜರಿದ್ದರು.

Related posts

Leave a Reply