

ಪುತ್ತೂರಿನ ಕೋಡಿಂಬಾಡಿಯಲ್ಲಿ ಪಾದಚಾರಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ದ್ವಿಚಕ್ರ ವಾಹನ ಹಾಗು ಅದರ ಸವಾರನನ್ನು ಕೆಲವೇ ಗಂಟೆಗಳ ಅಂತರದಲ್ಲಿ ಶೋಧಿಸಿ ಪತ್ತೆ ಹಚ್ಚುವಲ್ಲಿ ಕೋಡಿಂಬಾಡಿಯ ಗ್ರಾಮ ಪಂಚಾಯತ್ ನ ಇಬ್ಬರು ನೂತನ ಸದಸ್ಯರು ಸಫಲರಾಗಿದ್ದಾರೆ. ಅರ್ಚಕ ವೃತ್ತಿ ನಿರ್ವಹಿಸುವ ವ್ಯಕ್ತಿ ಡಿಕ್ಕಿ ಹೊಡೆದು ಪರಾರಿಯಾದ ಸವಾರನಾಗಿದ್ದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಪತ್ತೆಯಾಗಿದೆ.
ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು ಹಾಗೂ ಜಗ್ಗನ್ನಾಥ ಶೆಟ್ಟಿ ನಡುಮನೆಯವರು ಜಾಣ್ಮೆ ಮತ್ತು ಚಾಕಚಕ್ಯತೆಯಿಂದ ಸವಾರ ಹಾಗೂ ಡಿಕ್ಕಿ ಹೊಡೆದ ಆಕ್ಟಿವಾ ವನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ಲಕ್ಷ್ಮಿ ಎಂಬವರು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಸಂದರ್ಭ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಗಾಯಗೊಂಡ ಲಕ್ಷ್ಮಿಯವರನ್ನು ಕೂಡಲೇ ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ವರದಿ: ಪುತ್ತೂರು