Header Ads
Header Ads
Breaking News

ಪಾದೂರು ಕಚ್ಚಾ ತೈಲ ಸಂಗ್ರಹಾರ ಘಟಕ: ಎರಡನೇ ಘಟಕ ಆರಂಭಕ್ಕೆ ಸಿದ್ಧತೆ

ದೇಶದಲ್ಲಿ ಕೇವಲ ಮೂರು ಕಡೆ ಮಾತ್ರ ಇರುವ ಅಪೂರ್ವ ಯೋಜನೆಯಿದು. ಯುದ್ದಕಾಲ ಅಥವಾ ದೇಶಕ್ಕೆ ಸಂಕಷ್ಟ ಬಂದಾಗ ಪೆಟ್ರೋಲಿಯಂ ಅಭಾವ ಉಂಟಾದ್ರೆ ಈ ಕಚ್ಛಾ ತೈಲ ಘಟಕ ನೆರವಿಗೆ ಬರುತ್ತದೆ. ಇಂಥಹಾ ಕಚ್ಚಾ ತೈಲ ಸಂಗ್ರಹಣಾಗಾರದ ಕಾಮಗಾರಿ ಪೂರ್ಣಗೊಂಡಿದೆ, ಆದ್ರೆ ದೇಶಕ್ಕಾಗಿ ಭೂಮಿ ಕೊಟ್ಟ ರೈತರಿಗೆ ಮಾತ್ರ ಪರಿಹಾರ ಸಿಗಲೇ ಇಲ್ಲ.ನಿಜವಾದ ಸಂತ್ರಸ್ಥರು ಗುರುತಿ ಪರಿಹಾರ ನೀಡಿ ಎಂಬ ಕೂಗು ಪಾದೂರಿನಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಇದು ಐ ಎಸ್ಪಿ ಆರ್ ಎಲ್. ಅಂದ್ರೆ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ ಲಿಮಿಟೆಡ್. ಉಡುಪಿಯ ಪಾದೂರಿನಲ್ಲಿ ಈ ಘಟಕ ಕಾರ್ಯಾರಂಭ ಮಾಡಿ ೮ ವರ್ಷಗಳು ಕಳೆದಿವೆ. ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಸ್ಥಳೀಯರು ಪ್ರಾರಂಭದಲ್ಲಿ ವಿರೋಧಿಸಿದ್ದರು.ಕ್ರಮೇಣ ವಿರೋಧ ತಣ್ಣಗಾಗಿ ಘಟಕವೂ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಎರಡುವರೆ ಲಕ್ಷ ಟನ್ ಸಾಮರ್ಥ್ಯದ ಭೂಗತ ತೈಲೋತ್ಪನ್ನಗಳ ಸಂಗ್ರಹಣಾಲಯ ಇದು. ಉಡುಪಿಯ ಪಾದೂರು ಬಿಟ್ಟರೆ ಈ ಯೋಜನೆ ಇರೋದು ಮಂಗಳೂರು ಮತ್ತು ಒಡಿಶಾದಲ್ಲಿ ಮಾತ್ರ. ದೇಶಕ್ಕೆ ತುರ್ತು ಅಗತ್ಯ ಬಿದ್ದಾಗ ,ಇಲ್ಲಿ ಭೂಗತವಾಗಿ ಸಂಗ್ರಹಿಸಿಡಲಾದ ಕಚ್ಚಾ ತೈಲವನ್ನು ಬಳಸಲಾಗುತ್ತದೆ. ಹೀಗಾಗಿ ಇದು ಭಾರತ ಸರಕಾರದ ರಹಸ್ಯ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು. ಆದರೆ ಯೋಜನೆಗೆ ಭೂಮಿ ಕೊಟ್ಟ ಗ್ರಾಮಸ್ಥರಿಗೆ ಮಾತ್ರ ಪರಿಹಾರ ಇನ್ನೂ ಸಿಕ್ಕಿಲ್ಲ..ಹಲವು ಮಂದಿಯ ಮನೆ ಬಿರುಕು ಬಿಟ್ಟಿದೆ, ಕುಡಿಯುವ ನೀರಿಗಾಗಿ ಆಸರೆಯಾಗಿದ್ದ ಬಾವಿ ಕೂಡ ಮುಚ್ಚಿದೆ.ಕೃಷಿ ಭೂಮಿಯನ್ನೇ ನಂಬಿದ್ದ ಸಾಕಷ್ಟು ಕುಟುಂಬಗಳು ಕೃಷಿ ನಾಶವಾಗಿದೆ ಎಂದು ಇಂದು ಕಣ್ಣೀರು ಹಾಕುತ್ತಿದೆ.

ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿದರೂ ೨೫೦ ಕ್ಕೂ ಅಧಿಕ ಸಂತ್ರಸ್ಥರಿಗೆ ಇನ್ನೂ ಪರಿಹಾರಧನ ನೀಡಿಲ್ಲ. ಕೇಂದ್ರ ಸರ್ಕಾರ ಪರಿಹಾರಧನ ಬಿಡುಗಡೆ ಮಾಡಿದ್ದರೂ, ರಾಜಕೀಯ ಪ್ರಭಾವ ಇದ್ದವರಿಗೆ ಮಾತ್ರ ಹಣ ಹಂಚಿಕೆಯಾಗಿದೆ ಅನ್ನೋದು ಬಡ ಸಂತ್ರಸ್ಥರ ಆರೋಪ. ಬಂಡೆಗಳನ್ನು ಒಡೆಯಲು ಸ್ಪೋಟಕಗಳ ಬಳಕೆಯಿಂದ ಜನ ಜಾನುವಾರುಗಳ ಬದುಕೇ ದುಸ್ತರವಾಗಿದೆ. ಪ್ರಗತಿಪರ ಕೃಷಿಗ್ರಾಮ ಎಂದು ಹೆಸರು ಪಡೆದಿದ್ದ ಪಾದೂರು, ಕಳತ್ತೂರು ಗ್ರಾಮಗಳು ಈಗ ಬರಡು ಭೂಮಿಯಾಗಿದೆ. ಎರಡನೇ ಹಂತದ ಭೂಗತ ಪೈಪ್ ಲೈನ್ ಅಳವಡಿಕೆಗೆ ಭೂಸ್ವಾಧೀನ ವಿಷಯದಲ್ಲೂ ಸಾಕಷ್ಟು ತಕರಾರು ಇದೆ. ಪರಿಸ್ಥಿತಿ ಹೀಗಿರುವಾಗ 205ಲಕ್ಷ ಟನ್ ಸಾಮರ್ಥದ ಎರಡನೇ ಹಂತದ ಘಟಕಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ನೀಡಿದೆ. ಕೃಷಿಯೋಗ್ಯ ಜಮೀನನ್ನೂ ಎರಡನೇ ಹಂತದ ಘಟಕಕ್ಕೆ ನೀಡುವ ಮೂಲಕ ಮನೆ-ಜಮೀನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಾವನೆ ಸ್ಥಳೀಯರಲ್ಲಿ ಮನೆ ಮಾಡಿದೆ.

ಇದು ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯೇನೋ ನಿಜ . ಹಾಗಾಗಿ ಸ್ಥಳೀಯ ಗ್ರಾಮಸ್ಥರು ಯೋಜನೆಯನ್ನು ಬೆಂಬಲಿಸಿದ್ದಾರೆ. ಆದ್ರೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬದುಕುವ ಮತ್ತು ಕೃಷಿ ಮಾಡುವ ಹಕ್ಕನ್ನು ಕಸಿಯೋದು ಸರಿಯಲ್ಲ ಅನ್ನೋದು ಈ ಭಾಗದ ಜನರ ಅಭಿಪ್ರಾಯವಾಗಿದೆ.

Related posts

Leave a Reply