Header Ads
Header Ads
Breaking News

ಪಾರಂಪಳ್ಳಿ-ಪಡುಕೆರೆ ಮರದ ಕಾಲುಸಂಕದ ಮೇಲೆ ಜೀವಭಯದ ಸಂಚಾರ . ನೀರುಪಾಲಾಗಿರುವ ಮರದ ಹಲಗೆಗಳು.

ಒಂದೆಡೆ ನೀರುಪಾಲಾಗಿರುವ ಹಲಗೆಗಳು. ಇನ್ನೊಂದೆಡೆ ಶಿಥಿಲಗೊಂಡು ಮುರಿದು ಬೀಳುವ ಸ್ಥಿತಿಯಲ್ಲಿರುವ ಮರದ ಕಂಬಗಳು. ಈ ಅಪಾಯಕಾರಿ ಕಾಲುಸಂಕದ ಮೇಲೆ ಮೆಲ್ಲನೆ ಹೆಜ್ಜೆ ಇಡಬೇಕು. ಶಾಲಾ ಮಕ್ಕಳು, ವಯೋವೃದ್ದರು ಪಾಚಿಕಟ್ಟಿದ ಮರದ ದಿಮ್ಮಿಗಳ ಮೇಲೆ ಸರ್ಕಸ್ ಮಾಡಿಕೊಂಡೇ ಸಾಗಬೇಕು. ಇದು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ-ತೋಡ್ಕಟ್ಟು ಸಮೀಪ ನಿರ್ಮಿಸಿರುವ ಮರದ ಕಾಲುಸಂಕದ ದುಸ್ಥಿತಿ.ಇಲ್ಲಿನ ನಿವಾಸಿಗಳು ಸಾಲಿಗ್ರಾಮ ಪೇಟೆಗೆ ತೆರಳಲು ಇದೇ ಮರದ ಕಾಲುಸಂಕವನ್ನೇ ಅವಲಂಭಿಸಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ದಿನನಿತ್ಯ ಇದೇ ಅಪಾಯಕಾರಿ ಮರದ ಸಂಕದಲ್ಲೇ ಸಾಗುತ್ತಾರೆ. ಶಾಲಾ-ಕಾಲೇಜಿಗೆ ತೆರಳುವ ೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ಇದೇ ಕಾಲುಸಂಕವೇ ದಿಕ್ಕು. ಬೆಳಗ್ಗೆ ಮತ್ತು ಸಂಜೆ ಶಾಲೆ ಮಕ್ಕಳನ್ನು ಕಾಲುಸಂಕ ದಾಟಿಸುವುದೇ ಪೋಷಕರ ದಿನನಿತ್ಯದ ಕಾಯಕ. ಕಾಲುಸಂಕವಿರುವ ಸ್ಥಳದಲ್ಲಿ ಸುಸಜ್ಜಿತವಾದ ಸೇತುವೆ ನಿರ್ಮಾಣಗೊಂಡರೆ ಕೇವಲ ಒಂದುವರೆ ಕಿ.ಮೀಟರ್‌ಗಳಲ್ಲಿ ಸಾಲಿಗ್ರಾಮ ಪೇಟೆ ಸೇರಬಹುದು. ಇಲ್ಲವಾದರೆ ಕೋಡಿ ರಸ್ತೆ ಬಳಸಿ ಐದಾರು ಕಿ.ಮೀ ಸುತ್ತುವರಿದು ಸಾಲಿಗ್ರಾಮ ತಲುಪಬೇಕಾದ ದುಸ್ಥಿತಿ ಇಲ್ಲಿನ ಜನರದು.ಮೀನುಗಾರಿಕೆ ಹಾಗೂ ಭತ್ತದ ಕೃಷಿ ಇಲ್ಲಿನ ಜನರ ಜೀವನಾಧಾರ. ಪಡುಕೆರೆ ಜನರು ಕೃಷಿ ಚಟುವಟಿಕೆಗಳಿಗಾಗಿ ತೋಡ್ಕಟ್ಟುವಿಗೆ ಬರಬೇಕು. ಮೊದಲು ಸೀತಾನದಿ ಹಿನ್ನೀರಿನ ಹೊಳೆಯಲ್ಲಿ ತಮ್ಮ ಕೃಷಿ ಗದ್ದೆಗಳಿಗೆ ನಡೆದುಕೊಂಡೇ ಸಾಗುತ್ತಿದ್ದರು. ಕ್ರಮೇಣ ನೀರಿನ ಸೆಳೆತ ಜಾಸ್ತಿಯಾಗಿದ್ದರಿಂದ ಮರದ ಸಂಕ ನಿರ್ಮಾಣವಾಯಿತು. ಬಳಿಕ ಕೃಷಿ ಚಟುವಟಿಕೆಗಳಿಗೆ ಇಲ್ಲಿನ ಜನರು ಇದೇ ಮರದ ಸಂಕವನ್ನು ಅವಲಂಭಿಸತೊಡಗಿದರು. ಈ ಕಾಲುಸಂಕದ ಮೇಲೆ ಗೊಬ್ಬರ ಹೊತ್ತು ಸಾಗುವಾಗ ಮಹಿಳೆಯರು ಹೊಳೆಗೆ ಜಾರಿ ಬಿದ್ದಿದ್ದಾರೆ. ಏಳು ದಶಕಗಳಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿವೆ. ಆದರೆ ಸಂಬಂಧಪಟ್ಟವರು ಮಾತ್ರ ಸೇತುವೆ ನಿರ್ಮಾಣಕ್ಕೆ ಕಾರ್ಯಕ್ಕೆ ಮುಂದಾಗಿಲ್ಲ.ಚುನಾವಣಾ ಸಮಯದಲ್ಲಿ ಮನೆಗೆ ಬಂದು ಕಾಲಿಗೆ ಬೀಳುತ್ತಾರೆ. ಕಾಲುಸಂಕದ ಫೋಟೋ ತೆಗೆದುಕೊಂಡು ಸೇತುವೆ ನಿರ್ಮಾಣದ ಭರವಸೆ ಕೊಡುತ್ತಾರೆ. ಗೆದ್ದ ಬಳಿಕ ಅವರಿಗೆಲ್ಲಾ ನಮ್ಮ ನೆನಪು ಇರೋದಿಲ್ಲ. ನನ್ನಂತೆ ವಯಸ್ಸಾದವರು ಅನೇಕರಿದ್ದಾರೆ. ನಾವು ನಡುಗುತ್ತಲೇ ಭಯದಿಂದ ಕಾಲುಸಂಕವನ್ನು ದಾಟಬೇಕು. ನಮ್ಮ ಕಷ್ಟ ಅವರಿಗೆ ಕಾಣಿಸೋದಿಲ್ಲ ಎಂದು ಪಾರಂಪಳ್ಳಿಯ ಹಿರಿಯ ಮಹಿಳೆ ಲಕ್ಷ್ಮೀ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಯದಿಂದಲೇ ನಾವು ಈ ಕಾಲುಸಂಕದ ಮೇಲೆ ನಡೆಯಬೇಕು. ಸೇತುವೆಯಾಗುತ್ತದೆ ಎನ್ನುವ ನಂಬಿಕೆಯನ್ನು ಕಳೆದುಕೊಂಡಿದ್ದೇವೆ. ಮಳೆಗಾದಲ್ಲಿ ಸಂಕದ ಮೇಲೆ ಸಂಕದ ಮೇಲೆ ನೀರು ನಿಲ್ಲುತ್ತದೆ. ಜೀವ ಕೈಯ್ಯಲ್ಲಿ ಹಿಡಿದು ಮಕ್ಕಳನ್ನು ದಾಟಿಸುತ್ತೇವೆ. ಹಲವು ದಶಕಗಳ ನಮ್ಮ ಕೂಗು ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ. ಮೀನುಗಾರಿಕೆಯೇ ನಮಗೆ ಜೀವನಾಧಾರ. ನಸುಕಿನ ಜಾವ ಎದ್ದು ಮೀನುಗಾರಿಕೆಗೆ ತೆರಳುತ್ತೇವೆ. ದೇವರ ಮೇಲೆ ಭಾರ ಹಾಕಿ ಕಾಲು ಸಂಕ ದಾಟುತ್ತೇವೆ. ಹಲವಾರು ಮಂದಿ ಕಾಲುಸಂಕ ದಾಟುವ ವೇಳೆಯಲ್ಲಿ ಹೊಳೆಗೆ ಬಿದ್ದಿದ್ದು, ದೋಣಿ ಮೂಲಕ ಅವರನ್ನು ರಕ್ಷಿಸಲಾಗಿದೆ. ಕಳೆದ ನಲವತ್ತು ವರ್ಷಗಳಿಂದ ಕಾಲಸಂಕ ದುರಸ್ತಿ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ವ್ಯಯಿಸಲಾಗಿದೆ. ಇಷ್ಟು ವರ್ಷಗಳಲ್ಲಿ ವ್ಯಯಿಸಿರುವ ಹಣದಿಂದ ಸುಸಜ್ಜಿತ ಸೇತುವೆಯಾದರೂ ನಿರ್ಮಾಣವಾಗುತ್ತಿತ್ತು ಎನ್ನುತ್ತಾರೆ ಪಾರಂಪಳ್ಳಿ ನಿವಾಸಿಗಳು.ಇನ್ನು ಪಾರಂಪಳ್ಳಿ ಕಾಲುಸಂಕದ ಕುರಿತು ಪ್ರತಿಕ್ರಿಯಿಸಿರುವ ಕೋಟ ಶ್ರೀನಿವಾಸ ಪೂಜಾರಿ, ನಾನು ಸಚಿವನಾದ ಕಾಲದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಹೇಳಿ ನಾಲ್ಕುವರೆ ಕೋಟಿ ಯೋಜನಾ ವೆಚ್ಚ ಮಂಜೂರು ಮಾಡಿದ್ದೇನೆ. ಬಳಿಕ ಬೇರೆ ಸರ್ಕಾರ ಬಂದಿದ್ದರಿಂದ ಯೋಜನೆ ಚಾಲನೆಗೆ ಬರಲಿಲ್ಲ. ಪ್ರಸಕ್ತ ಸೇತುವೆ ನಿರ್ಮಾಣ ಅರ್ಜಿ ಸಮಿತಿ ಮುಂದಿದ್ದು, ತಕ್ಷಣ ಹಣ ಬಿಡುಗಡೆ ಮಾಡುವಂತೆ ಅರ್ಜಿ ಸಮಿತಿ ಸಭೆಯಲ್ಲಿ ಒತ್ತಾಯಿಸುತ್ತೇನೆ ಎಂದಿದ್ದಾರೆ.68 ವರ್ಷಗಳಿಂದ ತಮಗೊಂದು ಸುಸಜ್ಜಿತ ಸೇತುವೆ ನಿರ್ಮಿಸಿಕೊಡಿ ಎಂದು ಇಲ್ಲಿನ ನಿವಾಸಿಗಳು ಜನಪ್ರತಿನಿಧಿಗಳ ಎದುರು ತಮ್ಮ ಅಳಲು ತೋಡಿಕೊಂಡರೂ ಇದುವರೆಗೂ ಯಾರೂ ಸ್ಪಂದಿಸಿಲ್ಲ. ಚಿಕ್ಕ ಮಗುವಿದ್ದಾಗ ಕಾಲುಸಂಕ ದಾಟುತ್ತಿದ್ದವರು ಇದೀಗ ಮುದುಕರಾದರೂ ಸೇತುವೆ ಕನಸು ಮಾತ್ರ ಕನಸಾಗಿಯೇ ಉಳಿದಿದೆ. ಇನ್ನಾದರೂ ಪಾರಂಪಳ್ಳಿ ನಿವಾಸಿಗಳ ಏಳು ದಶಕಗಳ ಸೇತುವೆ ಬೇಡಿಕೆ ಈಡೇರುವುದೇ ಎಂದು ಕಾದು ನೋಡಬೇಕಿದೆ.

Related posts

Leave a Reply