
ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾದ ವಿರುದ್ದ ಎಲ್ಲಾ ಕಡೆಗಳಲ್ಲೂ ಭಿನ್ನಮತ ಭುಗಿಲೇಳುತ್ತಿದೆ. ಮೋದಿ, ಯೋಗಿ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿದರೆ ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ. ನಮಗೆ ಯಾರ ಮೇಲೂ ಭಿನ್ನಮತ ಇರಬಹುದು. ಆದರೆ ಯಾವ ಭಿನ್ನಮತವೂ ದೇಶದ್ರೋಹವಾಗಲು ಸಾಧ್ಯವಿಲ್ಲ ಎಂದು ಪ್ರಗತಿಪರ ಚಿಂತಕ, ಪತ್ರಕರ್ತ ಶಶಿಧರ ಹೆಮ್ಮಾಡಿ ಹೇಳಿದರು.
ಅವರು ಉತ್ತರಪ್ರದೇಶ ಪೊಲೀಸರಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಅಪಹರಣವನ್ನು ಖಂಡಿಸಿ ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ಪಿಎಫ್ಐ ಕುಂದಾಪುರ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಯೋಗಿ ಸರ್ಕಾರ ಹೋರಾಟಗಾರರನ್ನು ಎಲ್ಲೆಲ್ಲಿ ದಮನ ಮಾಡಬಹುದು ಅಲ್ಲೆಲ್ಲಾ ತನ್ನ ಅಧಿಕಾರವನ್ನು ಬಳಸಿ ಹಣಿಯುವ ಪ್ರಯತ್ನ ನಡೆಸುತ್ತಿದೆ. ಹತ್ರಾಸ್ ಪ್ರಕರಣದ ಸತ್ಯವನ್ನು ಬಯಗೆಳೆಯಲು ಹೋದ ಪಿಎಫ್ಐ ಕಾರ್ಯಕರ್ತರನ್ನು ಅವರ ಮನೆಯವರಿಗೂ ಗೊತ್ತಿಲ್ಲದ ಹಾಗೆ ಬಂಧಿಸಿ ಇಟ್ಟಿರುವುದು ಖಂಡನೀಯ ಎಂದು ಹೇಳಿದರು.
ಪಿಎಫ್ಐ ಮುಖಂಡರಾದ ಮಕ್ಸೂದ್ ಚಂದಾವರ, ಲಿಯಾಕತ್ ಕಂಡ್ಲೂರು ಮಾತನಾಡಿದರು. ಪಿಎಫ್ಐನ ಕುಂದಾಪುರ ವಲಯ ಅಧ್ಯಕ್ಷ ಮುನೀರ್ ಕೋಟೇಶ್ವರ, ತಾಲೂಕು ಅಧ್ಯಕ್ಷ ಆಸೀಫ್ ಕೋಟೇಶ್ವರ ಮೊದಲಾದವರು ಉಪಸ್ಥಿತರಿದ್ದರು.