Breaking News

ಪುತ್ತೂರಿಗೆ ಮಹಿಳಾ ಠಾಣೆ ಮಂಜೂರು ವಿಚಾರ, ಕಟ್ಟಡವಿಲ್ಲ, ಸಿಬ್ಬಂದಿಯಿಲ್ಲ, ವಾಹನದ ವ್ಯವಸ್ಥೆಯೂ ಇಲ್ಲ


ಒಂದು ಬೇಡಿಕೆಯ ಒತ್ತಡಕ್ಕೆ ಮಣಿದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಮಹಿಳಾ ಪೋಲೀಸ್ ಠಾಣೆಯೊಂದು ಮಂಜೂರಾಗಿದೆ. ಹೆಸರಿಗೆ ಮಹಿಳಾ ಪೋಲೀಸ್ ಠಾಣೆಯಾದರೂ, ಇಲ್ಲಿ ಠಾಣೆಗೆ ಬೇಕಾದ ಕಟ್ಟಡವಿಲ್ಲ, ಸಿಬ್ಬಂದಿಯಿಲ್ಲ, ತುರ್ತು ಕರೆಗೆ ಸ್ಪಂದಿಸಲು ಬೇಕಾದ ವಾಹನ ವ್ಯವಸ್ಥೆಯೂ ಇಲ್ಲಿಲ್ಲ. ತನ್ನ ಎಲ್ಲಾ ಅವಶ್ಯಕತೆಗಳಿಗೂ ಪುರುಷ ಪೋಲೀಸರನ್ನೇ ಅವಲಂಭಿಸಬೇಕಾದ ಪುತ್ತೂರಿನ ಮಹಿಳಾ ಪೋಲೀಸ್ ಠಾಣೆ ಇಲ್ಲಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತೂರು ನಗರದಲ್ಲಿರುವ ಮಹಿಳಾ ಪೋಲೀಸ್ ಠಾಣೆ. ಮಹಿಳಾ ಪೋಲೀಸ್ ಠಾಣೆ ಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿದ ಸರಕಾರ ಮಹಿಳಾ ಪೋಲೀಸ್ ಠಾಣೆಯನ್ನು ಮಂಜೂರು ಮಾಡಿದೆ. ಆದರೆ ಮಹಿಳಾ ಪೋಲೀಸ್ ಠಾಣೆಯನ್ನು ಸಂಚಾರಿ ಪೋಲೀಸ್ ಠಾಣೆಯಲ್ಲೇ ಇರುವ ಒಂದು ಕೊಠಡಿಯಲ್ಲಿ ಆರಂಭಿಸಲಾಗಿದೆ. ಪೋಲೀಸ್ ಠಾಣೆಗಳತ್ತ ಹೆದರಿಕೆಯಿಂದಲೇ ಹೋಗುವ ಮಹಿಳೆಯರಿಗೆ ಮಹಿಳಾ ಪೋಲೀಸ್ ಠಾಣೆಗಳಿದ್ದಲ್ಲಿ ತನ್ನ ನೋವನ್ನು ತನಗೆ ಸರಿಸಮಾನಳಾದ ಪೋಲೀಸರಲ್ಲಿ ಹಂಚುಕೊಳ್ಳಬಹುದು ಎನ್ನುವ ಧೈರ್ಯ ಮಹಿಳೆಗಿರುತ್ತದೆ. ಆದರೆ ಪುತ್ತೂರಿನ ಮಹಿಳಾ ಪೋಲೀಸ್ ಠಾಣೆಗೆ ಬರಬೇಕಾದಲ್ಲಿ ಮೊದಲಿಗೆ ದರ್ಶನವಾಗುವುದು ಪುರುಷ ಪೇದೆಗಳೇ. ಬಳಿಕ ಸಂಚಾರಿ ಪೋಲೀಸ್ ಠಾಣೆಯ ಮೂಲೆಯೊಂದರಲ್ಲಿರುವ ಮಹಿಳಾ ಉಪನಿರೀಕ್ಷಕರ ಭೇಟಿ. ಮಹಿಳೆಗೆ ತನ್ನ ನೋವನ್ನು ಬಿಚ್ಚು ಮನಸ್ಸಿನಿಂದ ಹೇಳಲಾಗದಂತಹ ವ್ಯವಸ್ಥೆ ಇಲ್ಲಿದ್ದು, ಆಕೆಗೆ ಬೇಕಾದ ಖಾಸಗಿತನದ ಕೊರತೆಯೂ ಇಲ್ಲಿದೆ. ಅಲ್ಲದೆ ಮಹಿಳಾ ಠಾಣೆಯಲ್ಲಿ ಒಂದು ಪೋಲೀಸ್ ಸಬ್ ಇನ್ಸಪಕ್ಟರ್, ಒಂದು ಎ.ಎಸ್.ಐ ಹಾಗೂ ಒಂದು ಹೆಡ್ ಕಾನ್ಸ್ಟೇಬಲ್ ಮಾತ್ರ ಇದ್ದು, ಬೇರೆ ಯಾವುದೇ ಸಿಬ್ಬಂದಿಗಳಿಲ್ಲ.
ಪೋಲೀಸ್ ಠಾಣೆಗೆ ಬರುವ ಮಹಿಳೆಯರಿಗೆ ಕುಳಿತುಕೊಳ್ಳಲೂ ಸಮರ್ಪಕವಾದ ಸ್ಥಳದ ಅಭಾವವೂ ಇದೆ. ಅಲ್ಲದೆ ಪೋಲೀಸ್ ಠಾಣೆಗೆ ಬಹು ಮುಖ್ಯವಾಗಿ ಬೇಕಾಗಿರುವಂತಹ ತುರ್ತು ಕರೆಗೆ ಸ್ಪಂದಿಸಲು ಪೋಲೀಸ್ ವಾಹನದ ವ್ಯವಸ್ಥೆಯೂ ಇಲ್ಲಿಲ್ಲ. ಹಿಂದೆ ಪುತ್ತೂರು ಟ್ರಾಫಿಕ್ ಪೋಲೀಸರು ಕಾರ್ಯಾಚರಿಸುತ್ತಿದ್ದ ಕಟ್ಟಡಕ್ಕೆ ಮಹಿಳಾ ಪೋಲೀಸ್ ಠಾಣೆಯನ್ನು ವರ್ಗಾಯಿಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿರುವ ಜೊತೆಗೆ ಠಾಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸರಕಾರ ತಕ್ಷಣ ಕಲ್ಪಿಸಬೇಕೆಂಬ ಆಗ್ರಹವೂ ಇದೀಗ ಕೇಳಿ ಬರುತ್ತಿದೆ.
ಒಟ್ಟಾರೆಯಾಗಿ ಮಹಿಳೆಯರಿಗಾಗಿಯೇ ಇರುವಂತಹ ಪುತ್ತೂರಿನ ಮಹಿಳಾ ಪೋಲೀಸ್ ಠಾಣೆಗೆ ಮಹಿಳೆಯರು ಬರಲು ಇದೀಗ ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಪೋಲೀಸ್ ಠಾಣೆಗೆ ಬರುವ ಮಹಿಳೆಯರ ಜೊತೆಗೆ ಮಹಿಳಾ ಪೋಲೀಸ್ ಸಿಬ್ಬಂದಿಗಳಿಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಕಾರ್ಯ ನಡೆಯಬೇಕಿದೆ.

Related posts

Leave a Reply