Header Ads
Header Ads
Breaking News

ಪುತ್ತೂರಿಗೆ 63 ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆ 30 ವರ್ಷಗಳ ಅವಶ್ಯಕತೆ ಗಮನದಲ್ಲಿಟ್ಟು ನೀರು ಪೂರೈಕೆ ಮೂರು ತಿಂಗಳ ಒಳಗೆ ಕಾಮಗಾರಿ ಆರಂಭ ಜಲಸಿರಿ ಯೋಜನೆಯ ನಿರ್ದೇಶಕ ಪ್ರಭಾಕರ ಶರ್ಮಾ ಹೇಳಿಕೆ

ಪುತ್ತೂರು ನಗರದ ಮುಂದಿನ 30 ವರ್ಷಗಳ ಆವಶ್ಯಕತೆಯನ್ನು ಗಮನದಲ್ಲಿ ಇಟ್ಟುಕೊಂಡು  63.11ಕೋಟಿ ರೂ. ವೆಚ್ಚದ ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆ ಮಂಜೂರಾಗಿದ್ದು, ಮುಂದಿನ ಮೂರು ತಿಂಗಳ ಒಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಜಲಸಿರಿ ಯೋಜನೆಯ ಉಪ ಯೋಜನಾ ನಿರ್ದೇಶಕ ಪ್ರಭಾಕರ ಶರ್ಮ ಹೇಳಿದರು.ಪುತ್ತೂರು ಪುರಭವನದಲ್ಲಿ ನಗರಸಭೆ ಆಯೋಜಿಸಿದ್ದ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
2014ರಲ್ಲಿ ರೂಪಿಸಲಾದ ಯೋಜನೆ ಇದಾಗಿದೆ. ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ (ಜಲಸಿರಿ)ದ ಅಡಿಯಲ್ಲಿ ಎಡಿಬಿ ನೆರವಿನಲ್ಲಿ ಜಾರಿಗೆ ತರಲಾಗುತ್ತಿದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ. ಮೊದಲು ಈ ಸಂಬಂಧ 42 ಕೋಟಿ ರೂ. ಮೊತ್ತದ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿತ್ತು. ಈಗಿನ ಜಿಎಸ್‌ಟಿ ಮತ್ತು ಬೆಲೆ ಏರಿಕೆ ಮತ್ತಿತರ ಕಾರಣದಿಂದ ಯೋಜನಾ ವೆಚ್ಚ ವೃದ್ಧಿಸಿದೆ. ಇದರಂತೆ ಒಟ್ಟು 63.11 ಕೋಟ ರೂ. ಯೋಜನೆಗೆ ಈಗಾಗಲೇ ಪುತ್ತೂರು ನಗರಸಭೆ ಸಾಮಾನ್ಯ ಸಭೆ ಅಂಗೀಕಾರ ನೀಡಿದೆ ಎಂದವರು ನುಡಿದರು.10 ವರ್ಷಗಳ ಕಾಲ ನಿರ್ವಹಣೆ ಮಾಡಬೇಕೆಂದು ಪುತ್ತೂರು ನಗರಸಭೆ ತನ್ನ ನಿರ್ಣಯದಲ್ಲಿ ಆಗ್ರಹಿಸಿದೆ. ಆದರೆ ಯೋಜನೆಯ ಮಾರ್ಗದರ್ಶಿ ಸೂತ್ರದಲ್ಲಿ ಗರಿಷ್ಠ 8 ವರ್ಷಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದ ಅವರು, ಯೋಜನೆಯ ನಿರ್ವಹಣೆಗೆ ಸಂಬಂಧಿಸಿ ನಗರಸಭೆ ಕೆಲವೊಂದು ಕಠಿಣ ಶರತ್ತುಗಳನ್ನು ವಿಧಿಸಿದೆ ಎಂದರು.

ನಗರಸಭೆ ಆಡಳಿತ ಪಕ್ಷದ ಹಿರಿಯ ಸದಸ್ಯ ಎಚ್.ಮಹಮ್ಮದ್ ಆಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದಿನ ಕುಡ್ಸೆಂಪ್ ನೀರು ಯೋಜನೆ ಕ್ರಮಬದ್ಧವಾಗಿ ನಡೆಯದ ಕಾರಣ ಇಂದಿಗೂ ಪುತ್ತೂರು ನಗರ ಸಮಸ್ಯೆಯಲ್ಲಿ ಬಳಲುತ್ತಿದೆ. ಇಲ್ಲಿನ ನೀರಿನ ಸಮರ್ಪಕ ಪೂರೈಕೆ ಆಗುತ್ತಿಲ್ಲ. ಈ ಯೋಜನೆಯಲ್ಲಿ ಅಂಥ ಯಾವ ತಪ್ಪುಗಳೂ ಮರುಕಳಿಸಬಾರದು ಎಂದರು. ಪ್ರಸ್ತುತ ಯೋಜನೆಗೆ ವಿನಯ ಕುಮಾರ್ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ 15 ಕೋಟಿ ಮಂಜೂರು ಮಾಡಿದ್ದರು. ಈಗ ಯೋಜನಾ ವೆಚ್ಚದ 60 ಶೇಕಡಾಕ್ಕೆ ಇದು ಸಾಲದು. ಉಳಿದ ಮೊತ್ತವನ್ನು ಸರಕಾರ ಭರಿಸಲಿದೆ ಎಂದರು.
ಯೋಜನೆಯ ವಿನ್ಯಾಸ ಎಂಜಿನಿಯರ್ ಪ್ರವೀಣ್ ರೇಗೋ ಅವರು ಹೊಸ ಯೊಜನೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಯೋಜನೆ ಹೇಗೆ ಅನುಷ್ಠಾನಗೊಳ್ಳಲಿದೆ, ಎಲ್ಲೆಲ್ಲಿ ಏನೇನು ಕಾಮಗಾರಿಗಳು ನಡೆಯಲಿವೆ, ಎಷ್ಟೆಲ್ಲ ವೆಚ್ಚ ತಗುಲಲಿದೆ, ಯಾವ ರೀತಿ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಉಪಾಧ್ಯಕ್ಷ ವಿಶ್ವನಾಥ ಗೌಡ, ಕೆಯುಐಡಿಎಫ್‌ಸಿ ಕಾರ್ಯಪಾಲ ಎಂಜಿನಿಯರ್ ಪ್ರಭಾಕರ್, ನಗರಸಭೆ ಸದಸ್ಯರಾದ ರಾಜೇಶ್ ಬನ್ನೂರು, ವಿನಯ ಭಂಡಾರಿ, ರಾಮಣ್ಣ ಗೌಡ ಹಲಂಗ, ಸುಂದರ ಪೂಜಾರಿ ಬಡಾವು, ಶೈಲಾ ಪೈ, ಜಯಲಕ್ಷ್ಮೀ ಸುರೇಶ್, ಉಷಾ ಧನಂಜಯ ಆಚಾರ್ಯ, ಸ್ವರ್ಣಲತಾ ಹೆಗ್ಡೆ, ಮುಕೇಶ್ ಕೆಮ್ಮಿಂಜೆ, ಝೊಹರಾ ನಿಸಾರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related posts

Leave a Reply