Header Ads
Header Ads
Breaking News

ಪುತ್ತೂರಿನಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಪುತ್ತೂರು: ಕಂದಾಯ ಇಲಾಖೆಯ ವಿರುದ್ಧ ವಿವಿಧೆಡೆಯಿಂದ ಆರೋಪಗಳು ಕೇಳಿಬರುತ್ತಿವೆ. ಇಲ್ಲಿ ಅಧಿಕಾರಿಗಳನ್ನು ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಈ ಕಾರಣದಿಂದ ಅಧಿಕಾರಿ ವರ್ಗ ಪ್ರಾಮಾಣಿಕತೆಯಿಂದ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಭ್ರಷ್ಠಾಚಾರ ರಹಿತವಾಗಿ ಕೆಲಸ ಮಾಡಿ ತಾಲೂಕಿಗೆ ಒಳ್ಳೆಯ ಹೆಸರು ತರಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಕರೆ ನೀಡಿದರು.

ಅವರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸೂರು ಕಟ್ಟಿಕೊಳ್ಳುವ ಉದ್ದೇಶದಿಂದ ಸರಕಾರ ಕಂದಾಯ ಇಲಾಖೆಯ ಅಧಿನಿಯಮಕ್ಕೆ ತಿದ್ದುಪಡಿ ತಂದು ಸರಕಾರಿ ನಿವೇಶನಗಳಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡವರು ಸ್ವತಂತ್ರವಾಗಿ ವಾಸಿಸುವ ನಿಟ್ಟಿನಲ್ಲಿ ನಿವೇಶನ ಸಕ್ರಮಗೊಳಿಸಿ, ಅವರು ಶಾಶ್ವತವಾಗಿ ಅಲ್ಲಿಯೇ ವಾಸಿಸುವ ಹಿನ್ನೆಲೆಯಲ್ಲಿ ಹಕ್ಕುಪತ್ರ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ನಿಮಗೆ ನೀಡಿರುವ ಹಕ್ಕುಪತ್ರ ಯಾರಿಗೂ ಮಾರಾಟ ಮಾಡಲು ಅಲ್ಲ. ನೀವೇ ಅಲ್ಲಿ ಮನೆ ಕಟ್ಟಬೇಕು. ಬಹಳಷ್ಟು ಕಡೆ ಈ ವಿಚಾರದಲ್ಲಿ ದುರುಪಯೋಗವಾದ ಸಂಗತಿಗಳು ಗಮನಕ್ಕೆ ಬಂದಿದೆ. ಸರಕಾರ ಒಳ್ಳೆಯ ಉದ್ದೇಶದೊಂದಿಗೆ ಜಾರಿಗೆ ತಂದಿರುವ ಯೋಜನೆಯನ್ನು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ದುರುಪಯೋಗ ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ತಹಶೀಲ್ದಾರ್‌ಗೆ ಇದೆ ಎಂದು ಶಾಸಕರು ತಿಳಿಸಿದರು.
ಅಧಿಕಾರಿ ವರ್ಗದಿಂದ ಬಡವರ ಕಣ್ಣೀರು ಒರೆಸುವ ಕೆಲಸವಾಗಬೇಕು. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿಯೂ ಜನಸ್ನೇಹಿಯಾಗಿ ತಕ್ಷಣ ಸ್ಪದಿಸುವಂತ್ತಾಗಬೇಕು. ಗ್ರಾಮಕರಣಿಕರಿಂದ ಹಿಡಿದು ಮೇಲಾಧಿಕಾರಿಗಳ ವರೆಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಕಾನೂನು ಇದ್ದರೂ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕು. ಕೆಲವೊಂದು ಕಡೆ ಪರಂಬೊಕು, ಡೀಮ್ಡ್ ಫಾರೆಸ್ಟ್ ಮೊದಲಾದ ಭಾಗಗಳಲ್ಲಿ ಮನೆ ಕಟ್ಟಿದ ಕಾರಣದಿಂದ ಹಕ್ಕು ಪತ್ರ ನೀಡುವ ವಿಚಾರದಲ್ಲಿ ವಿಳಂಬವಾಗಿರಬಹುದು. ಸಮಸ್ಯೆಗಳನ್ನು ಅಧಿಕಾರಿಗಳು ಶೀಘ್ರ ಪರಿಹರಿಸುತ್ತಾರೆ ಎಂದು ಶಾಸಕ ಮಠಂದೂರು ಭರವಸೆ ನೀಡಿದರು.
ಸಭೆಯಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್. ಮಾತನಾಡಿ, ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೯೪ಸಿ ಮತ್ತು ೯೪ಸಿಸಿಗೆ ಹಲವಾರು ಅರ್ಜಿಗಳನ್ನು ನೀಡಲಾಗಿದೆ. ಆದರೆ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ. ಈ ಕುರಿತು ಶಾಸಕರು ಕ್ರಮಕೈಗೊಳ್ಳಬೇಕು. ಅತೀ ಶೀಘ್ರವಾಗಿ ಕೊಡುವ ವ್ಯವಸ್ಥೆಯಾಗಲಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮಠಂದೂರು ಶೀಘ್ರವೇ ಹಕ್ಕು ಪತ್ರ ನೀಡುವಂತೆ ಕ್ರಮಕೈಗೊಳ್ಳಲಾಗುವುದು. ನಿವೇಶನಕ್ಕೆ ತಹಶೀಲ್ದಾರರೇ ಬರುವಂತ್ತಾಗಬಾರದು. ವಿಎಗಳು ಕೂಡಾ ಈ ಕುರಿತು ಗಮನಹರಿಸಬೇಕು ಎಂದ ಆಶಕರು ಬಾಕಿ ಇರುವ ಅರ್ಜಿಗಳ ಕುರಿತು ತಕ್ಷಣ ಸ್ಪಂದಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು.
ಅರಿಯಡ್ಕ, ನೆಕ್ಕಿಲಾಡಿ, ಗೊಳಿತೊಟ್ಟು ಮೊದಲಾದ ಭಾಗಗಳಲ್ಲಿ ೯೪ಸಿ ಮತ್ತು ೯೪ಸಿಸಿಯ ಕುರಿತು ಆಗಿರುವ ಸಮಸ್ಯೆಗಳ ಕುರಿತು ಪ್ರಸ್ತಾಪವಾಯಿತು. ಉಪ್ಪಿನಂಗಡಿ ಮತ್ತು ಪುತ್ತೂರು ಹೋಬಳಿ ಮಟ್ಟದ ಒಟ್ಟು ೬೬ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಮತ್ತು ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ ಉಪಸ್ಥಿತರಿದ್ದರು.

ವರದಿ: ಅನೀಶ್ ಪುತ್ತೂರು

Related posts

Leave a Reply