Header Ads
Header Ads
Breaking News

ಪುತ್ತೂರಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ

 ಪುತ್ತೂರು ಹೊರವಲಯದ ಬನ್ನೂರಿನ ಆನೆಮಜಲು ಎಂಬಲ್ಲಿ 5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ನೂತನ ನ್ಯಾಯಾಲಯ ಸಂಕೀರ್ಣ ಮತ್ತು ಬಾರ್ ಎಸೋಸಿಯೇಶನ್ ಕಟ್ಟಡ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನ್ಯಾಯಾಲಯ ಸಂಕೀರ್ಣ ಮತ್ತು ಬಾರ್ ಎಸೋಸಿಯೇಶನ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಶಂಕುಸ್ಥಾಪನೆ ಬಳಿಕ ನಗರದ ನ್ಯಾಯಾಲಯ ಸಂಕೀರ್ಣದ ಪರಾಶರ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ನ್ಯಾಯಾಂಗ ವ್ಯವಸ್ಥೆ ಎಂಬ ವೃಕ್ಷಕ್ಕೆ ವಕೀಲ ಸಮುದಾಯ ಎಂಬುದು ಬೇರು ಇದ್ದಂತೆ. ಆಧುನಿಕ ಕಾಲಘಟ್ಟದಲ್ಲಿ ವಕೀಲ ಸಮುದಾಯ ಹೊಸ ಸವಾಲು ಮತ್ತು ಹೊಸ ಅಗತ್ಯತೆಗಳ ಕಡೆಗೆ ವಿಸ್ತರಣೆಯಾಗುತ್ತಿದೆ. ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನ್ಯಾಯವಾದಿಗಳು ಮುನ್ನಡೆಯಬೇಕು ಎಂದು ಹೇಳಿದರು. ಶಂಕುಸ್ಥಾಪನೆ ನೆರವೇರಿಸಿದ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಮಾತನಾಡಿ, ಪುತ್ತೂರಿನ ನ್ಯಾಯಾಲಯಗಳಿಗೆ ನೂತನ ಕಟ್ಟಡ ಬೇಕೆಂಬುದು ಬಹಳ ವರ್ಷಗಳ ಕನಸು. ಅದೀಗ ನನಸಾಗುತ್ತಿದೆ. ಉತ್ತಮ ಕಟ್ಟಡ ಸಂಕೀರ್ಣ ಮೂಡಿ ಬರಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ವಿ. ನಾಗರತ್ನ, ರಾಜ್ಯ ಹೈಕೋರ್ಟ್‍ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಜಾನ್ ಮೈಖೆಲ್ ಡಿಕುನ್ಹಾ, ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಮಹಮ್ಮದ್ ನವಾಜ್, ಭಾರತ ಸರಕಾರದ ದಕ್ಷಿಣ ವಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಮತ್ತು ಸೆಶನ್ ನ್ಯಾಯಾಧೀಶರಾದ ಕಾಡ್ಲೂರು ಸತ್ಯನಾರಾಯಣಾಚಾರ್ಯ, ರಾಜ್ಯ ಬಾರ್ ಕೌನ್ಸಿಲ್‍ನ ಸದಸ್ಯ ಪಿ.ಪಿ. ಹೆಗ್ಡೆ, ಪುತ್ತೂರು ಬಾರ್ ಎಸೋಸಿಯೇಶನ್ ಪದಾಧಿಕಾರಿಗಳಾದ ಪದ್ಮನಾಭ ಗೌಡ, ಕೃಷ್ಣ ಪ್ರಸಾದ್ ರೈ, ಕುಮಾರನಾಥ್ ಮತ್ತು ದೀಪಕ್ ಬೊಳುವಾರ್ ಉಪಸ್ಥಿತರಿದ್ದರು.

Related posts

Leave a Reply