Header Ads
Header Ads
Header Ads
Breaking News

ಪುತ್ತೂರಿನಲ್ಲಿ ನೂತನ ಮಹಿಳಾ ಸಹಕಾರ ಸಂಘ ಶುಭಾರಂಭ

ಎರಡು ಗೋಡೆಗಳ ನಡುವೆ ಬದುಕು ಸಾಗಿಸುತ್ತಿದ್ದ ಮಹಿಳೆ ಇಂದು ಸಮಾಜದಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರಗಳಿಗೆ ಧುಮುಕುವ ಮೂಲಕ ಸಮಾಜದ ಪುನರುತ್ಥಾನದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮಹತ್ಕಾರ್ಯ ನಡೆಯುತ್ತಿದೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಪರಮಪೂಜ್ಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.

ಅವರು ಭಾನುವಾರ ಪುತ್ತೂರು-ಸುಳ್ಯ ತಾಲೂಕುಗಳ ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ನೂತನ ಮಹಿಳಾ ಸಹಕಾರ ಸಂಘವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪುರುಷ ಸಮಾಜವನ್ನು ತಿದ್ದುವ ಧರ್ಮದ ಶಕ್ತಿ ಮಹಿಳೆಯರಿಗಿದೆ. ಹಾಗೆ ಅಧಃಪತನ ಮಾಡುವ ಶಕ್ತಿಯೂ ಮಹಿಳೆಯರಿಗಿದೆ. ಧರ್ಮದ ನೆಲೆಗಟ್ಟಿನಲ್ಲಿ ಧರ್ಮದ ಪರಿಧೀಯಲ್ಲಿ ಮಹಿಳೆ ಸ್ವಾವಲಂಬಿ ಬದುಕು, ಜೀವನ ನಡೆಸಲು ತನ್ನದೇ ಆದ ಅಸ್ತಿತ್ವದ ಜತೆಗೆ ಸಮಾಜ ಸೇವೆಗೆ ವೇದಿಕೆಯನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಘವನ್ನು ಇಂದು ಆರಿಸಿ ಪ್ರಿಯದರ್ಶಿ ಎಂಬ ಹೆಸರಿನಲ್ಲಿ ಮಹಿಳಾ ಸಹಕಾರ ಸಂಘವನ್ನು ಆರಂಭಿಸಿದ್ದಾರೆ. ಬಡವರ, ದೀನ ದಲಿತರ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವ, ಆರ್ಥಿಕವಾಗಿ ಮೇಲೆತ್ತುವ ಕೆಲಸ ಸಂಘದ ಮುಖ್ಯ ಉದ್ದೇಶವಾಗಿಟ್ಟುಕೊಂಡು ಮಹಿಳೆಯರ ಪಾಲಿಗೆ ನಂದಾದೀಪವಾಗಿ ಸಂಘ ಕಾರ್ಯನಿರ್ವಹಿಸಬೇಕಾಗಿದೆ. ಆಗ ಸಹಕಾರ ಸಂಘ ಸಾರ್ಥಕ್ಯವಾಗಲು ಸಾಧ್ಯ ಎಂದು ನುಡಿದ ಸ್ವಾಮೀಜಿ, ಪುರಾಣದಲ್ಲಿರುವ ಆಗಿರುವ ಮಹಿಳಾ ಶಕ್ತಿಗೂ, ಈಗಿನ ಮಹಿಳಾ ಶಕ್ತಿಗೂ ವ್ಯತ್ಯಾಸ ಇಂದು ಎದ್ದು ಕಾಣುತ್ತಿದೆ. ಆಧುನೀಕರಣಕ್ಕೆ ತಕ್ಕಂತೆ ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ಒಳ್ಳೆಯ ಜನಪರ ಕಾರ್ಯ ಮೈಗೂಡಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ನೂತನ ಮಹಿಳಾ ಸಹಕಾರ ಸಂಘದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ, ಅರಣ್ಯ ಸಚಿವ ಬಿ.ರಮಾನಾಥ ರೈ ಮಾತನಾಡಿ, ಒಳ್ಳೆಯ ಆಶೋತ್ತರಗಳಿಂದ, ಮಹಿಳಾ ಸಬಲೀಕರಣ, ಸಾಮಾಜಿಕವಾಗಿ ಮುಂದೆ ಬರುವ ಅಪೇಕ್ಷೆಯಿಂದ ಇಂದು ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘ ಆರಂಭಗೊಂಡಿದೆ. ಮಹಿಳೆಗೆ ಸ್ವಾಭಿಮಾನ ಬದುಕು ಸಿಕ್ಕಿದಾಗ ತನ್ನ ಜತೆ ಸಮಾಜವೂ ಎತ್ತರಕ್ಕೆ ಬೆಳೆಯಲು ಸಾಧ್ಯ. ಇದು ಈ ಮಹಿಳಾ ಸಹಕಾರ ಸಂಘದಿಂದ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘದ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಸಂಘದ ವೆಬ್‌ಸೈಟನ್ನು ಮಾದೇ ದೇವುಸ್ ಚರ್ಚ್‌ನ ಧರ್ಮಗುರು ರೆ.ಫಾ.ಆಲ್ಫ್ರೆಡ್ ಜೆ. ಪಿಂಟೋ ಉದ್ಘಾಟಿಸಿದರು. ಸಂಘದ ಪ್ರಥಮ ಪಾಲು ಪತ್ರ ವಿತರಣೆಯನ್ನು ಸಾಮಾಜಿಕ ಮುಂದಾಳು ನಳಿನಿ ಲೋಕಪ್ಪ ಗೌಡ, ಪ್ರಥಮ ಠೇವಣಿ ಪತ್ರವನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಹಾಗೂ ಪ್ರಥಮ ಸಾಲ ಪತ್ರವನ್ನು ಸಂಜೀವ ಮಠಂದೂರು ವಿತರಿಸಿದರು.
ಸನ್ಮಾನ : ಸಮಾರಂಭದಲ್ಲಿ ನಗೆಹಬ್ಬ ಖ್ಯಾತಿಯ ಮಾತುಗಾರ್ತಿ ಸುಧಾ ಬರಗೂರು, ನಳಿನಿ ಲೋಕಪ್ಪ ಗೌಡ ಹಾಗೂ ಡಾ.ಗೌರಿ ಪೈ ಅವರನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು. ಭಾರತಿ ಶಂಕರ್ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯ ಅತಿಥಿಯಾಗಿ ಪುತ್ತೂರು ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಸಂಜೀವ ಮಠಂದೂರು ,ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ, ರಾಜ್ಯ ಅರೆಭಾಷೆ ಅಕಾಡೆಮಿ ಸದಸ್ಯರಾದ ಮಾಧವ ಗೌಡ, ಚಿದಾನಂದ ಬೈಲಾಡಿ, ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರವಲಯ ಮಾಜಿ ನಿರ್ದೇಶಕ ನವೀನ್ ಭಂಡಾರಿ, ಹಿರಿಯ ವೈದ್ಯೆ ಡಾ.ಗೌರಿ ಪೈ ಪಾಲ್ಗೊಂಡು ಶುಭ ಹಾರೈಸಿದರು.

ಕಾರ್ಯಕ್ರಮದ ಮೊದಲು ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಕೊಂಬು ಕಹಳೆ, ವಾದ್ಯ, ಕಳಶದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸಂಘದ ಆಡಳಿತ ಕಚೇರಿ, ಭದ್ರತಾ ಕೊಠಡಿ ಹಾಗೂ ಸಂಘದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಬಳಿಕ ಸುಳ್ಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕ ಉಮಾದೇವಿ ಅವರಿಂದ ಪ್ರವಚನ, ಸುಧಾ ಬರಗೂರು ತಂಡದಿಂದ ವಿನೂತನ ಹಾಸ್ಯಕಾರ್ಯಕ್ರಮ “ನಗೆಹಬ್ಬ” ನಡೆಯಿತು.

Related posts

Leave a Reply