Header Ads
Breaking News

ಪುತ್ತೂರಿನ ಕಾಲೇಜು ಆಡಿಟ್‌ಗಾಗಿ ಲಂಚದ ಬೇಡಿಕೆ : ಶಿಕ್ಷಣ ಇಲಾಖೆಯ ಅಧಿಕಾರಿ ಎಸಿಬಿ ಬಲೆಗೆ !

ಪುತ್ತೂರು : ಪುತ್ತೂರಿನ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲೆಕ್ಕಪರಿಶೋಧನೆ(ಅಡಿಟ್) ಗಾಗಿ ರೂ.2.50 ಲಕ್ಷದ ಬೇಡಿಕೆ ಮುಂದಿಟ್ಟು ಲಂಚ ಪಡೆದ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಲಂಚದ ಹಣದೊಂದಿಗೆ ಶುಕ್ರವಾರ ರೆಡ್‍ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕರಾಗಿರುವ ಲೋಕೇಶ್.ಎ.ಎಂ.ಲಂಚ ಸ್ವೀಕರಿಸಲು ಹೋಗಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಶಿಕ್ಷಣ ಇಲಾಖೆಯ ಅಧಿಕಾರಿ. ಮಂಗಳೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳದವರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲೆಕ್ಕ ಪರಿಶೋಧನೆ ಗುರುವಾರ ಆರಂಭಗೊಂಟಿದ್ದು, ಲೆಕ್ಕ ಪರಿಶೋಧನೆಗಾಗಿ ನಿಯುಕ್ತಿಗೊಂಡಿದ್ದ ಕಾಲೇಜು ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕ ಲೋಕೇಶ್ ಅವರು ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಭಟ್ ಅವರಲ್ಲಿ ಕಾಲೇಜಿನ ಲೆಕ್ಕಪರಿಶೋಧನೆಗಾಗಿ ರೂ. 2.50 ಲಕ್ಷ ಲಂಚದ ಬೇಡಿಕೆ ಮುಂದಿಟ್ಟಿದ್ದರು. ಈ ಕುರಿತು ರಾಧಾಕೃಷ್ಣ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

ಕಾಲೇಜು ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷ ಲೋಕೇಶ್ ಅವರು ಶುಕ್ರವಾರ ಹಣದೊಂದಿಗೆ ಮಂಗಳೂರಿನ ಸುರತ್ಕಲ್‍ನಲ್ಲಿರುವ ಸದಾನಂದ ಲಾಡ್ಜ್ ಬಳಿಗೆ ಬರಲು ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಅವರಿಗೆ ತಿಳಿಸಿದ್ದರು. ಅವರು ತಿಳಿಸಿದಂತೆ ರಾಧಾಕೃಷ್ಣ ಅವರು ಹಣದೊಂದಿಗೆ ಅಲ್ಲಿಗೆ ತೆರಳಿ ಲಾಡ್ಜ್ ಬಳಿ ಲಂಚದ ಹಣ ನೀಡಿದ ವೇಳೆ ಭ್ರಷ್ಟಾಷಾರ ನಿಗ್ರಹ ದಳದ ಪೊಲೀಸರು ದಾಳಿ ಮಾಡಿ ಆರೋಪಿ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ರೂ.2.50 ಲಕ್ಷ ಹಣದೊಂದಿಗೆ ಬಂಧಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಪಶ್ಚಿಮ ವಲಯದ ಎಸ್ಪಿ ಉಮಾಪ್ರಶಾಂತ್ ಅವರ ನಿರ್ದೇಶನದಲ್ಲಿ, ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್‍ಪೆಕ್ಟರ್‍ಗಳಾದ ಯೋಗೀಶ್ ಕುಮಾರ್ ಮತ್ತು ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಹರಿಪ್ರಸಾದ್, ಉಮೇಶ್,ರಾಧಾಕೃಷ್ಣ ಡಿ.ಎ, ಪ್ರಶಾಂತ್,ರಾಧಾಕೃಷ್ಣ ಕೆ, ಮಹಿಳಾ ಸಿಬ್ಬಂದಿ ವೈಶಾಲಿ ಮತ್ತು ನಯನಾ ಹಾಗೂ ಇಲಾಖೆಯ ಚಾಲಕರಾದ ರಾಕೇಶ್,ರಾಜೇಶ್ ಮತ್ತು ಗಣೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *