Header Ads
Header Ads
Header Ads
Breaking News

ಪುತ್ತೂರಿನ ಕುರಿಯದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ : ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ದ.ಕ. ಪೊಲೀಸರು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಕುರಿಯ ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯನ್ನು ಕೃತ್ಯ ನಡೆದ 24 ಗಂಟೆಯಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ (39) ಬಂಧಿತ ಆರೋಪಿ. ಈತ ಕಳ್ಳತನ ಮಾಡುವುದಕ್ಕಾಗಿ ಮನೆಯೊಳಗೆ ಪ್ರವೇಶಿಸಿದ್ದು, ಕಳವು ನಡೆಸುವ ವೇಳೆಯಲ್ಲಿ ಮನೆ ಮಂದಿ ಎಚ್ಚರಗೊಂಡ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿರುವುದಾಗಿ ತನಿಖೆ ವೇಳೆ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೀಂ ಖಾನ್ ಕಳ್ಳತನ ನಡೆಸಲೆಂದು ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕೊಗ್ಗು ಸಾಹೇಬ್ ಅವರ ಮನೆಗೆ ಹೋಗಿದ್ದು, ಮನೆಯ ಹಂಚು ಸರಿಸಿ ಒಳಗೆ ಪ್ರವೇಶಿಸಿ, ಕಳ್ಳತನ ನಡೆಸುವ ವೇಳೆಯಲಿ ಮನೆ ಮಂದಿಗೆ ಎಚ್ಚರವಾಗಿತ್ತು. ಮನೆಯವರ ಪರಿಚಯಸ್ಥನೇ ಆಗಿದ್ದ ಕರೀಂ ಖಾನ್ ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಈ ಕೃತ್ಯ ಎಸಗಿರುವುದಾಗಿ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ಕೊಗ್ಗು ಸಾಹೇಬ್ ಅವರೊಂದಿಗೆ ಹಣಕಾಸಿನ ವಿಚಾರದಲ್ಲಿಯೂ ಕರೀಂ ಖಾನ್‌ಗೆ ಮನಸ್ಥಾಪವಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾನೆ. ಹಲ್ಲೆಯಿಂದ ಕೊಗ್ಗು ಸಾಹೇಬ್ ಮತ್ತು ಸಬೀಹಾ ಬಾನು ಸ್ಥಳದಲ್ಲಿಯೇ ಮೃತಪಟ್ಟು, ಖತೀಜಮ್ಮ ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಯಿಂದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯ ನಡೆದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ಬಂಧಿಸಿರುವ ಪೊಲೀಸರ ಸಾಧನೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *