Header Ads
Breaking News

ಪುತ್ತೂರಿನ ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ : ಹಿರಿಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ಸಪ್ತಾಹ ಮಾದರಿಯ ಕರಸೇವೆ

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಪ್ರಾಚೀನ ಪ್ರಾಚ್ಯ ಕಟ್ಟಗಳಲ್ಲೊಂದಾದ ಸರಕಾರಿ ಶಿಕ್ಷಣ ಸಂಸ್ಥೆ ಪುತ್ತೂರಿನ ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ (ಸರಕಾರಿ ಪ್ರೌಢ, ಪದವಿ ಪೂರ್ವ ಕಾಲೇಜು, ಕೊಂಬೆಟ್ಟು, ಪುತ್ತೂರು) ಈ ಕಟ್ಟಡದ ಮಾಡನ್ನು ತುರ್ತು ದುರಸ್ಥಿಗೊಳಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡ ಸಪ್ತಾಹ ಮಾದರಿಯ ಕರಸೇವೆಗೆ ಜ.3ರಂದು ಚಾಲನೆ ನೀಡಲಾಗಿದೆ.
1916ರಲ್ಲಿ ನಿರ್ಮಾಣಗೊಂಡ ಈ ವಿದ್ಯಾ ದೇಗುಲ 104 ವರ್ಷಗಳ ಭವ್ಯ ಇತಿಹಾಸವನ್ನು ಧಾರಣೆ ಮಾಡಿಕೊಂಡಿದ್ದು, ಇಲ್ಲಿಯವರೆಗಿನ ತನ್ನ ಅಪೂರ್ವ ಹಾದಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಸೃಷ್ಟಿಸಿ ಸಮಾಜಕ್ಕೆ ಸಮರ್ಪಣೆ ಮಾಡಿದೆ. ಇಲ್ಲಿನ ಕಣಕಣದಲ್ಲೂ ವಿದ್ಯಾ ದೇವಿಯ ಉಸಿರು ಸಂಚಲನಗೊಳ್ಳುತ್ತಿದೆ. ಪುತ್ತೂರು ಮಾತ್ರವಲ್ಲದೆ, ಸುತ್ತಮುತ್ತಲಿನ ಹತ್ತಾರು ಊರುಗಳಲ್ಲಿ ಸುಮಾರು ಮೂರು ತಲೆಮಾರಿನ ಶಿಕ್ಷಣವಂತ ಜ್ಞಾನಿಗಳನ್ನು ರೂಪಿಸಿದ ಕೊಂಬೆಟ್ಟು ಶಾಲೆ ಪುತ್ತೂರು ತಾಲೂಕಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಶತಮಾನದ ಹಾದಿಯಲ್ಲಿ ಗಾಳಿ, ಮಳೆ, ಬಿಸಿಲೆನ್ನದೆ ತನ್ನ ಅಭೇದ್ಯ ಶಕ್ತಿಯಿಂದ ಎದೆಗುಂದದೇ ನಿಂತಿದ್ದ ಸಂಸ್ಥೆಯ ಪ್ರಾಚೀನ ಕಟ್ಟಡ ಇತ್ತೀಚೆಗೆ ನಿಧಾನವಾಗಿ ಶಿಥಿಲಗೊಳ್ಳುತ್ತಾ ಸಾಗುತ್ತಿದ್ದು, ಕಾಯಕಲ್ಪದ ನಿರೀಕ್ಷೆಯಲ್ಲಿದೆ. ತನ್ನ ಭವ್ಯ ಇತಿಹಾಸದ ಕಾರಣದಿಂದ ಪಾರಂಪರಿಕ ತಾಣ ಎಂಬ ಹೆಗ್ಗಳಿಕೆ ಸಂಪಾದಿಸಿಕೊಂಡಿರುವ ಈ ಕಟ್ಟಡವನ್ನು ಅದರ ಮೂಲ ರೂಪದಲ್ಲೇ ಉಳಿಸಿಕೊಂಡು ಪುನರುತ್ಥಾನಗೊಳಿಸಬೇಕಾದ ಅನಿವಾರ್ಯತೆ ಸಮಾಜ ಮತ್ತು ಸರಕಾರದ ಮುಂದಿದೆ. ಇದನ್ನು ಗಮನದಲ್ಲಿಸಿರಿದ ಇಲ್ಲಿನ ಹಿರಿಯ ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳು ಹಾಗು ಶಿಕ್ಷಣ ಪ್ರೇಮಿಗಳು ಜೊತೆಗೂಡಿ ಶಾಲಾ ಕಟ್ಟಡದ ಮಾಡನ್ನು ತುರ್ತು ದುರಸ್ತಿ ಮಾಡುತ್ತಿದ್ದಾರೆ.


ಸಂಪ್ರದಾಯದಂತೆ ಕಾಮಗಾರಿ ಆರಂಭಕ್ಕೂ ಮುಂದೆ ಬಾಳೆಎಲೆಯಲ್ಲಿ ಅಕ್ಕಿ, ತೆಂಗಿನ ಕಾಯಿಯನ್ನು ಮುಂದಿಟ್ಟು ದೀಪ ಪ್ರಜ್ವಲಿಸುವ ಮೂಲಕ ಕೆಲಸಕ್ಕೆ ಚಾಲನೆ ನೀಡಲಾಯಿತು. ಹಿರಿಯ ವಿದ್ಯಾರ್ಥಿ ಬಲರಾಮ ಆಚಾರ್ಯ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಮಾತನಾಡಿ ನಾನು ಮತ್ತು ನನ್ನ ದೊಡ್ಡ ಮಗ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ. ಶಾಲಾಭಿವೃದ್ಧಿಗಾಗಿ ನನ್ನ ಪೂರ್ಣ ಸಹಕಾರ ಕೊಡುವುದಾಗಿ ಭರವಸೆ ನೀಡಿದರು. ಸ್ಥಳೀಯ ನಿವಾಸಿ ಪದ್ಯಾಣ ಶಂಕರನಾರಾಯಣ ಭಟ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಕರಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಎಂ.ಎಸ್ ರಘುನಾಥ ರಾವ್, ಸುರೇಶ್ ಶೆಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ತುರ್ತು ಕಾಮಗಾರಿಗೆ ಧನ ಸಹಾಯ ಅಥವಾ ವಸ್ತು ರೂಪದಲ್ಲೂ ಸಹಕಾರ ನೀಡುವಂತೆ ಹಿರಿಯ ವಿದ್ಯಾರ್ಥಿಗಳ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಎಸ್‌ಡಿಎಂಸಿ ಅಧ್ಯಕ್ಷ ವಕೀಲರ ಸಂಘದ ಉಪಾಧ್ಯಕ್ಷರಾಗಿರುವ ಸುರೇಶ್ ರೈ ಪಡ್ಡಂಬೈಲು, ಮರಾಠಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ್ ನಾಯ್ಕ್, ಅದಿತ್ಯನಾರಾಯಣ, ರಂಜಿತ್ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕ ಶ್ರೀಗಣೇಶ್ ಕೆದಿಲಾಯ, ಶಿವಾನಿ ಬಿ, ಆಶಾ, ದೀಪ್ತಿ, ಶಂಕರ್ ಜೋಯಿಶ, ಹರೀಶ್ ಶೆಟ್ಟಿ, ರೋಹಿತ್, ಜೀತೇಶ್, ಲಿಖಿತ್ ರಾಜ್ ಅರಸು, ಧೀರಜ್ ಕುಮಾರ್, ನಿತಿನ್ ಕುಮಾರ್, ಸುದರ್ಶನ್ ಆಚಾರ್ಯ, ಗಿರಿಧರ ಹೆಗ್ಡೆ, ಹರೀಶ್, ದಿನೇಶ್, ಮಧುಸೂಧನ್ ಹಾರಾಡಿ ಸೇರಿದಂತೆ ಸುಮಾರು 20ಕ್ಕೂ ಅಧಿಕ ನುರಿತು ಕಾರ್ಮಿಕರು ಉಪಸ್ಥಿತರಿದ್ದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಶಾಲೆಯ ಪ್ರಾಂಶುಪಾಲ ವಸಂತ್, ಹಿರಿಯ ಶಿಕ್ಷಕಿ ಗೀತಾಮಣಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾ ದೇಗುಲದ ಹೆಂಚು ತೆಗೆಯುವ ಕರಸೇವೆ ಆರಂಭಗೊಂಡಿತ್ತು.
ತುರ್ತು ಕಾಮಗಾರಿಗಳು ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ಈಗಾಗಲೇ ಆರಂಭಗೊಂಡದ್ದು, ಶ್ರಮದಾನದಿಂದ ಶಾಲೆಯ ಹೆಂಚು ತೆಗೆಯುವ ಕೆಲಸ ನಡೆದಿದೆ. ಆರ್ಥಿಕ ನೆರವು ನೀಡುವ ಹಿರಿಯ ವಿದ್ಯಾರ್ಥಿಗಳು ಯುನಿಯನ್ ಬ್ಯಾಂಕ್ ಖಾತೆ ನಂ: 520101016779971 ನೀಡಬಹುದು. ಹೆಚ್ಚಿನ ವಿವರಕ್ಕೆ ಮೊ: 9008962712 ಅನ್ನು ಸಂಪರ್ಕಿಸುವಂತೆ ಶಾಲಾ ಪ್ರಾಂಶುಪಾಲ ವಸಂತ್ ಅವರು ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *