Header Ads
Breaking News

ಪುತ್ತೂರಿನ ತೆಂಕಿಲದಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ ಗುಡ್ಡ: ಭಾರೀ ಭೂಕಂಪನದ ಸಾಧ್ಯತೆ – ಅಧಿಕಾರಿಗಳ ಎಚ್ಚರಿಕೆ

ಪುತ್ತೂರು ನಗರದ ಹೊರವಲಯದ ತೆಂಕಿಲ ದರ್ಖಾಸು ಎಂಬಲ್ಲಿರುವ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗೇರು ತೋಟವಿರುವ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಡ್ಡದಲ್ಲಿ ಭೂ ಕಂಪನ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಅಪಾಯದ ಸೂಚನೆ ನೀಡಿದ್ದಾರೆ. ತೆಂಕಿಲ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು ನಿನ್ನೆ ಸ್ಥಳೀಯರ ಗಮನಕ್ಕೆ ಬಂದಿತ್ತು, ಗುಡ್ಡದ ತಪ್ಪಲು ಪ್ರದೇಶದ ಮಧ್ಯಭಾಗದಲ್ಲಿ ಸುಮಾರು 200ಮೀಟರ್ ಉದ್ದದಲ್ಲಿ ಭೂಮಿ ಬಿರುಕು ಬಿಟ್ಟಿರುವುದು, ಅಲ್ಲದೆ ಮೇಲಿನ ಭಾಗದಲ್ಲಿಯೂ ಅಡ್ಡ ಮತ್ತು ನೇರವಾಗಿ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ಇದೇ ಭಾಗದಲ್ಲಿರುವ ಮೊರ್ಗೇಕಳ ಗರಡಿಯ ಬಳಿ ಮಣ್ಣಿನ ಅಡಿಭಾಗದಿಂದ ಮಣ್ಣುಮಿಶ್ರಿತ ನೀರು ಮೇಲೆದ್ದು, ಕೆಳಭಾಗಕ್ಕೆ ಹರಿದು ಹೋಗುತ್ತಿದೆ. ಗುಡ್ಡದ ಮೇಲಿಂದಲೂ ನೀರು ಹರಿದು ಬರುತ್ತಿದೆ. ಇಲ್ಲಿನ ರೋಚಕ ಸ್ಥಿತಿಯು ಮಡಿಕೇರಿ ದುರಂತವನ್ನು ನೆನಪಿಸುವಂತಿರುವುದರಿಂದ ಜನತೆಯಲ್ಲಿ ಭೀತಿ ಸೃಷ್ಠಿಸಿದೆ. ಈ ಭಾಗದಲ್ಲಿ ರವಿ ಮತ್ತು ಹರೀಶ್ ಎಂಬವರಿಗೆ ಸೇರಿದ ನಿರ್ಮಾಣ ಹಂತದಲ್ಲಿರುವ ಮನೆಯ ಮೇಲೆ ಗುಡ್ಡ ಜರಿದು ಬಿದ್ದು, ಅಪಾರ ನಷ್ಟ ಸಂಭವಿಸಿತ್ತು. ಈ ಹಿನ್ನಲೆಯಲ್ಲಿ ಭಾನುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆ ಹಾಗೂ ಬಿರುಕು ಬಿಟ್ಟ ಸ್ಥಳ ಪರಿಶೀಲನೆ ನಡೆಸಿದ್ದ ಶಾಸಕ ಸಂಜೀವ ಮಠಂದೂರು ಅವರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಭೂವಿಜ್ಞಾನ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಭೂಕಂಪನ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಪ್ರದೇಶ ವಾಸಕ್ಕೆ ಯೋಗ್ಯವಾಗಿಲ್ಲ. ಗುಡ್ಡದಲ್ಲಿ ಅಲ್ಲಲ್ಲಿ ತೂತುಗಳನ್ನು ಕೊರೆದು ಶೇಖರಣೆಗೊಂಡ ನೀರು ಹೊರಹೋಗುವಂತೆ ಮಾಡುವುದರಿಂದ ತಾತ್ಕಾಲಿಕವಾಗಿ ಅಪಾಯ ತಡೆಯಬಹುದಾಗಿದೆ. ಆದರೆ ಇದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದು ಅವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *