Breaking News

ಪುತ್ತೂರಿನ ಪಲ್ಲತ್ತಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಸಿದಿದೆ ಕಟ್ಟಡದ ಮಾಡು ಇದು ಹಲವು ಸಮಸ್ಯೆಗಳ ಗೂಡು

ಅಧಿಕಾರಿಗಳೇ ಮಕ್ಕಳ ಕೊರತೆಯ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಪಲ್ಲತ್ತಾರು ಎಂಬಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಗತಿಯೇ ಒಂದು ಪ್ರತ್ಯಕ್ಷ ಉದಾಹರಣೆಯಾಗಿದೆ.
ಇಲ್ಲಿನ ಒಂದರಿಂದ ೭ ನೇ ತರಗತಿಯ ವರೆಗೆ ಶಿಕ್ಷಣ ನೀಡಲಾಗುತ್ತಿರುವ ಇಲ್ಲಿ ಒಬ್ಬರೇ ಒಬ್ಬ ಖಾಯಂ ಶಿಕ್ಷಕರಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡದ ಮಾಡು ಶಾಲಾ ಪೋಷಕರು ಪೋಣಿಸಿದ ಮರದ ಕಂಬದ ಆಧಾರದಲ್ಲಿ ನಿಂತುಕೊಂಡಿದ್ದು, ಯಾವಾಗ ಕುಸಿದು ಬೀಳುತ್ತದೋ ಗೊತ್ತಿಲ್ಲ. ಶಾಲೆಯ ಕೆಲವೊಂದು ಕೊಠಡಿಗಗಳಿಗೆ ಬಾಗಿಲು ಮುರಿದು ಹೋಗಿವೆ. ಕಿಟಿಕಿ ಬಾಗಿಲುಗಳು ಗೆದ್ದಲು ಹಿಡಿದು ಹೋಗಿವೆ. ಇಷ್ಟೆ ಅಲ್ಲದೇ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯೂ ಇಲ್ಲ. ಅಕ್ಷರ ದಾಸೋಹದ ಅಡುಗೆ ಕೋಣೆಯ ಸ್ಥಿತಿ ಹೇಳುವಂತಿಲ್ಲ. ಮಕ್ಕಳು ತರಗತಿ ಕೊಠಡಿಯೊಳಗೆ ಸೊಳ್ಳೆಬತ್ತಿ ಉರಿಸಿ ಕುಳಿತುಕೊಳ್ಳುವ ಶೋಚನೀಯ ಸ್ಥಿತಿ ಇಲ್ಲಿದೆ ಎಂದರೆ ಇಲ್ಲಿ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳು ಜೀವಂತವಾಗಿದ್ದಾರೆಯೇ ಎಂಬ ಪ್ರಶ್ನೆ ಏಳುವುದು ಸಹಜ.
ಈ ಶಾಲೆಯಲ್ಲಿ ಕಳೆದ ವರ್ಷ ಯಾರೊಬ್ಬ ಸರ್ಕಾರಿ ಶಿಕ್ಷಕರು ಇರಲಿಲ್ಲ. ನಿಯೋಜನೆ ಮಾಡಲಾದ ಶಿಕ್ಷಕಿಯೊಬ್ಬರು ಬರೀ ೩ ತಿಂಗಳು ಮಾತ್ರ ಇದ್ದರು. ಉಳಿದಂತೆ ಕೇವಲ ಅತಿಥಿ ಶಿಕ್ಷಕರಿಂದ ಈ ಶಾಲೆ ನಡೆದಿದೆ. ಶಿಕ್ಷಕರ ಸಮಸ್ಯೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಪ್ರಸ್ತುತ ೭ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದುಕೊಂಡು ಬೇರೆ ಶಾಲೆಗೆ ಹೋಗಿದ್ದಾರೆ. ಇದರ ಪರಿಣಾಮವಾಗಿ ಇದೀಗ ಶಾಲೆಯಲ್ಲಿ ೫೪ ಮಂದಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಇನ್ನಷ್ಟು ಮಕ್ಕಳನ್ನು ಅವರ ಪೋಷಕರು ಬೇರೆ ಖಾಸಗಿ ಶಾಲೆಗೆ ಸೇರ್‍ಪಡೆಗೊಳಿಸಲು ಮುಂದಾಗಿದ್ದಾರೆ. ಒಂದು ವರ್ಷದಿಂದೀಚೆಗೆ ಶಾಲೆಯ ಸಮಸ್ಯೆಗಳನ್ನು ನಿವಾರಿಸುವಂತೆ ಸತತ ಹೋರಾಟ ನಡೆಸುತ್ತಾ ಬಂದಿದ್ದರೂ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರು ಜವಾಬ್ದಾರಿ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎಸ್‌ಡಿಎಂಸಿ ಮತ್ತು ಮಕ್ಕಳ ಪೋಷಕರು ಸೇರಿಕೊಂಡು ಉಗ್ರ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

Related posts

Leave a Reply