
ಚುನಾವಣೆ ಎಂದರೆ ಎಲ್ಲರಿಗೂ ಕುತೂಹಲ….. ಕಾತುರ… ಮತದಾನದ ನೈಜ್ಯ ಅನುಭವ ಪಡೆಯಲು 18 ವರ್ಷ ತುಂಬುವವರೆಗೆ ಕಾಯಲೇಬೇಕು. 18 ವರ್ಷಕ್ಕೆ ಮುಂಚೆ ಮತದಾನ ಹಕ್ಕು ಸಿಕ್ಕಿದರೆ…. ಹೌದು…ಶಾಲೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮಕ್ಕಳು ಮತದಾನದ ಹಕ್ಕಿನ ಖುಷಿ ಪಡೆದರು. ಚುನಾವಣಾ ಪರಿಕಲ್ಪನೆ ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಪುತ್ತೂರು ತಾಲೂಕಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇಲ್ಲಿ ಅಣಕು ಚುನಾವಣಾ ಪ್ರಕ್ರಿಯೆ ನಡೆಯಿತು. 6ರಿಂದ 8ನೇ ತರಗತಿ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಶಾಲಾ ನಾಯಕ ಮತ್ತು ಉಪನಾಯಕರ ಸ್ಥಾನಕ್ಕೆ ಸ್ಪರ್ಧೆ ನಡೆಯಿತು.
ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ತಮ್ಮ ಅಭ್ಯರ್ಥಿಯ ಆಯ್ಕೆಯಲ್ಲಿ ಪಾಲ್ಗೊಂಡರು. ಚುನಾವಣಾ ಅಧಿಕಾರಿಯಾಗಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸರೋಜಿನಿ ಯವರು ಸಹಕರಿಸಿದರು. ಪ್ರಿಸೈಡಿಂಗ್ ಅಧಿಕಾರಿಯಾಗಿ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಪ್ರಿಯಕುಮಾರಿ ಭಾಗವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಶಾಲಾ ಎಲ್ಲಾ ಶಿಕ್ಷಕರು ಸಹಕರಿಸಿದರು. ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಮತ ಎಣಿಕೆ ಕಾರ್ಯ ನಡೆಯಿತು. ಶಾಲಾ ನಾಯಕನಾಗಿ ಜೀವನ್ ಡಿ 8ನೇ ತರಗತಿ, ಶಾಲಾ ಉಪನಾಯಕನಾಗಿ 7ನೇ ತರಗತಿಯ ಅನಿರುದ್ಧ ದೋಟ 7ನೇ ತರಗತಿ ಆಯ್ಕೆಯಾಗಿದ್ದಾರೆ.