Header Ads
Header Ads
Breaking News

ಪುತ್ತೂರು:ಕುಟುಂಬಸ್ಥರ ಕಳಕೊಂಡ ನತದೃಷ್ಟ ಅಜ್ಜ

ಪತ್ನಿ ಮತ್ತು ಮೂವರು ಪುತ್ರರನ್ನು ಕಳೆದುಕೊಂಡಿರುವ 63ರ ಹರೆಯದ ಈ ನತದೃಷ್ಟ ಅಜ್ಜನದ್ದು ಈಗ ಏಕಾಂಕಿ ಬದುಕು. ಗ್ರಾಮೀಣ ಪ್ರದೇಶದಲ್ಲಿದ್ದ ಮನೆಮಠವನ್ನು ಬಿಟ್ಟು ಪುತ್ತೂರು ನಗರ ಸೇರಿಕೊಂಡಿರುವ ಇವರದ್ದು ಈಗ ಅಲೆಮಾರಿ ಜೀವನ. ಪುತ್ತೂರಿನ ಮಿನಿವಿಧಾನ ಸೌಧದ ಗೋಡೆ ಬದಿಯೇ ಪ್ರಸ್ತುತ ಇವರ ವಾಸಸ್ಥಾನ…!

ಇದು ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಪದಡ್ಕ ಸಮೀಪದ ಸಣ್ಣಂಗೋಳು ನಿವಾಸಿ ಹುಕ್ರಪ್ಪ ಮೂಲ್ಯ ಅವರ ವ್ಯಥೆಯ ಕಥೆ. ಸಂಸಾರದ ಜತೆಗೆ ಎಲ್ಲವನ್ನೂ ಕಳಕೊಂಡು ತೀರಾ ಶೋಚನೀಯ ಸ್ಥಿತಿಯಲ್ಲಿ ಬದುಕು ಕಳೆಯುತ್ತಿರುವ ಹುಕ್ರಪ್ಪ ಅವರಿಗೆ ನನ್ನವರು ಎಂದು ಹೇಳಿಕೊಳ್ಳಲು ಈಗ ಯಾರೂ ಇಲ್ಲ.

ಪಡುವನ್ನೂರು ಗ್ರಾಮದ ಪದಡ್ಕ ಸಮೀಪದ ಸಣ್ಣಂಗೋಳು ಎಂಬಲ್ಲಿ ತನ್ನ ಪತ್ನಿಯ ಹೆಸರಿನಲ್ಲಿ ೫೦ ಸೆಂಟ್ಸ್ ಜಾಗ ಇದೆ. ನಮ್ಮ ಮನೆಯ ಪಕ್ಕದಲ್ಲೇ ಸಹೋದರನ ಮನೆ ಇದೆ. ನನ್ನ ಮೂವರು ಪುತ್ರರಲ್ಲಿ ಒಬ್ಬ ಎಳೆಯ ಪ್ರಾಯದಲ್ಲೇ ಅಕಾಲಿಕ ಮರಣ ಹೊಂದಿದ. ಇನ್ನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಒಳ್ಳೆಯ ಉದ್ಯೋಗದಲ್ಲಿದ್ದ ಮೊತ್ತೊಬ್ಬ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದ. ಪತ್ನಿ ನಿಧನಳಾದ ಬಳಿಕವಂತೂ ನನ್ನ ಭವಿಷ್ಯವೇ ಹೋಗಿದೆ. ಈಗ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ. ‘ಎಂಕ್ ಏರ್ಲಾ ಇಜ್ಜೆರ್… ಎನ್ನ ಬದುಕೇ ಹಾಳಾದ್ ಪೋಂಡು’ (ನನಗೆ ಯಾರೂ ಇಲ್ಲ, ನನ್ನ ಬದುಕೇ ಹಾಳಾಗಿ ಹೋಯಿತು) ಎಂದು ಹುಕ್ರಪ್ಪ ಮೂಲ್ಯ ಅವರು ಅಳವತ್ತುಕೊಳ್ಳುತ್ತಿದ್ದಾರೆ.
ಈ ಎಲ್ಲಾ ದುರ್ಘಟನೆಗಳ ಬಳಿಕ ಯಾವುದೂ ಬೇಡ ಎಂದು ಮನೆ ಬಿಟ್ಟು ಮಡಿಕೇರಿ ಕಡೆಗೆ ತೆರಳಿದ್ದ ಹುಕ್ರಪ್ಪ ಅವರು ಮರಳಿ ಪುತ್ತೂರು ನಗರ ಸೇರಿಕೊಂಡಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಪುತ್ತೂರು ನಗರವೇ ಇವರಿಗೆ ಆಶ್ರಯ ತಾಣ. ಹಗಲು ವೇಳೆ ಬೀದಿ ಸುತ್ತುವ ಮೂಲಕ ಸಮಯ ಕಳೆಯುವ ಇವರು ರಾತ್ರಿ ವೇಳೆ ವಿಧಾನಸೌಧ ಕಟ್ಟಡದ ದಕ್ಷಿಣ ಭಾಗದ ಗೋಡೆಯ ಮೂಲೆಯ ನೆರಳಿನಲ್ಲಿ ಪುಟ್ಟ ದಿಂಬಿಗೆ ತಲೆ ಇಟ್ಟು, ಹಳೆಯ ಬಟ್ಟೆಯೊಂದನ್ನು ಹೊದ್ದುಕೊಂಡು ಮಲಗುತ್ತಾರೆ.

ಪತ್ನಿ ನಿಧನಳಾದ ಬಳಿಕ ಮನೆಯ ಆಸೆ ಬಿಟ್ಟಿದ್ದೇನೆ.ಮನೆಯೂ ಜರಿದು ಬಿದ್ದಿದೆ. ಯಾರೂ ಇಲ್ಲದ ಮೇಲೆ ಮನೆಯಲ್ಲಿzನು ಮಾಡುವುದೆಂದು ಪುತ್ತೂರು ನಗರಕ್ಕೆ ಬಂದು ಬೀದಿ ಸುತ್ತುತಿದ್ದೇನೆ. ಮಧ್ಯಾಹ್ನ ಮಹಾಲಿಂಗೇಶ್ವರ ದೇವಳದ ಅನ್ನ ಛತ್ರಕ್ಕೆ ಹೋಗಿ ಊಟ ಮಾಡುತ್ತೇನೆ. ನನ್ನ ಕಷ್ಟ ನೋಡಿ ಯಾರಾದರೂ ನೀಡಿದ ಅಲ್ಪಸ್ವಲ್ಪ ದುಡ್ಡಿನಿಂದ ಬೆಳಿಗ್ಗೆ ಹೋಟೆಲ್‌ನಲ್ಲಿ ತಿಂಡಿ ತಿನ್ನತ್ತಿದ್ದೇನೆ. ರಾತ್ರಿ ಊಟದ ಬಗ್ಗೆ ಚಿಂತಿಸುವುದಿಲ್ಲ. ನೀರು ಕುಡಿದು ಮಲಗುತ್ತೇನೆ ಎಂದು ಕಣ್ಣೀರಿಡುವ ಹುಕ್ರಪ್ಪ ಅವರು ‘ಯಾರಾದರೂ ನನ್ನನ್ನು ಆಶ್ರಮಕ್ಕೆ ಸೇರಿಸಿದರೆ ನೆಮ್ಮದಿಯಿಂದ ಬದುಕಬಲ್ಲೆ’ ಎನ್ನುತ್ತಾರೆ.

ಪುತ್ತೂರಿನ ಮಿನಿವಿಧಾನಸೌಧದ ದಕ್ಷಿಣ ಭಾಗದಲ್ಲಿ ವೃದ್ಧ ಹುಕ್ರಪ್ಪ ಮೂಲ್ಯ ಅವರು ಕಳೆದ ಆರೇಳು ತಿಂಗಳಿನಿಂದ ಆಶ್ರಯ ಪಡೆದಿರುವ ಕುರಿತು ಅವರ ಸಂಬಂಧಿಕರಿಗೆ ಮಾಹಿತಿ ನೀಡಿ ಕರೆದುಕೊಂಡು ಹೋಗುವಂತೆ ತಿಳಿಸಿದ್ದರೂ ಯಾರೂ ಈ ತನಕ ಕರೆದುಕೊಂಡು ಹೋಗಿಲ್ಲ. ಜಾತಿ ಸಂಘಟನೆಯವರೂ ಅವರನ್ನು ಸಂರಕ್ಷಿಸುವ ಕೆಲಸ ಮಾಡಿಲ್ಲ. ಕಂದಾಯ ಇಲಾಖೆಯ ಕಟ್ಟಡದ ಬದಿಯಲ್ಲೇ ಇಷ್ಟು ಸಮಯದಿಂದ ಅವರು ಇದ್ದರೂ ಈ ಬಗ್ಗೆ ಗಮನ ಹರಿಸದ ಕಂದಾಯ ಇಲಾಖೆಯ ಕಾರ್ಯವೈಖರಿ ಹೇಗಿರಬಹುದು ಎಂಬುವುದು ಅರ್ಥವಾಗುತ್ತದೆ -ಬಾಲಚಂದ್ರ ಸೊರಕೆ, ಸಾಮಾಜಿಕ ಕಾರ್ಯಕರ್ತ

Related posts

Leave a Reply