Header Ads
Header Ads
Breaking News

ಪುತ್ತೂರು:ಗೃಹಪ್ರವೇಶವಾಗಿ ಆರು ತಿಂಗಳು ಕಳೆದರೂ ವಿದ್ಯುತ್ ಸಂಪರ್ಕ ದೊರೆತಿಲ್ಲ

ಅಧಿಕಾರದಲ್ಲಿರುವ ವ್ಯಕ್ತಿಗಳು ಯಾವುದೇ ಅಕ್ರಮ ಮಾಡಿದಲ್ಲಿ ಅದನ್ನು ಪ್ರಶ್ನಿಸುವಂತಿಲ್ಲ. ಒಂದು ವೇಳೆ ಪ್ರಶ್ನಿಸಿದರೆ, ಆ ವ್ಯಕ್ತಿಗೆ ಸಿಗುವ ಎಲ್ಲಾ ಸರಕಾರಿ ಸೌಲಭ್ಯಗಳನ್ನು ಕಸಿಯುವ, ಮೂಲಭೂತ ವ್ಯವಸ್ಥೆಗಳು ಸಿಗದಂತೆ ಮಾಡುವ ಹಿಡನ್ ಅಜೆಂಡಾಗಳು ನಮ್ಮ ನಿಮ್ಮ ಮುಂದೆ ನಡೆಯುತ್ತಾನೇ ಇರುತ್ತೆ. ಇಂಥಹುದೇ ಒಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಅಧ್ಯಕ್ಷೆಯ ಅಕ್ರಮ ಪ್ರಶ್ನಿಸಿದ ವ್ಯಕ್ತಿಯನ್ನು ಕಳೆದ ಆರು ತಿಂಗಳಿನಿಂದ ಕತ್ತಲಲ್ಲೇ ಕುಳಿತುಕೊಳ್ಳುವ ಶಿಕ್ಷೆಯನ್ನು ಈ ಗ್ರಾಮಪಂಚಾಯತ್ ನೀಡಿದೆ. 

 ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ತೇಜಪ್ರಸಾದ್ ಎಂಬವರ ಮನೆ. ವಿದ್ಯುತ್ ಸಂಪರ್ಕವಿಲ್ಲದ ಹಳೆ ಮನೆಯನ್ನು ಕೆಡವಿ ಕಳೆದ ಆರು ತಿಂಗಳ ಹಿಂದೆ ತೇಜಪ್ರಸಾದ್ ಕುಟಂಬ ಈ ಹೊಸ ಮನೆಯನ್ನು ಕಟ್ಟಿದೆ. ಆದರೆ ಮನೆ ಗೃಹಪ್ರವೇಶವಾಗಿ ಆರು ತಿಂಗಳು ಕಳೆದರೂ, ಈ ಮನೆಗೆ ವಿದ್ಯುತ್ ಸಂಪರ್ಕ ದೊರೆತಿಲ್ಲ. ಸ್ಥಳೀಯ ಕಾಣಿಯೂರು ಗ್ರಾಮಪಂಚಾಯತ್ ಆಡಳಿತ ಈ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಎನ್.ಒ.ಸಿ ನೀಡದ ಕಾರಣ ಈ ಮನೆ ಮಂದಿ ಕತ್ತಲಲ್ಲೇ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಈ ಮನೆಯಿರುವ ಸ್ಥಳ ತೇಜಪ್ರಸಾದ್ ಕುಟುಂಬದ ಕುಮ್ಕಿ ಭೂಮಿಯಾಗಿದ್ದು, ಕಳೆದ ಒಂದು ವರ್ಷದ ಹಿಂದೆ ಈ ಜಾಗವನ್ನು ೯೪ ಸಿ ನಿಯಮದಡಿ ಸರಕಾರದಿಂದ ಮಂಜೂರು ಮಾಡಿಸಿಕೊಂಡಿದ್ದರು. ಈ ಸ್ಥಳದಲ್ಲಿ ಇದ್ದ ಹಳೆ ಮನೆಯ ಫೋಟೋ ಹಾಗೂ ಇನ್ನಿತರ ದಾಖಲೆಗಳನ್ನು ಗ್ರಾಮಪಂಚಾಯತ್ ಗೆ ನೀಡಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು. ಈ ನಡುವೆ ತೇಜಪ್ರಸಾದ್ ಗ್ರಾಮಪಂಚಾಯತ್ ಅಧ್ಯಕ್ಷೆ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ ಎನ್ನುವ ವಿಚಾರದಲ್ಲಿ ಗ್ರಾಮಪಂಚಾಯತ್ ನಿಂದ ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಕೋರಿದ್ದರು. ಇದೇ ತೇಜಪ್ರಸಾದ್ ಕುಟುಂಬ ಕತ್ತಲೆಯಲ್ಲಿ ಸಿಲುಕಲು ಕಾರಣ ಎನ್ನುವ ಆರೋಪ ಕುಟುಂಬದಿಂದ ಕೇಳಿ ಬರುತ್ತಿದೆ. ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಯನ್ನು ನೀಡಲು ಗ್ರಾಮಪಂಚಾಯತ್ ಹಿಂದೇಟು ಹಾಕುತ್ತಿದೆ. ಅಲ್ಲದೆ ಈ ವಿಚಾರದಲ್ಲಿ ಒಂದೆಡೆ ಕುಳಿತು ಮಾತುಕತೆ ಮಾಡುವ ಆಫರ್ ಕೂಡಾ ನೀಡಿದೆ ಎನ್ನುವ ಆರೋಪವೂ ತೇಜಪ್ರಸಾದ್ ಕುಟುಂಬದ್ದಾಗಿದೆ.

ಆದರೆ ಈ ವಿಚಾರಕ್ಕೆ ಗ್ರಾಮಪಂಚಾಯತ್ ಕೂಡಾ ತನ್ನದೇ ಸ್ಪಷ್ಟನೆಯನ್ನು ನೀಡಿದೆ. ತೇಜಪ್ರಸಾದ್ ಸರಕಾರಿ ಭೂಮಿಯನ್ನು ಪಡೆಯುವಲ್ಲಿ ಅಕ್ರಮ ಎಸಗಿದ್ದು, ಪಂಚಾಯತ್ ಪಿಡಿಒ ಸಹಿ, ಪಂಚಾಯತ್ ಸ್ಹೀಲ್ , ಇನ್ನೋರ್ವ ಸರಕಾರಿ ಅಧಿಕಾರಿಯ ಸಹಿ ಎಲ್ಲವನ್ನೂ ಪೋರ್ಜರಿ ಮಾಡಿದ್ದಾರೆ. ಈ ವಿಚಾರವು ತಮಗೆ ತಿಳಿದ ಹಿನ್ನಲೆಯಲ್ಲಿ ಈಗಾಗಲೇ ತಹಶೀಲ್ದಾರ್ ಗಮನಕ್ಕೆ ತಂದಿದ್ದೇವೆ. ಆದರೆ ಅಲ್ಲಿಂದ ಯಾವುದೇ ಸೂಕ್ತ ಉತ್ತರ ಬಾರದ ಹಿನ್ನಲೆಯಲ್ಲಿ ಇದೀಗ ಬೆಳ್ಳಾರೆ ಪೋಲೀಸ್ ಠಾಣೆಗೂ ದೂರು ನೀಡಲು ಮುಂದಾಗಿದ್ದೇವೆ ಎನ್ನುವ ಸ್ಪಷ್ಟನೆಯನ್ನು ನೀಡಲಾಗುತ್ತಿದೆ. ಆದರೆ ತಹಶೀಲ್ದಾರ್ ಈಗಾಗಲೇ ತೇಜಪ್ರಸಾದ್ ಕುಟುಂಬಕ್ಕೆ ಹಕ್ಕುಪತ್ರವನ್ನು ನೀಡಿಯಾಗಿದ್ದು, ಇದೀಗ ದಾಖಲೆ ಸರಿಯಿಲ್ಲ ಎನ್ನುತ್ತಿರುವ ಗ್ರಾಮಪಂಚಾಯತ್ ವಾದ ಹಲವು ಗೊಂದಲಗಳಿಗೆ ಕಾರಣವಾಗಿದೆ. ಅಲ್ಲದೆ ಒಮ್ಮೆ ಬೆಳ್ಳಾರೆ ಠಾಣೆಗೆ ಎರಡು ದಿನಗಳ ಹಿಂದೆಯೇ ದೂರು ನೀಡಲಾಗಿದೆ ಎನ್ನುವ ಪಂಚಾಯತ್ ಸದಸ್ಯರು, ಮತ್ತೊಮ್ಮೆ ದೂರು ನೀಡಲು ಮುಂದಾಗಿದ್ದೇವೆ ಎನ್ನುವ ಗೊಂದಲದ ಹೇಳಿಕೆಯನ್ನೂ ನೀಡಲಾರಂಭಿಸಿದ್ದಾರೆ.

ತೇಜಪ್ರಸಾದ್ ಕುಟುಂಬದ ೪೫ ಸೆಂಟ್ಸ್ ಕೃಷಿಭೂಮಿಗೆ ತಾಗಿಕೊಂಡು ಇದೀಗ ಮನೆ ಕಟ್ಟಿರುವ 9 ಸೆಂಟ್ಸ್ ಜಾಗವಿದೆ. ಎಲ್ಲಾ ರೈತರಿಗೂ ದೊರಕಿದಂತೆ ಇವರಿಗೂ ೯೪ ಸಿ ಅಡಿಯಲ್ಲಿ ಜಾಗದ ಹಕ್ಕುಪತ್ರವೂ  ದೊರೆತಿರುವುದಕ್ಕೆ ದಾಖಲೆಗಳೂ ಇವೆ. ಆದರೆ ಇದೀಗ ಈ ದಾಖಲೆಗಳೇ ನಕಲಿ ಎನ್ನುವ ಆರೋಪ ಮಾಡುತ್ತಿರುವ ಗ್ರಾಮಪಂಚಾಯತ್ ಸ್ಥಳೀಯ ಪತ್ರಿಕೆಯೊಂದರಲ್ಲಿ ತೇಜಪ್ರಸಾದ್ ಗ್ರಾಮಪಂಚಾಯತ್ ನ ಕ್ಷಮೆ ಕೋರಿದಲ್ಲಿ ವಿದ್ಯುತ್ ಸಂಪರ್ಕಕ್ಕೆ ಎನ್.ಒ.ಸಿ ನೀಡುವುದಾಗಿಯೂ ಪ್ರಕಟಿಸಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.

Related posts

Leave a Reply