Header Ads
Header Ads
Breaking News

ಪುತ್ತೂರು:ಪ್ರಕೃತಿಯ ಚೆಲುವಿನ ತಾಣವೀಗ ’ಮೃತ್ಯುಕೂಪ’

ಪ್ರಕೃತಿಯ ಮಡಿಲಿನ ಈ ಸ್ಥಳ ಕಣ್ಣಿಗೆ ರಮಣೀಯ ತಾಣ. ಸುತ್ತ ಪ್ರಕೃತಿಯ ಹಚ್ಚ ಹಸಿರು. ತೆಂಗು ಕಂಗುಗಳ ನಡುವೆ ಕಾಣುವ ಎತ್ತರ ಗುಡ್ಡಗಳು. ಯಾರೇ ಬಂದರೂ ಇಲ್ಲೊಂದು ಕ್ಷಣ ನಿಂತು ನಳನಳಿಸುವ ನೀರಿನ ಜೊತೆ ಆಟವಾಡುವ ಜಾಗ. ಇದು ಪುತ್ತೂರು ತಾಲೂಕಿನ ’ಕಟಾರ’ ಎಂಬ ಮೃತ್ಯುಕೋಪ…!

ಈ ಕಟಾರ ಎಂಬ ಹಳ್ಳಿ ಪ್ರದೇಶದಲ್ಲಿ ಕುಮಾರಾಧಾರ ನದಿ ಹರಿಯುತ್ತಿದೆ. ಹಳ್ಳಿಯ ಚೆಲುವಿಗೆ ಬಣ್ಣ ಇಟ್ಟಂತೆ ಈ ನದಿ ನೀರು ನೋಡುಗರ ಮನಸ್ಸನ್ನು ಕದಿಯುತ್ತದೆ. ಇಂತಹ ಸ್ಥಳ ಹಲವಾರು ಮಂದಿಯನ್ನು ಬಲಿ ತೆಗೆದುಕೊಂಡು ’ರುದ್ರತಾಣ’ವಾಗಿ ಮಾರ್ಪಾಡುಹೊಂದಿದೆ.
ಪುತ್ತೂರು ನಗರದಿಂದ ಸುಮಾರು ೮ ಕಿಮೀ ದೂರದಲ್ಲಿರುವ ’ಕಟಾರ’ದಲ್ಲಿ ಕಳೆದ ಕೆಲವು ವರ್ಷಗಳಿಂದ 12ದುರ್ಘಟನೆಗಳು ನಡೆದಿದ್ದು, ಇಲ್ಲಿ ಸ್ನಾನ ಮಾಡಲು ಬಂದ 12 ಮಂದಿಯನ್ನು ಆಹುತಿ ಪಡೆದುಕೊಂಡಿದೆ.

ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ವ್ಯಾಪ್ತಿಯಲ್ಲಿರುವ ಈ ಕಟಾರ ದಲ್ಲಿ ಮೋಜು ಮಜಾ ನಡೆಸಲು ಬರುವ ಯುವಕರಿಗೆ ಇದೀಗ ಭಯ ಹುಟ್ಟಿಸುವ ತಾಣವಾಗಿದೆ.

ಕಟಾರ ಪ್ರದೇಶ ವಿಸ್ತಾರವಾಗಿದ್ದು, ಒಂದು ಭಾಗ ನರಿಮೊಗರು ಗ್ರಾಂ ಪಂಚಾಯಿತಿಗೆ ಸೇರಿದೆ. ಪುರುಷರಕಟ್ಟೆಯಿಂದ ಈ ಕಟಾರಕ್ಕೆ ನೇರ ದಾರಿ ಇದೆ. ಇನ್ನೊಂದು ಭಾಗ ಕೋಡಿಂಬಾಡಿ ಗ್ರಾಮಪಂಚಾಯಿತಿಗೆ ಸೇರಿದೆ. ದಾರಂದಕುಕ್ಕುನಿಂದ ಈ ಕಟಾರಕ್ಕೆ ಹೋಗಲು ಅಚ್ಚುಕಟ್ಟಾದ ರಸ್ತೆ ಇದೆ. ಪೇಟೆಯಿಂದ ದೂರವಾಗಿ ಸಂಪೂರ್ಣ ಪ್ರಕೃತಿ ಮಡಿಲು ಆಗಿರುವ ಈ ಪ್ರದೇಶ ಯುವಕ ಯುವತಿಯರ ಅನೈತಿಕ ಚಟುವಟಿಕೆಗೆ ಖ್ಯಾತಿ. ಹಲವಾರು ಬಾರಿ ಇಲ್ಲಿನ ಸ್ಥಳೀಯ ಮಂದಿ ಇಂತಹ ಯುವಕ ಯುವತಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೂ ಇಲ್ಲಿ ನಡೆದಿದೆ.
ಕಟಾರಕ್ಕೆ ಬರುತ್ತಿರುವ ಯುವಕರು ಗಾಂಜಾ, ಅಫೀಮು, ಮದ್ಯಪಾನ ನಡೆಸಿ ನೀರಿನ ಜೊತೆ ಆಟವಾಡುತ್ತಾರೆ ಎಂಬುವುದನ್ನು ಇಲ್ಲಿನ ಸ್ಥಳೀಯ ಜನತೆ ನೇರವಾಗಿ ಹೇಳುತ್ತಾರೆ. ನೀರಿಗೆ ಇಳಿಯಬೇಡಿ ಎಂದರೆ ’ನಕ್ಕು’ ಬಿಡುತ್ತಾರೆ ಎಂದೂ ಆರೋಪಿಸುತ್ತಾರೆ. ಕಾಲೇಜು ಹುಡುಗರು ಗುಂಪುಗುಂಪಾಗಿ ನೀರಲ್ಲಿ ಈಜಾಡಲು ಬರುತ್ತಾರೆ. ಅವರಿಗೆ ಎಷ್ಟು ಹೇಳಿದರೂ ಕೇಳುವುದಿಲ್ಲ. ಬೇರೆ ಯುವಕರೂ ಬರುತ್ತಾರೆ. ಕೆಲವರು ಮಧ್ಯಾಹ್ನ ಬಂದರೆ, ಇನ್ನು ಕೆಲವರ ಗುಂಪು ಸಂಜೆ ೫ ಗಂಟೆ ಹೊತ್ತಿಗೆ ಬಂದು ಮಜಾ ಮಾಡುತ್ತಾರೆ. ಇಲ್ಲಿ ಅಪಾಯ ಇದೆ ಎಂದರೂ ಅವರಿಗೆ ಅರ್ಥವಾಗುವುದಿಲ್ಲ ಎನ್ನುವುದು ಸ್ಥಳೀಯರ ನೋವು.

ಕಟಾರದಲ್ಲಿ ಹಲವು ಈಜಾಟದ ತಾಣಗಳಿವೆ. ಒಂದು ಕಡೆ ಮಾತ್ರ ಕೋಡಿಂಬಾಡಿ ಗ್ರಾಮಪಂಚಾಯಿತ್ ಅಪಾಯದ ’ಫಲಕ’ವೊಂದನ್ನು ಅಳವಡಿಸಿದೆ. ಆದರೆ ದುರ್ಘಟನೆಗಳು ಮಾತ್ರ ನಿಂತಿಲ್ಲ. ಕಳೆದ ಭಾನುವಾರ ಯುವಕನೊಬ್ಬ ಇದೇ ಕಟಾರದ ನೀರಲ್ಲಿ ಮುಳುಗಿ ಸಾವು ಕಂಡಿದ್ದಾನೆ.

ಅಪಾಯ ಇದೆ ಎಂದಾಗ ಯುವಕರು ಅರ್ಥ ಮಾಡಿಕೊಳ್ಳಬೇಕು. ಮೋಜು ನಡೆಸಲು ಬರುವ ಇಂತಹ ಯುವಕರಿಗೆ ಫಲಕ ಯಾವುದೇ ಪರಿಣಾಮ ಬೀರುತ್ತಿಲ್ಲ. ಇನ್ನು ಮುಂದೆ ಈ ಪ್ರದೇಶವನ್ನು ಸ್ನಾನ ನಿಷೇಧಿತ ಪ್ರದೇಶವಾಗಿ ಘೋಷಣೆ ಮಾಡುವ ಚಿಂತನೆ ನಮ್ಮಲ್ಲಿದೆ ಎಂಬುವುದು ಕೋಡಿಂಬಾಡಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಅವರ ಅಭಿಪ್ರಾಯ.
ಪಂಚಾಯಿತಿ ವತಿಯಿಂದ ಬಹಳಷ್ಟು ಜಾಗ್ರತೆ ವಹಿಸಲಾಗುತ್ತಿದೆ. ಆದರೂ ದುರ್ಘಟನೆಗಳು ನಿಲ್ಲುತ್ತಿಲ್ಲ. ಸ್ಥಳೀಯ ಯುವಕರು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ. ಬೇರೆ ಪ್ರದೇಶಗಳಿಂದ ಬಂದ ಯುವಕರು ಇಲ್ಲಿ ಬಂದು ದುರ್ಘಟನೆಗಳು ನಡೆಯುತ್ತಿದೆ. ಅಪಾಯದ ಫಲಕ ಅಳವಡಿಸಿದ್ದೇವೆ. ಜನರೂ ನಮ್ಮ ಜತೆ ಸಹಕರಿಸಿದರೆ ಇಲ್ಲಿನ ನಡೆಯುವ ಅಪಾಯ ತಪ್ಪಿಸಬಹುದು ಎನ್ನುತ್ತಾರೆ ಕೋಡಿಂಬಾಡಿ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ.
ಭಾನುವಾರ..ಮಂಗಳವಾರ.

ಇಲ್ಲಿ ನಡೆದ ಬಹುತೇಕ ದುರ್ಘಟನೆಗಳು ನಡೆದದ್ದು ಮಂಗಳವಾರ ಮತ್ತು ಭಾನುವಾರ. ಈ ದಿನಗಳಲ್ಲಿ ನೀರಿಗೆ ಇಳಿಯಬೇಡಿ ಎಂದು ಯುವಕರಿಗೆ ನಾವು ಹೇಳುತ್ತೇವೆ. ಆದರೂ ಬಂದವರು ಕೇಳುವುದಿಲ್ಲ. ಕಟಾರ ಪ್ರದೇಶದ ಯುವಕರು ಯಾರೂ ಇಲ್ಲಿ ಈಜಾಡಲು ಬರುವುದಿಲ್ಲ ಎನ್ನುವುದು ಸ್ಥಳೀಯರ ಮಾತು.

ಕಟಾರ ಎಷ್ಟು ಸುಂದರವೋ..ಅಷ್ಟೇ ಅಪಾಯಕಾರಿ..ಇಲ್ಲಿ ಕುಮಾರಾಧಾರ ನದಿಯ ನೀರು ನಿಂತು ಹರಿದಂತೆ ಭಾಸವಾಗುತ್ತದೆ. ಒಂದೆಡೆಯಿಂದ ಮರಳ ರಾಶಿ. ಇಲ್ಲಿ ಕುಳಿತು ಗಾಂಜಾ ಅಫೀಮು ಸೇವಿಸುವ ಯುವಕರು ನಂತರ ನೀರಾಟಕ್ಕೆ ಇಳಿಯುತ್ತಾರೆ. ಆಳವಾದ ’ಕಯ’ಗಳಿರುವ ಇಲ್ಲಿ ನೀರಾಟ ಆಡುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಪೊಲೀಸ್ ಇಲಾಖೆಯಿಂದಲೂ ಇಲ್ಲಿ ಎಚ್ಚರಿಕೆ ಫಲಕ ಅಳವಡಿಸಬೇಕು. ಬೀಟ್ ಪೊಲೀಸ್ ಸಿಬ್ಬಂದಿ ಈ ಭಾಗದಲ್ಲಿ ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದು ಕೋಡಿಂಬಾಡಿ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಜಯಪ್ರಕಾಶ್ ಬದಿನಾರು ಹೇಳುತ್ತಾರೆ.

Related posts

Leave a Reply