Header Ads
Header Ads
Breaking News

ಪುತ್ತೂರು:ಮದ್ಯದ ನಶೆಯಲ್ಲಿ ಕಾರು ಚಲಾಯಿಸಿದ ಉದ್ಯಮಿ ಪುತ್ರ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು.

ಪುತ್ತೂರಿನ ಹೋಟೆಲ್ ಉದ್ಯಮಿಯೊಬ್ಬರ ಪುತ್ರ ಪಾನಮತ್ತನಾಗಿ ಕಾರು ಚಲಾಯಿಸಿಕೊಂಡು ಹೋಗಿ ಕಾರನ್ನು ರಸ್ತೆ ಬದಿಯ ಹೊಂಡಕ್ಕೆ ಹಾಕಿದ ಮತ್ತು ಈ ವೇಳೆ ಅಪಾಯವರಿತು ತಪ್ಪಿಸಿಕೊಳ್ಳಲು ಯತ್ನಿಸಿದ ಪಾದಾಚಾರಿ ಯುವತಿಯೊಬ್ಬಳು ಕಾರಿನಡಿಗೆ ಸಿಲುಕಿ ಗಾಯಗೊಂಡ ಘಟನೆ ಪುತ್ತೂರು ನಗರದ ಎಪಿಎಂಸಿ- ನೆಲ್ಲಿಕಟ್ಟೆ ಸಂಪರ್ಕ ರಸ್ತೆಯಲ್ಲಿ ಭಾನುವಾರ ನಡೆದಿದೆ. ಪುತ್ತೂರಿನ ಖ್ಯಾತ ಹೋಟೆಲ್ ಉದ್ಯಮಿಯೊಬ್ಬರ ಪುತ್ರನಾದ ಸಾಗರ್ ಹೊಳ್ಳ ಮದ್ಯದ ನಶೆಯಲ್ಲಿ ರದ್ಧಾಂತ ಸೃಷ್ಠಿಸಿದ ಯುವಕ. ಪಾನಮತ್ತನಾಗಿ ಮದ್ಯದ ನಶೆಯಲ್ಲಿದ್ದ ಸಾಗರ್ ಅವರು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಕಡೆಯಿಂದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಎಪಿಎಂಸಿ ಸಂಪರ್ಕ ರಸ್ತೆಯಲ್ಲಿ ನಗರಸಭಾ ಸದಸ್ಯ ಶಕ್ತಿ ಸಿನ್ಹಾ ಅವರ ಮನೆಯ ಸಮೀಪ ಅಳವಡಿಸಲಾಗಿರುವ ಹಂಪ್ಸ್ ಬಳಿ ಹತೋಟಿ ತಪ್ಪಿದ ಕಾರು ಯದ್ವಾತದ್ವ ಮುಂದುವರಿದು ರಸ್ತೆ ಬದಿಯ ಚರಂಡಿಗೆ ಹೋಗಿ ಬಿದ್ದಿದೆ. ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೂತ್ರಬೆಟ್ಟು ಪರಿಸರದ ಯುವತಿ ಪ್ರಿಯಾ ಎಂಬವರು ಕಾರು ಚಾಲಕ ಯದ್ವಾತದ್ವವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದುದ್ದನ್ನು ಗಮನಿಸಿ ತಪ್ಪಿಸಿಕೊಳ್ಳುವ ಭರದಲ್ಲಿ ರಸ್ತೆ ಬದಿಯ ಸರಿದಿದ್ದು, ಈ ವೇಳೆ ಕಾರು ರಸ್ತೆ ಬದಿಯಲ್ಲೇ ಬಂದು ಚರಂಡಿಗೆ ಬಿದ್ದ ಪರಿಣಾಮವಾಗಿ ಆಕೆ ಅದರಡಿ ಸಿಲುಕಿಕೊಂಡು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಘಟನೆ ನಡೆದ ಭಾಗದಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಚರಂಡಿ ಬದಿಯ ತಡೆಗೋಡೆಗಾಗಿ ಅಳವಡಿಸಲಾಗಿದ್ದ ಕಬ್ಬಿಣದ ರಾಡ್ ಪ್ರಿಯಾ ಅವರಿಗೆ ತಾಗಿ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.ಘಟನೆ ನಡೆದ ವೇಳೆ ಸ್ಥಳೀಯರು ಸೇರಿ ಗಾಯಾಳು ಯುವತಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಿದ್ದಾರೆ. ಘಟನೆ ನಡೆದ ಬಳಿಕ ಮದ್ಯದ ನಶೆಯಲ್ಲಿದ್ದ ಸಾಗರ್ ರಸ್ತೆಯಲ್ಲಿ ಬಿದ್ದುಕೊಂಡು, ಅಲ್ಲಿ ಸೇರಿದ್ದ ಮಂದಿಯ ಜತೆ ವಿಚಿತ್ರವಾಗಿ ವರ್ತಿಸುತ್ತ ರದ್ಧಾಂತ ಸೃಷ್ಟಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.

Related posts

Leave a Reply