Header Ads
Header Ads
Breaking News

ಪುತ್ತೂರು:ವಿದ್ಯಾಮಾತಾ ಫೌಂಡೇಶನ್ ಕಚೇರಿಯಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಆನ್‌ಲೈನ್ ಸಂದರ್ಶನ ಕಾರ್ಯಕ್ರಮ

ಸಮಾಜಸೇವಾ ಗುರಿಯೊಂದಿಗೆ ಕಾರ್ಯಾಚರಿಸುತ್ತಿರುವ ಪುತ್ತೂರಿನ ವಿದ್ಯಾಮಾತಾ ಫೌಂಡೇಶನ್ ಕಚೇರಿಯಲ್ಲಿ ಸೋಮವಾರ ಗ್ರಾಮೀಣ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಕಂಪೆನಿಗಳ ಎಚ್. ಆರ್. ಗಳ ಜೊತೆ ಪ್ರಥಮ ಹಂತದ ಆನ್‌ಲೈನ್ ಸಂದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ೧೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು.

ಕಾರ್ಯಕ್ರಮದ ಕುರಿತು ವಿವರಿಸಿದ ವಿದ್ಯಾಮಾತಾ ಫೌಂಡೇಶನ್‌ನ ಅಧ್ಯಕ್ಷ ಭಾಗ್ಯೇಶ್ ರೈ, ಗ್ರಾಮೀಣ ಪ್ರದೇಶದ ವಿವಿಧ ಪದವೀಧರ ಉದ್ಯೋಗಾಕಾಂಕ್ಷಿಗಳು ಮಹಾನಗರಗಳಲ್ಲಿನ ಕಂಪೆನಿಗಳಲ್ಲಿ ಕೆಲಸ ಪಡೆಯಲು ಸಂದರ್ಶನಕ್ಕೆ ತೆರಳುವ ಸಂದರ್ಭ ಗೊಂದಲಕ್ಕೆ ಒಳಗಾಗುತ್ತಾರೆ. ಈ ಕಾರಣಕ್ಕಾಗಿ ತಮ್ಮ ಸಂಸ್ಥೆಯು ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಪುತ್ತೂರಿನ ಕಚೇರಿಯಲ್ಲಿ ವಿವಿಧ ಕಂಪೆನಿಗಳ ಎಚ್. ಆರ್. ಗಳೊಂದಿಗೆ ಪ್ರಥಮ ಸುತ್ತಿನ ಆನ್‌ಲೈನ್ ಸಂದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕಂಪೆನಿಗಳ ಕೇಂದ್ರ ಸ್ಥಾನದಲ್ಲಿ ನಡೆಯುವ ಅಂತಿಮ ಸಂದರ್ಶನವನ್ನು ಎದುರಿಸಲು ಮಾನಸಿಕವಾಗಿ ಸಿದ್ದರಾಗುತ್ತಾರೆ ಎಂದರು. ಮುಂದೆ ಅಂತಿಮ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಸಂವಹನ ತರಬೇತಿಯನ್ನು ಸಂಸ್ಥೆಯ ವತಿಯಿಂದ ನಡೆಸಲಾಗುವುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಯುವ ಉದ್ಯೋಗಾಕಾಂಕ್ಷಿಗಳು ಆರಂಭಿಕ ಹಂತದಲ್ಲಿ ಹೆಚ್ಚಿನ ವೇತನವನ್ನು ನಿರೀಕ್ಷೆ ಮಾಡದೆ ಕೆಲಸಕ್ಕೆ ಸೇರಿ ಕಷ್ಟ ಪಟ್ಟು ಅನುಭವ ಪಡೆಯುವ ಮೂಲಕ ಮುಂದೆ ಉನ್ನತ ಹುದ್ದೆಗೆ ತೆರಳಲು ಮಾನಸಿಕ ತಯಾರಿ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಉತ್ತಮ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು. ಬಳಿಕ ಶಂಕುತಳಾ ಶೆಟ್ಟಿ ಅವರು 5ಕಂಪೆನಿಗಳ ಎಚ್. ಆರ್. ಗಳೊಂದಿಗೆ ಆನ್‌ಲೈನ್ ಸಂವಹನ ನಡೆಸಿ ಸಾಂಕೇತಿಕವಾಗಿ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಶ್ಯಾಂ ಸುಂದರ್ ರೈ, ದಿನೇಶ್ ಪಿ. ವಿ., ಜಾನ್ ಸಿರೀಲ್, ಗಂಗಾಧರ ಶೆಟ್ಟಿ, ಮನಮೋಹನ ರೈ ಹಾಗೂ ವಿದ್ಯಾಮಾತಾ ಸಂಸ್ಥೆಯ ಸಿಬಂದಿಗಳು ಉಪಸ್ಥಿತರಿದ್ದರು.

Related posts

Leave a Reply